ನನಗೆ ಲಂಚ ಕೊಡಲು ವಿಧಾನಸೌಧಕ್ಕೆ ಬರಬೇಕಿತ್ತೇ: ಸಚಿವ ಸಿ ಸಿ ಪಾಟೀಲ್; ಸಿಕ್ಕಿದ ಹಣದ ಸುತ್ತ ಅನುಮಾನದ ಹುತ್ತ, ಪ್ರತಿಪಕ್ಷಕ್ಕೆ ಅಸ್ತ್ರ!
ವಿಧಾನಸೌಧದ ಬಳಿ ಸಿಕ್ಕ ಹತ್ತೂವರೆ ಲಕ್ಷ ರೂಪಾಯಿ ಈಗ ರಾಜಕೀಯ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯ. ಹಣವನ್ನು ವಿಧಾನಸೌಧಕ್ಕೆ ತಂದಿರುವ ಕಾರಣವೇನು, ಲಂಚ ಕೊಡಲು ತಂದಿದ್ದೇ ಎಂಬ ಬಗ್ಗೆ ಹಲವು ಅನುಮಾನಗಳು ಎದ್ದಿವೆ.

ಬೆಂಗಳೂರು: ವಿಧಾನಸೌಧದ ಬಳಿ ಸಿಕ್ಕ ಹತ್ತೂವರೆ ಲಕ್ಷ ರೂಪಾಯಿ ಈಗ ರಾಜಕೀಯ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯ. ಹಣವನ್ನು ವಿಧಾನಸೌಧಕ್ಕೆ ತಂದಿರುವ ಕಾರಣವೇನು, ಲಂಚ ಕೊಡಲು ತಂದಿದ್ದೇ ಎಂಬ ಬಗ್ಗೆ ಹಲವು ಅನುಮಾನಗಳು ಎದ್ದಿವೆ.
ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಮಂಡ್ಯ ಮೂಲದ ಜಗದೀಶ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆದರೆ ಜಗದೀಶ್ ಈ ಬಗ್ಗೆ ಇದುವರೆಗೆ ಬಾಯ್ಬಿಟ್ಟಿಲ್ಲ. ಹೀಗಾಗಿ ಪೊಲೀಸರು ಜಗದೀಶ್ ನನ್ನು ನ್ಯಾಯಾಂಗ ಕಸ್ಟಡಿಗೆ ತೆಗೆದುಕೊಳ್ಳಲು ಮನವಿ ಮಾಡುವ ಸಾಧ್ಯತೆಯಿದೆ.
ನಡೆದ ಘಟನೆಯೇನು?: ವಿಧಾನಸೌಧದ ಪೂರ್ವ ದ್ವಾರದ ಬಳಿ ಭದ್ರತಾ ಸಿಬ್ಬಂದಿ ಹತ್ತೂವರೆ ಲಕ್ಷ ಹಣ ತೆಗೆದುಕೊಂಡು ಹೋಗುತ್ತಿದ್ದ ಅಸಿಸ್ಟೆಂಟ್ ಎಂಜಿನೀಯರ್ ಜಗದೀಶ್ ಬಂಧಿಸಲಾಗಿದೆ.
ಗೇಟ್ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಜಗದೀಶ್ ಬ್ಯಾಗ್ನಲ್ಲಿ ಹತ್ತೂವರೆ ಲಕ್ಷ ರೂಪಾಯಿ ಪತ್ತೆಯಾಗಿತ್ತು. ಇಷ್ಟೊಂದು ಹಣ ಎಲ್ಲಿಂದ ಬಂತು, ಎಲ್ಲಿಗೆ ತೆಗೆದುಕೊಂಡು ಹೋಗುತ್ತೀರಿ ಎಂದು ಪೊಲೀಸರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಜಗದೀಶ್ ನನ್ನು ಮತ್ತು ಹಣವನ್ನು ವಶಕ್ಕೆ ಪಡೆದು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಲೋಕೋಪಯೋಗಿ ಸಚಿವ ಪಾಟೀಲ್ ಗೆ ಹಣ ಸಂದಾಯ?: ಜಗದೀಶ್ ಇಷ್ಟೊಂದು ಹಣವನ್ನು ಲೋಕೋಪಯೋಗಿ ಖಾತೆ ಸಚಿವ ಸಿ ಸಿ ಪಾಟೀಲ್ ಅವರಿಗೆ ನೀಡಲು ತಂದಿದ್ದರೇ ಎಂಬ ಅನುಮಾನ ದಟ್ಟವಾಗಿದೆ. ಪಾಟೀಲ್ ಅವರಿಗೆ ಲಂಚದ ಮೊತ್ತವಾಗಿ ಸಂದಾಯ ಮಾಡಲು ಈ ಹಣ ತರಲಾಗಿತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ.
ಗುತ್ತಿಗೆದಾರರಿಗೆ ಹಣ ನೀಡಲು ತಂದಿದ್ದೆ ಎಂದು ಆರಂಭದಲ್ಲಿ ಹೇಳಿದ್ದ ಜಗದೀಶ್ ಈಗ ಹಣಕ್ಕೆ ಬೇರೆ ಕಥೆ ಹೇಳುತ್ತಿದ್ದಾರೆ. ಈ ಹಣದ ಹಿಂದೆ ಸಚಿವರ ಆಪ್ತ ಕಾರ್ಯದರ್ಶಿ ಹೆಸರು ಪ್ರಸ್ತಾಪ ಮಾಡಲಾಗಿದ್ದು, ಸತ್ಯ ಹೇಳದಂತೆ ಜಗದೀಶ್ ಮೇಲೆ ಒತ್ತಡ ತರಲಾಗ್ತಿದೆಯಾ, ಜಗದೀಶ್ ಸೇಫ್ ಮಾಡಲು ಪ್ರಯತ್ನಗಳು ನಡೆಯುತ್ತಿದೆಯಾ ಎಂಬ ಪ್ರಶ್ನೆ ಆರಂಭವಾಗಿದೆ.
ಈ ಪ್ರಕರಣ ಪೊಲೀಸರಿಗೆ ತಲೆ ನೋವಾಗಿದ್ದು, ತನಿಖೆ ಚುರುಕುಗೊಳಿಸಿ ಸತ್ಯ ಹೊರ ತೆಗೆಯಲು ಇಂದು ಕೋರ್ಟ್ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿರೋಧ ಪಕ್ಷಕ್ಕೆ ಪ್ರಮುಖ ಅಸ್ತ್ರ: ಹೇಳಿಕೇಳಿ ಈಗ ಕರ್ನಾಟಕದಲ್ಲಿ ಚುನಾವಣೆಯ ಪರ್ವ, ಆಡಳಿತ ಪಕ್ಷ ಏನೇ ಮಾಡಿದರೂ ಪ್ರತಿಪಕ್ಷಗಳು ಕಣ್ಣಿಟ್ಟು ಕಾಯುತ್ತಿರುತ್ತವೆ. ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ, ಭ್ರಷ್ಟಾಚಾರ, ಕಮಿಷನ್ ಗಳಿಂದಲೇ ನಡೆಯುತ್ತಿವೆ.
ಜಗದೀಶ್ ನಿನ್ನೆ ಸಂಜೆ 5.30 ಸುಮಾರಿಗೆ 10 ಲಕ್ಷದೊಂದಿಗೆ ವಿಧಾನಸೌಧಕ್ಕೆ ಬರುತ್ತಾರೆ. ಅದೇ ಸಮಯದಲ್ಲಿ ವಿಧಾನಸೌಧದಲ್ಲಿ ಸಚಿವ ಸಿಸಿ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿರುತ್ತಾರೆ. ಸಚಿವರ ಹೊರತಾಗಿ ವಿಧಾನಸೌಧದ ಕೆಲಸದ ಅವಧಿ ಮುಗಿದು ಬಹುತೇಕ ಖಾಲಿಯಾಗಿರುತ್ತದೆ. ಈ ಹಣಕ್ಕೂ, ಆ ಸಚಿವರಿಗೂ ಸಂಬಂಧವಿದೆಯೇ? ಸರ್ಕಾರ ರಹಸ್ಯ ಕಾಪಾಡುತ್ತಿರುವುದೇಕೆ ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ವಾಗ್ದಾಳಿ: ವಿಧಾನಸೌಧದ ಮೆಟ್ಟಿಲು, ಮೆಟ್ಟಿಲುಗಳಲ್ಲಿ ಲಂಚಕೋರತನ ತಾಂಡವವಾಡುತ್ತಿದೆ. ಸಚಿವರು ಕಮಿಷನ್ ಗಿರಿ ನಡೆಸುತ್ತಾರೆ. ಸ್ವತಃ ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚಕೋರತನ ತಾಂಡವವಾಡುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸಚಿವರ ನಿರಾಕರಣೆ: ಆದರೆ ಸಚಿವ ಸಿ ಸಿ ಪಾಟೀಲ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಲಂಚ ಕೊಡಲು ಹಣ ತಂದಿದ್ದರೆ ವಿಧಾನಸೌಧವೇ ಆಗಬೇಕೆ, ಬೇರೆ ಕಡೆ ನೀಡಬಹುದಿತ್ತಲ್ಲ, ವಿರೋಧ ಪಕ್ಷದವರ ಆರೋಪದಲ್ಲಿ ಹುರುಳಿಲ್ಲ, ಸತ್ಯಾಸತ್ಯತೆ ತನಿಖೆಯಿಂದ ಹೊರಬರಲಿದೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಆಡಳಿತ ಪಕ್ಷದವರು ಮಾತ್ರವಲ್ಲ ಇರುವುದು, ವಿರೋಧ ಪಕ್ಷದವರು ಕೂಡ ಇರುತ್ತಾರೆ, ಸಿದ್ದರಾಮಯ್ಯನವರಿಗೇ ಹಣ ಕೊಡಲು ಬಂದಿರಬಹುದಲ್ಲವೇ ಎಂದು ಕೇಳಿದ್ದಾರೆ. ಸೂಕ್ತ ದಾಖಲೆಗಳನ್ನು ಕೊಡಲಿ, ಇದರ ಹೊಣೆಯನ್ನು ನಾನೇಕೆ ಹೊರಲಿ ಎಂದು ಕೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


