ಕಾಂಗ್ರೆಸ್ ಸರ್ಕಾರದಲ್ಲಿ ಅಸಮಾಧಾನ ಸ್ಫೋಟ: ಸಚಿವರ ಮೇಲೆ ಶಾಸಕರ ಅತೃಪ್ತಿ? ಜುಲೈ 27ಕ್ಕೆ ಸಿಎಂ ಅಧ್ಯಕ್ಷತೆಯಲ್ಲಿ ಸಿಎಲ್ಪಿ ಸಭೆ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೆಲವೇ ತಿಂಗಳುಗಳು ಕಳೆದಿದ್ದು, ಈ ನಡುವಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೆಲವೇ ತಿಂಗಳುಗಳು ಕಳೆದಿದ್ದು, ಈ ನಡುವಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಸಚಿವರು ದುರ್ನಡತೆ ತೋರುತ್ತಿದ್ದು, ಬುದ್ದಿ ಹೇಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರು ದೂರು ನೀಡಿದ್ದಾರೆ. ಅಲ್ಲದೆ, ಕೂಡಲೇ ಶಾಸಕಾಂಗ ಸಭೆ ಕರೆಯುವಂತೆಯೂ ಆಗ್ರಹಿಸಿದ್ದಾರೆ.
ಕಳೆದ ಶಾಸಕಾಂಗ ಸಭೆಯಲ್ಲೇ ಅಸಮಾಧಾನ ಸ್ಫೋಟಗೊಂಡಿತ್ತು. ಸಚಿವರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಶಾಸಕಾಂಗ ಸಭೆಯಲ್ಲೇ ಬೇಸರ ಹೊರಹಾಕಿದ್ದ ಶಾಸಕರು, ಇದೀಗ ಸಚಿವರ ವರ್ತನೆ ಬದಲಾಗದ ಹಿನ್ನೆಲೆಯಲ್ಲಿ ನೇರವಾಗಿ ಸಿಎಂಗೆ ದೂರು ನೀಡಿದ್ದಾರೆ.
ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಪತ್ರ ಬರೆದು ಶಾಸಕಾಂಗ ಸಭೆಗೆ ಆಗ್ರಹಿಸಲಾಗಿದೆ. 20ಕ್ಕೂ ಹೆಚ್ಚು ಹಿರಿಯ ಶಾಸಕರು ಪತ್ರಕ್ಕೆ ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆಂದು ತಿಳಿದುಬಂದಿದೆ.
ಶಾಸಕರ ಪತ್ರಕ್ಕೆ ಶಾಕ್ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರ ಅಹವಾಲು ಆಲಿಸಲು ಜುಲೈ.27ರಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯನ್ನು ಕರೆದಿದ್ದಾರೆ.
ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಹಾಗೂ ಸಿಎಲ್ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್ಪಿ ಸಭೆ ನಡೆಯಲಿದ್ದು, ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸಭಾನಾಯಕ ಎನ್.ಎಸ್. ಬೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷರು ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.
ಶಾಸಕರ ಅಹವಾಲು ಜೊತೆಗೆ ಈಗಾಗಲೇ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳ ಪರಾಮರ್ಶೆ, ನಿಗಮ– ಮಂಡಳಿ, ಪ್ರಾಧಿಕಾರಗಳಿಗೆ ನೇಮಕ, ವಿಧಾನಸಭೆ ಅಧಿವೇಶನದಲ್ಲಿ ನಡೆದ ಚರ್ಚೆ, ಪಕ್ಷದ ವಿರುದ್ಧದ ಬಿಜೆಪಿ– ಜೆಡಿಎಸ್ ಜಂಟಿ ಹೋರಾಟವನ್ನು ಎದುರಿಸಲು ರೂಪಿಸಬೇಕಾದ ಕಾರ್ಯತಂತ್ರ, ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಮುಂತಾದ ವಿಷಯಗಳ ಕುರಿತಂತೆಯೂ ಸಭೆಯಲ್ಲಿ ಚರ್ಚೆಗೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದೇ 19ರಂದು ಸಂಜೆ 6.30ಕ್ಕೆ ಸಿಎಲ್ಪಿ ಸಭೆ ನಡೆಯಬೇಕಿತ್ತು. ಆದರೆ, ಅದೇ ದಿನ ಸಚಿವರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ ಎಂಬ ಕಾರಣಕ್ಕೆ ಸಿಎಲ್ಪಿ ಸಭೆಯನ್ನು ರದ್ದುಪಡಿಸಲಾಗಿತ್ತು.
ಇದೇ 17 ಮತ್ತು 18ರಂದು ನಗರದಲ್ಲಿ ನಡೆದ 26 ವಿರೋಧ ಪಕ್ಷಗಳ ಸಭೆಗೆ ಸೋನಿಯಾ ಗಾಂಧಿ ಜೊತೆ ಬಂದಿದ್ದ ರಾಹುಲ್, 18ರಂದು ರಾತ್ರಿಯೇ ದೆಹಲಿಗೆ ವಾಪಸಾಗಿದ್ದರು. ಹೀಗಾಗಿ, ಸಚಿವರ ಜೊತೆ ನಿಗದಿಯಾಗಿದ್ದ ಸಭೆಯೂ ರದ್ದಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


