ಎಕ್ಸ್‌ಪ್ರೆಸ್‌ವೇ ಸಾವಿರಾರು ಜನರ ಜೀವನೋಪಾಯವನ್ನು ಕಸಿದುಕೊಳ್ಳಲಿದೆ: ಹೆಚ್'ಡಿ ಕುಮಾರಸ್ವಾಮಿ
ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಭಾಗದ ನಿವಾಸಿಗಳಿಗೆ ಅನುಕೂಲವಾಗದ ರೀತಿಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಭಾಗದ ನಿವಾಸಿಗಳಿಗೆ ಅನುಕೂಲವಾಗದ ರೀತಿಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಇದು ಅತ್ಯಂತ ಮುಖ್ಯ ವಿಷಯ. ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ಹರದಾರಿ? ಎನ್ನುವುದು ನನ್ನ ಪ್ರಶ್ನೆ. ರಾಮನಗರ, ಮಂಡ್ಯ ಜಿಲ್ಲೆಗಳ ಜನರಿಗೆ, ಅದರಲ್ಲೂ ಬೆಂಗಳೂರು-ಮೈಸೂರು ನಡುವೆ ಆ ಹೆದ್ದಾರಿ ಉದ್ದಕ್ಕೂ ಜೀವಿಸುತ್ತಿರುವ ಜನರಿಗೆ ಇದರಿಂದ ನಯಾಪೈಸೆ ಉಪಯೋಗ ಇದೆಯಾ? ಇಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಸ್ಥಳೀಯರಿಗೆ ದಶಪಥದಿಂದ ಉಪಯೋಗ ಇದೆಯಾ ಎಂದು ಇನ್ನೂ ಒಳಹೊಕ್ಕು ಲೆಕ್ಕ ಹಾಕಿದರೆ, ಉತ್ತರ ದೊಡ್ಡ ಸೊನ್ನೆ. ಕೇವಲ ಬೆಂಗಳೂರಿನಿಂದ ಮೈಸೂರಿಗೆ ಶರವೇಗದಲ್ಲಿ ನೇರವಾಗಿ ಸಂಚರಿಸುವವರಿಗೆ ಮಾತ್ರ ಲಾಭ. ಹಾಗಾದರೆ, ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣದವರಿಗೆ ಉಪಯೋಗ ಇದೆಯಾ? ಎಳ್ಳಷ್ಟೂ ಇಲ್ಲ. ಈ ಸತ್ಯವನ್ನು ನಾವೆಲ್ಲರೂ ಅರಿಯಬೇಕಿದೆ.
ಕೆಲವರ ಪಾಲಿಗೆ ದೊಡ್ಡ ಎಟಿಎಂ ಆಗಿಬಿಟ್ಟ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿಯ ಅಸಲಿ ಅಂಶಗಳನ್ನು ಪಟ್ಟಿ ಮಾಡಿದರೆ ಕನ್ನಡಿಗರಿಗೆ ನಿರಾಶೆ, ನೋವು, ಹತಾಶೆ ಖಂಡಿತಾ. ಹಾಗಾದರೆ; ಕೆಳಗಿನ ಅಂಶಗಳನ್ನು ಗಮನಿಸೋಣ.
ಈ ದಶಪಥ ಹೆದ್ದಾರಿಯ ಮಾರಣಾಂತಿಕ ಹೊಡೆತ ಮೊದಲು ಬಿದ್ದಿರುವುದು ಮಂಡ್ಯ ಜಿಲ್ಲೆ ಜನರಿಗೆ. ಆರ್ಥಿಕವಾಗಿ, ಸಾಮಾಜಿಕವಾಗಿ ಈ ಜಿಲ್ಲೆಯನ್ನು ಮುಗಿಸುವುದೇ ದಶಪಥ ಹೆದ್ದಾರಿಯ ದುರುದ್ದೇಶವಾ? ಜಿಲ್ಲೆಯ ಆರ್ಥಿಕ ಸರಪಳಿಗೆ ಕುಣಿಕೆ ಬಿಗಿಯುವುದೇ ಇದರ ಒಳ ಉದ್ದೇಶವಾ? ಎನ್ನುವುದು ನನ್ನ ಅನುಮಾನ ಎಂದು ಪ್ರಶ್ನಿಸಿದ್ದಾರೆ.
ಮಧ್ಯಮ, ಸಣ್ಣಗಾತ್ರದ ಹೊಟೇಲು, ಸಣ್ಣ-ಅತಿಸಣ್ಣ ಉದ್ದಿಮೆ, ಕಬ್ಬುಬೆಲ್ಲ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ಸುಮಾರು 2600ಕ್ಕೂ ಹೆಚ್ಚು ಸ್ಥಳೀಯ ಉದ್ಯಮ ನೆಲಕಚ್ಚಿವೆ. ಎಳನೀರು ವ್ಯಾಪಾರಕ್ಕೆ ಎಳ್ಳುನೀರು ಬಿಡಲಾಗಿದೆ. 6000ಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಹೊಡೆತ ಬಿದ್ದು, ಅವರ ಬದುಕಿನ ಮೇಲೆ ಹೆದ್ದಾರಿ ಹೆಮ್ಮಾರಿ ಬಂದು ಕೂತಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


