ಲೋಕಸಭಾ ಚುನಾವಣೆ ಗೆಲುವು ಮುಖ್ಯ, ಕ್ಷೇತ್ರಗಳ ಅನುದಾನ ವಿಚಾರ ಆಮೇಲೆ ನೋಡೋಣ: ಪಕ್ಷದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳ ಕಾಲ ಸತತ ಸಭೆಗಳನ್ನು ನಡೆಸುತ್ತಿದ್ದು, ಶಾಸಕರು ಹಾಗೂ ಸಚಿವರ ನಡುವೆ ಭಿನ್ನಾಭಿಪ್ರಾಯ ಶಮನಗೊಳಿಸಿ ಸಮನ್ವಯ ಮೂಡಿಸಲು ಪ್ರಯತ್ನಗಳ ನಡೆಸುತ್ತಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳ ಕಾಲ ಸತತ ಸಭೆಗಳನ್ನು ನಡೆಸುತ್ತಿದ್ದು, ಶಾಸಕರು ಹಾಗೂ ಸಚಿವರ ನಡುವೆ ಭಿನ್ನಾಭಿಪ್ರಾಯ ಶಮನಗೊಳಿಸಿ ಸಮನ್ವಯ ಮೂಡಿಸಲು ಪ್ರಯತ್ನಗಳ ನಡೆಸುತ್ತಿದ್ದಾರೆ.
ಸೋಮವಾರ ತುಮಕೂರು, ಯಾಗದಿಗಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ, ಧಾರವಾಡ ಜಿಲ್ಲೆಗಳ ಸಚಿವರು ಹಾಗೂ ಶಾಸಕರ ಜೊತೆಗೆ ಸಭೆಯನ್ನು ನಡೆಸಿದ ಮುಖ್ಯಮಂತ್ರಿಗಳು, ಮಂಗಳವಾರ ರಾಯಚೂರು, ವಿಜಯಪುರ, ಕೊಪ್ಪಳ, ಬೆಳಗಾವಿ, ಹಾವೇರಿ, ಕಲಬುರಗಿ ಜಿಲ್ಲೆಗಳ ಶಾಸಕರು ಹಾಗೂ ಸಚಿವರ ಜೊತೆಗೆ ಸಭೆ ನಡೆಸಿದರು.
ಬುಧವಾರ ಕೂಡ ರಾಮನಗರ, ಹಾಸನ, ಕೊಡಗು, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಸಕರು ಹಾಗೂ ಉಸ್ತುವಾರಿ ಸಚಿವರ ಜೊತೆಗೆ ಸಭೆಯನ್ನು ನಡೆಸಿದರು. ಹೀಗೆ ಸತತವಾಗಿ ದಿನವಿಡೀ ಈ ಸಭೆಯನ್ನು ನಡೆಸುವ ಮೂಲಕ ಆಡಳಿತ ಯಂತ್ರ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ.
ಈ ಸಭೆಯಲ್ಲಿ ಹಲವು ಜಿಲ್ಲೆಗಳ ಶಾಸಕರು ತಮ್ಮ ಅಸಮಾಧಾನ, ಬೇಸರವನ್ನು ತೋಡಿಕೊಂಡಿದ್ದಾರೆ. ಅನುದಾನ ಕೊರತೆ, ಸಚಿವರ ಸ್ಪಂದನೆಯ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಮಾನತುಗೊಂಡಿದ್ದ ಆರ್ಡಿಪಿಆರ್ ಅಧಿಕಾರಿಗೆ ಪಿಡಬ್ಲ್ಯೂಡಿಯಲ್ಲಿ ಉತ್ತಮ ಹುದ್ದೆ: ಸಚಿವರ ನಡುವಿನ ಮುಸುಕಿನ ಗುದ್ದಾಟ ಬಹಿರಂಗ!
ಈ ಸಂದರ್ಭದಲ್ಲಿ ಶಾಸಕರು ಸಮಸ್ಯೆಗಳನ್ನು ಆಲಿಸಿರುವ ಸಿಎಂ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಸದ್ಯಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಬೇಡಿ, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂಬ ಭರವಸೆಯನ್ನು ನೀಡಿದ್ದಾರೆಂದು ತಿಳಿದುಬಂದಿದೆ.
ವಿಧಾನಸಭಾ ಕ್ಷೇತ್ರಗಳಲ್ಲಿನ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಕೆಲವು ನಿರ್ಧಾರಗಳನ್ನು ಕೈಗೊಳ್ಳುವಾಗ ಆಯಾ ಕ್ಷೇತ್ರಗಳ ಶಾಸಕರೊಂದಿಗೆ ಸಮನ್ವಯ ಸಾಧಿಸಿ, ಕೆಲಸ ಮಾಡುವಂತೆ ಹಾಗೂ ಐದು ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಸಚಿವರಿಗೆ ಸೂಚನೆ ನೀಡಿದರು. ಇದೇ ವೇಳೆ ಲೋಕಸಭೆ ಚುನಾವಣೆಯವರೆಗೆ ತಾಳ್ಮೆಯಿಂದಿರಿ, ನಂತರ ಕ್ಷೇತ್ರಗಳಿಗೆ ಅನುದಾನ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು ಎಂದು ಸಭೆಯಲ್ಲಿ ಪಾಲ್ಗೊಂಡಿಡ್ಡ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಶಾಸಕರು ವರ್ಸಸ್ ಸಚಿವರು: ಅಸಮಾಧಾನ ಶಮನಕ್ಕೆ 2ನೇ ದಿನವೂ ಕಾಂಗ್ರೆಸ್ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ
ಕುಡಿಯುವ ನೀರು ಪೂರೈಕೆ, ಜಿಲ್ಲೆಗಳಿಗೆ ಪ್ರಮುಖ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಹಣದ ಕೊರತೆಯಾಗುವುದಿಲ್ಲ, ಆದ್ಯತೆಯ ಮೇಲೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆಂತು ತಿಳಿಸಿದರು.
ಇದಷ್ಟೇ ಅಲ್ಲದೆ, ತಮ್ಮ ಕ್ಷೇತ್ರಗಳಲ್ಲಿ ಅನಾಹುತಗಳು ಸಂಭವಿಸಿದರೆ ನೇರವಾಗಿ ತಮಗೇ ಮಾಹಿತಿ ನೀಡುವಂತೆಯೂ ಶಾಸಕರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


