ದೇವೇಗೌಡರ ಬಗ್ಗೆ ಹಗುರ ಮಾತು: ಕ್ಷಮೆ ಕೋರುವಂತೆ ಕೆ.ಎನ್. ರಾಜಣ್ಣಗೆ ಡಿ.ಕೆ. ಸಹೋದರರ ಅಗ್ರಹ
ದೇಶ ಹಾಗೂ ರಾಜ್ಯಕ್ಕೆ ಸೇವೆ ಸಲ್ಲಿಸಿರುವ ಹಿರಿಯ ನಾಯಕ, ಪೂಜ್ಯ ಸಮಾನರಾದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆರೋಗ್ಯದ ಬಗ್ಗೆ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ಖಂಡನೀಯ..

ನವದೆಹಲಿ: ದೇಶ ಹಾಗೂ ರಾಜ್ಯಕ್ಕೆ ಸೇವೆ ಸಲ್ಲಿಸಿರುವ ಹಿರಿಯ ನಾಯಕ, ಪೂಜ್ಯ ಸಮಾನರಾದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆರೋಗ್ಯದ ಬಗ್ಗೆ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ಖಂಡನೀಯ ಮತ್ತು ಅಮಾನವೀಯ. ಕೂಡಲೇ ಅವರು ದೇವೇಗೌಡರ ಕ್ಷಮೆ ಕೇಳುವಂತೆ ಸೂಚನೆ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ದೆಹಲಿಯಲ್ಲಿರುವ ಡಿ ಕೆ ಶಿವಕುಮಾರ್ ಅವರು ವಿಡಿಯೋ ಸಂದೇಶದ ಮೂಲಕ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ನಮ್ಮ ಪಕ್ಷದ ನಾಯಕರಾದ ರಾಜಣ್ಣ ಅವರು ಹಿರಿಯ ನಾಯಕ ದೇವೇಗೌಡರ ಆರೋಗ್ಯ ಪರಿಸ್ಥಿತಿ ಬಗ್ಗೆ ಆಡಿರುವ ಮಾತನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಪಕ್ಷದ ನಾಯಕನಾಗಿ, ವ್ಯಯಕ್ತಿಕವಾಗಿಯೂ ಇದನ್ನು ಖಂಡಿಸುತ್ತೇನೆ. ಯಾರೇ ನಾಯಕರು ಮಾನವೀಯತೆಯನ್ನು ಮೆರೆಯಬೇಕು. ಸಮಾಜ ಹಾಗೂ ದೇಶಕ್ಕೆ ಸೇವೆ ಮಾಡಿರುವ ಹಿರಿಯ ನಾಯಕರಾದ ದೇವೇಗೌಡರ ಬಗ್ಗೆ ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ. ದೇವೇಗೌಡರು ಪ್ರಧಾನಿಯಾಗಲು ಹಿಂದೆ ಕಾಂಗ್ರೆಸ್ ಪಕ್ಷವೇ ಬೆಂಬಲ ನೀಡಿತ್ತು. ನಾವು ದೇವೇಗೌಡರನ್ನು ಬಹಳ ಗೌರವಯುತವಾಗಿ ಕಾಣುತ್ತಿದ್ದೇವೆ. ಅಂತಹ ಹಿರಿಯ ನಾಯಕರ ಆರೋಗ್ಯದ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಕೂಡಲೇ ರಾಜಣ್ಣ ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಕೋರುವಂತೆ ಸೂಚನೆ ನೀಡುತ್ತೇನೆ. ಇಂತಹ ಹೇಳಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಪೂಜ್ಯ ಸಮಾನರಾದ ದೇವೇಗೌಡರಿಗೆ ಉತ್ತಮ ಆರೋಗ್ಯ ಮತ್ತು ಇನ್ನಷ್ಟು ಸೇವೆ ಮಾಡುವ ಅವಕಾಶವನ್ನು ದೇವರು ಕರುಣಿಸಲಿ ಎಂದು ನಾವು ಪ್ರಾರ್ಥನೆ ಮಾಡುತ್ತೇವೆ’ ಎಂದು ಶಿವಕುಮಾರ್ ಹೇಳಿದ್ದಾರೆ.
ರಾಜಣ್ಣ ಕೂಡಲೇ ಕ್ಷಮೆ ಕೇಳಬೇಕು: ಡಿ.ಕೆ. ಸುರೇಶ್
ಮಾಜಿ ಪ್ರಧಾನಿಗಳಾದ ದೇವೇಗೌಡರ ಕುರಿತು ಕೆ.ಎನ್.ರಾಜಣ್ಣ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದು ಸಂಸದ ಡಿ.ಕೆ. ಸುರೇಶ್ ಅವರು ಹೇಳಿದ್ದಾರೆ.
ದೇವೇಗೌಡರ ಹಿರಿತನಕ್ಕೆ ನಾವೆಲ್ಲರೂ ತಲೆಬಾಗಬೇಕು. ಸಮಾಜದ ಹಿರಿಯರ ಬಗ್ಗೆ ಇಂತಹ ಹಗುರ ಹೇಳಿಕೆ ನೀಡಿರುವುದು ರಾಜಣ್ಣ ಅವರ ಘನತೆಗೆ ಸೂಕ್ತವಲ್ಲ. ರಾಜಣ್ಣ ಅವರು ಕೂಡಲೇ ಕ್ಷಮೆ ಕೋರಬೇಕು. ಇದು ಅವರ ವೈಯಕ್ತಿಕ ಹೇಳಿಕೆಯಾದರೂ, ಅವರು ಕ್ಷಮೆ ಕೋರಬೇಕು. ಇಲ್ಲದಿದ್ದರೆ ಸಮಾಜ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುರೇಶ್ ಅವರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


