ಕೊಳ್ಳೇಗಾಲ: ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಂಜುಂಡಸ್ವಾಮಿ ಕಾಂಗ್ರೆಸ್ ಸೇರಲು ಮೂಹೂರ್ತ ಫಿಕ್ಸ್
'ಐದಾರು ತಿಂಗಳಿಂದ ಬಿಜೆಪಿಯಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಮುಜುಗರದ ವಾತಾವರಣ ನಿರ್ಮಾಣವಾಗಿದ್ದು, ಮಾನಸಿಕವಾಗಿ ತುಂಬಾ ನೋವಾಗಿದೆ.

ಚಾಮರಾಜನಗರ: ಕೊಳ್ಳೇಗಾಲದ ಮುಖಂಡ, ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ನಗರದಲ್ಲಿ ಸೋಮವಾರ ಬೆಂಬಲಿಗರೊಂದಿಗೆ ಸುದ್ದಿಗೋಷ್ಠಿ ನಡೆಸಿದ ನಂಜುಂಡಸ್ವಾಮಿ, 'ಐದಾರು ತಿಂಗಳಿಂದ ಬಿಜೆಪಿಯಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಮುಜುಗರದ ವಾತಾವರಣ ನಿರ್ಮಾಣವಾಗಿದ್ದು, ಮಾನಸಿಕವಾಗಿ ತುಂಬಾ ನೋವಾಗಿದೆ. ನನ್ನ ಬೆಂಬಲಿಗರಿಗೂ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪಕ್ಷ ತೊರೆಯುವ ತೀರ್ಮಾನಕ್ಕೆ ಬಂದಿದ್ದೇನೆ. ಭಾನುವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಲ್ಲಿಸಿದ್ದೇನೆ' ಎಂದರು.
'ನಾನು 33 ವರ್ಷಗಳಿಂದ ಸ್ವಾಭಿಮಾನಿಯಾಗಿ, ಪ್ರಾಮಾಣಿಕವಾಗಿ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ನನಗಾಗಿರುವ ನೋವನ್ನು ಬಿಜೆಪಿಯ ಜಿಲ್ಲಾ ಘಟಕದ ಮುಖಂಡರು ಹಾಗೂ ರಾಜ್ಯದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಆದರೆ, ಯಾರೂ ಈ ಬಗ್ಗೆ ಗಮನಹರಿಸಲಿಲ್ಲ' ಎಂದು ದೂರಿದ್ದಾರೆ.
ಇಷ್ಟಾದರೂ ಬಿಜೆಪಿ ನಾಯಕರು, ಸೌಜನ್ಯಕ್ಕೂ ಜಿಎನ್‌ಎನ್ ಅವರನ್ನು ಸಂಪರ್ಕಿಸಿ ಪಕ್ಷದಲ್ಲಿ ಉಳಿಸಿಕೊಳ್ಳುವ ಸಮಪರ್ಕವಾದ ಪ್ರಯತ್ನ ಮಾಡಿಲ್ಲ. ಇದಕ್ಕೆ ಪೂರಕವೆಂಬಂತೆ ಶನಿವಾರ ಸಂತೇಮರಹಳ್ಳಿ ಐಬಿಯಲ್ಲಿ ಯಳಂದೂರಿನ ಬೆಂಬಲಿಗರ ಸಭೆ ನಡೆಸಿರುವ ಜಿ.ಎನ್.ನಂಜುಂಡಸ್ವಾಮಿ, ಕ್ಷೇತ್ರದ ಶಾಸಕ ಎನ್.ಮಹೇಶ್ ಹಾಗೂ ಬಿಜೆಪಿ ರಾಜ್ಯ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ.
ಜಿ.ಎನ್.ನಂಜುಂಡಸ್ವಾಮಿ ಅವರು ಮೂಲತಃ ಬಿಜೆಪಿಯಿಂದ ರಾಜಕೀಯ ಆರಂಭಿಸಿದವರು. 1994ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಕಾಂಗ್ರೆಸ್ ಸೇರಿ 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ್ಯಂತ ಉತ್ತಮ ಆಡಳಿತ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


