100 ದಿನ ಕಳೆದರೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಒಂದೇ ಒಂದು ಸಭೆ ನಡೆಸಿಲ್ಲ: ಆಪ್ ಆರೋಪ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಕಳೆದರೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಒಂದೇ ಒಂದು ಸಾರ್ವಜನಿಕ ಸಭೆ ನಡೆಸಿಲ್ಲ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ಕರ್ನಾಟಕ...

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಕಳೆದರೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಒಂದೇ ಒಂದು ಅಧಿಕಾರಿಗಳ ಸಭೆ ನಡೆಸಿಲ್ಲ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ಕರ್ನಾಟಕ ಘಟಕ ಶುಕ್ರವಾರ ಆರೋಪಿಸಿದೆ.
ಸಾರ್ವಜನಿಕ ಉದ್ದಿಮೆಗಳ ಸಚಿವರು ಸಾರ್ವಜನಿಕರಿಗೆ ಅಥವಾ ಉದ್ಯಮಿಗಳಿಗೆ ಲಭ್ಯವಿಲ್ಲ ಎಂದು ಆರೋಪಿಸಿದ ಎಎಪಿ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಅವರು, ದರ್ಶನಾಪುರ ಹೆಸರಿಗೆ ಮಾತ್ರ ಸಚಿವರಾಗಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಹಿಂದಿನ ಸರ್ಕಾರ ಸಾರ್ವಜನಿಕ ಉದ್ದಿಮೆ ಖಾತೆಯನ್ನು ರದ್ದುಪಡಿಸಿದ್ದರೂ ಸಚಿವ ದರ್ಶನಾಪುರ ಅವರನ್ನು ಆ ಖಾತೆಗೆ ನೇಮಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ದಾಸರಿ ಹೇಳಿದ್ದಾರೆ.
ಇನ್ನು ವಿಧಾನಸೌಧದಲ್ಲಿರುವ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಅಧಿಕೃತ ಕೊಠಡಿಯ ಬಾಗಿಲಿಗೆ ಅಳವಡಿಸಿರುವ ಬೋರ್ಡ್ ಸಹ ಗೊಂದಲಮಯವಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ, ಸಚಿವರ ಖಾತೆ ಹಂಚಿಕೆ ಸಂದರ್ಭದಲ್ಲಿ ರಾಜ್ಯಪಾಲರಿಗೆ ಸಲ್ಲಿಸಿದ ಖಾತೆ ಹಂಚಿಕೆ ವಿವರದಲ್ಲಿ ದರ್ಶನಾಪುರ ಅವರನ್ನು ಸಾರ್ವಜನಿಕ ಉದ್ದಿಮೆಗಳ ಸಚಿವರನ್ನಾಗಿ ನೇಮಿಸಲಾಗಿದೆ.
ಹಿಂದಿನ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಖಾತೆಯನ್ನು ದ್ದುಪಡಿಸಿದ್ದನ್ನು ಮರೆಮಾಚುವ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜ್ಯಪಾಲರ ದಾರಿ ತಪ್ಪಿಸಿದ್ದಾರಾ? ಎಂದು ಆಪ್ ನಾಯಕ ಪ್ರಶ್ನಿಸಿದರು.
ಇದೇ ವೇಳೆ ಸಾರ್ವಜನಿಕ ಉದ್ದಿಮೆ ಸಚಿವಾಲಯವನ್ನು ಹಣಕಾಸು ಖಾತೆಯೊಂದಿಗೆ ವಿಲೀನಗೊಳಿಸಿರುವ ಸಚಿವ ಶರಣಬಸಪ್ಪ ದರ್ಶನಾಪುರ ಅವರು, ಈ ಸಂಬಂಧ ಯಾವುದೇ ಅಧಿಕಾರಿಗಳ ಸಭೆ ನಡೆಸಿಲ್ಲ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದರರ್ಥ ಸಾರ್ವಜನಿಕ ಉದ್ಯಮ ಸಚಿವಾಲಯವು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗೆ ಸೇರಿದೆ. ಈ ವಿಚಾರದಲ್ಲಿ ಸಾರ್ವಜನಿಕರಲ್ಲಿ ಗೊಂದಲವಿದ್ದು, ಸಾರ್ವಜನಿಕ ಉದ್ದಿಮೆಗಳ ಸಚಿವಾಲಯ ಇದೆಯೇ? ಅಥವಾ ರದ್ದುಗೊಳಿಸಲಾಗಿದೆಯೇ? ಅಥವಾ ಹಣಕಾಸು ಇಲಾಖೆಯೊಂದಿಗೆ ವಿಲೀನಗೊಳಿಸಲಾಗಿದೆಯೇ? ಎಂಬುದು ಸಂಪೂರ್ಣ ಗೊಂದಲಮಯವಾಗಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


