ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿರಿಸಿದ್ದೇ 'ಕೈ' ಸರ್ಕಾರದ 4 ತಿಂಗಳ ಮಹಾನ್ ಸಾಧನೆ: ಬಿಜೆಪಿ
ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿರಿಸಿದ್ದೇ 4 ತಿಂಗಳ "ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮಹಾನ್ ಸಾಧನೆ ಎಂದು ಬಿಜೆಪಿ ಟೀಕೆ ಮಾಡಿದೆ.

ಬೆಂಗಳೂರು: ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿರಿಸಿದ್ದೇ 4 ತಿಂಗಳ "ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮಹಾನ್ ಸಾಧನೆ ಎಂದು ಬಿಜೆಪಿ ಟೀಕೆ ಮಾಡಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್‌ನ ನಾಲ್ಕು ತಿಂಗಳ ಕಳಪೆ ಆಡಳಿತದಲ್ಲಿ ಕರ್ನಾಟಕದಲ್ಲಿ ದಾಖಲೆ ಬಂದ್‌ಗಳು ನಡೆದಿವೆ ಎಂದು ಹೇಳಿ, ರಾಜ್ಯದಲ್ಲಿ ನಡೆದಿರುವ ಬಂದ್ ಗಳನ್ನು ಪಟ್ಟಿ ಮಾಡಿದೆ.
ವಿದ್ಯುತ್ ದರ ಏರಿಕೆಯನ್ನು ಪ್ರತಿಭಟಿಸಿ, ಕೈಗಾರಿಕೋದ್ಯಮಿಗಳಿಂದ ಕೈಗಾರಿಕೆಗಳ ಬಂದ್, ಸ್ಟಾಲಿನ್ ಮುಲಾಜಿಗೆ ಬೇಕಾಬಿಟ್ಟಿ ನೀರು ಹರಿಸಿದ ಪರಿಣಾಮ, ಮಂಡ್ಯ ಬಂದ್ - ಬೆಂಗಳೂರು ಬಂದ್ - ಕರ್ನಾಟಕ ಬಂದ್, ಸರ್ಕಾರದ ನಿರ್ಲಕ್ಷ್ಯ ಮಿತಿಮೀರಿ ಖಾಸಗಿ ಬಸ್, ಕ್ಯಾಬ್, ಆಟೋ ಚಾಲಕ- ಮಾಲೀಕರಿಂದ ಖಾಸಗಿ ಸಾರಿಗೆ ಬಂದ್, ಚುನಾವಣೆಗೆ ಮುನ್ನ ಹೇಳಿದ್ದ ಬೊಗಳೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಂದ ಸಾರಿಗೆ ಬಂದ್, ಅಂಗನವಾಡಿ ಸಿಬ್ಬಂದಿಗಳ ವೇತನ ವಂಚಿಸಿದ ಸರ್ಕಾರದ ವಿರುದ್ಧ ಎಲ್ಲಾ ಅಂಗನವಾಡಿಗಳು ಬಂದ್, ಭದ್ರಾ ನೀರು ಪೂರೈಕೆಯ ವೈಫಲ್ಯವನ್ನು ಖಂಡಿಸಿ ದಾವಣಗೆರೆ ಬಂದ್ ಆಗಿದ್ದವು ಎಂದು ಹೇಳಿದೆ.
ರಾಜ್ಯದ ಅಭಿವೃದ್ಧಿಯಂತೂ ಈಗಾಗಲೇ ಬಂದ್ ಮಾಡಿರುವ ಕಾಂಗ್ರೆಸ್ ಸರ್ಕಾರ, ತಾವು ಅಧಿಕಾರಕ್ಕೆ ಬಂದಿರುವುದೇ ಬಂದ್ ಮಾಡಿಸಲು ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದೆ ಎಂದು ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ ಅವರೇ, ನಿಮ್ಮ ಬೇಜವಾಬ್ದಾರಿಯ ಆಡಳಿತಕ್ಕೆ ರೋಸಿ ಹೋಗಿ ರಾಜ್ಯದ ರೈತರು ಬೀದಿಗಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ನಿಮ್ಮ ದುರಾಡಳಿತಕ್ಕೆ ಬೇಸತ್ತು 150ಕ್ಕೂ ಹೆಚ್ಚು ರೈತರು ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಗ್ಯಾರಂಟಿ ಯೋಜನೆಗಳ ಅವಾಸ್ತವಿಕ ಅನುಷ್ಠಾನದಿಂದ ಜನರು ಬೇಸತ್ತು ಹೋಗಿದ್ದಾರೆ. ಜತೆಗೆ ಈ ಹಿಂದಿನ ಎಲ್ಲಾ ಯೋಜನೆಗಳಿಗೂ ತಿಲಾಂಜಲಿ ಇಟ್ಟು ಜನರನ್ನು ಮೂರ್ಖರನ್ನಾಗಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ಕಾವೇರಿ ಮಾತ್ರವಲ್ಲ, ಭದ್ರಾ ನದಿ ನಂಬಿದವರನ್ನೂ ನಿರ್ನಾಮ ಮಾಡಲು ಸಿದ್ದರಾಮಯ್ಯ ಸರ್ಕಾರ ಕಟಿಬದ್ಧವಾಗಿ ನಿಂತಿದೆ. ಭದ್ರಾ ಕಾಲುವೆಗಳಿಗೆ ಮೂವತ್ತೇ ದಿನಗಳಲ್ಲಿ ನೀರು ನಿಲ್ಲಿಸಿ ಮಧ್ಯ ಕರ್ನಾಟಕ ಭಾಗದಲ್ಲಿ ಕ್ಷಾಮ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ತಮ್ಮ INDIA ಮೈತ್ರಿಕೂಟಕ್ಕೆ ರೈತರು ಸೊಪ್ಪು ಹಾಕುತ್ತಿಲ್ಲ ಎಂಬ ಕಾರಣಕ್ಕಾಗಿ ಈ ರೀತಿ ರೈತರ ಮೇಲೆ ದ್ವೇಷ ಕಾರುವುದು ಅಕ್ಷಮ್ಯ. ಮಳೆಯಿಲ್ಲದೆ ಈಗಾಗಲೇ ಸೊರಗಿರುವ ರೈತರ ಸರ್ವನಾಶವೇ ಈ ಅಸಮರ್ಥ ಸರ್ಕಾರದ ಧ್ಯೇಯ.
ಕರ್ನಾಟಕಕ್ಕಿದ್ದ 'ಪವರ್ ಸರ್‌ಪ್ಲಸ್ ಸ್ಟೇಟ್' ಹೆಗ್ಗಳಿಕೆಯನ್ನು ಕಳಚಿ ಕತ್ತಲು ರಾಜ್ಯವನ್ನಾಗಿಸುತ್ತಿರುವುದೇ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ. ಮುಂಗಾರು ಕೈಕೊಟ್ಟು ಬರಗಾಲ ಆವರಿಸಿದೆ, ಜಲಾಶಯಗಳಲ್ಲಿ ನೀರಿಲ್ಲ, ವಿದ್ಯುತ್ ಉತ್ಪಾದನೆ ಪ್ರಮಾಣ ಸಂಪೂರ್ಣ ಕುಸಿತ ಕಂಡಿದೆ. ಇದರ ನಡುವೆ ವಿಪರೀತ ವಿದ್ಯುತ್ ದರ ಏರಿಕೆಗೆ ಬೇಸತ್ತಿದ್ದ ಕೃಷಿ, ಕೈಗಾರಿಕೆಗಳು ಇದೀಗ ಲೋಡ್ ಶೆಡ್ಡಿಂಗ್‌ನಿಂದ ತತ್ತರಿಸಿ ಹೋಗಲಿವೆ. ಒಂದು ಕಡೆ ಬರಗಾಲ ನಿರ್ವಹಣೆಯನ್ನೂ ಮಾಡುತ್ತಿಲ್ಲ. ತಮಿಳುನಾಡಿಗೆ ನೀರು ಹರಿಸುವುದನ್ನು ಬಿಡುತ್ತಿಲ್ಲ. ವಿದ್ಯುತ್ ಸಮಸ್ಯೆಗೆ ಪರಿಹಾರವನ್ನೂ ಕೈಗೊಳ್ಳುತ್ತಿಲ್ಲ. ಕರ್ನಾಟಕವನ್ನು ಹಾಳು ಮಾಡುವುದೊಂದೇ ಸಿದ್ದರಾಮಯ್ಯ ಅವರ ಸರ್ಕಾರದ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದೆ.
ನಮ್ಮ ಸರ್ಕಾರ ರಚನೆಯಾಗಿದ್ದು ಜನರಿಂದಲೇ ಹೊರತು ಆಪರೇಷನ್ ನಿಂದ ಅಲ್ಲ: ಕಾಂಗ್ರೆಸ್
ಈ ನಡುವೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿ, ನಮ್ಮ ಸರ್ಕಾರ ರಚನೆಯಾಗಿದ್ದು ಜನರಿಂದಲೇ ಹೊರತು ಆಪರೇಷನ್ ನಿಂದ ಅಲ್ಲ ಎಂದು ಹೇಳಿದೆ.
ನಮ್ಮ ಸರ್ಕಾರ ರಚನೆಯಾಗಿದ್ದು ಜನರಿಂದಲೇ ಹೊರತು ಆಪರೇಷನ್ ನಿಂದ ಅಲ್ಲ, ಜನರಿಂದ ಆಯ್ಕೆಯಾದ ನಮ್ಮ ಸರ್ಕಾರ ಜನರಿಗಾಗಿಯೇ ಕೆಲಸ ಮಾಡಲಿದೆ. ಜನರ ಸಮಸ್ಯೆ ಆಲಿಸಿ, ಪರಿಹರಿಸಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲಾ ಮಟ್ಟದಲ್ಲಿ “ಜನತಾ ದರ್ಶನ” ಮಾಡಲಿದ್ದಾರೆ. ಹಾಗೂ ಜಿಲ್ಲಾಧಿಕಾರಿಗಳು ಪ್ರತಿ 15 ದಿನಕ್ಕೊಮ್ಮೆ ತಾಲೂಕು ಕೇಂದ್ರಗಳಲ್ಲಿ ಜನತಾ ದರ್ಶನ ಮಾಡಲಿದ್ದಾರೆ. ಆಡಳಿತವನ್ನು ಜನರ ಬಳಿಯೇ ತೆಗೆದುಕೊಂಡು ಹೋಗಿ ಸ್ಪಂದಿಸುವುದು ನಮ್ಮ ಸರ್ಕಾರದ ಧ್ಯೇಯ ಎಂದು ತಿಳಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ ಸಮಾಜದಲ್ಲಿ ಕಡೆಗಣನೆಗೆ ಒಳಗಾದ ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು, ಆರ್ಥಿಕ ಸ್ವಾವಲಂಬನೆ ಸಾಧಿಸಲು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ನೆರವಾಗಲು ಲಿಂಗತ್ವ ಅಲ್ಪಸಂಖ್ಯಾತ ಕಲ್ಯಾಣ ಮಂಡಳಿ ಸ್ಥಾಪನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕ್ರಮ ಕೈಗೊಳ್ಳಲಿದ್ದಾರೆ. ಸಮಾಜದ ಎಲ್ಲಾ ಸ್ಥರದ ಜನರ ಬದುಕನ್ನು ಹಸನಾಗಿಸುವುದು ಕಾಂಗ್ರೆಸ್ ಸರ್ಕಾರದ ಗುರಿ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


