ಹೊಸ ಪಕ್ಷ ಘೋಷಣೆ ಮಾಡುತ್ತಾರೆಯೇ ಗಾಲಿ ಜನಾರ್ಧನ ರೆಡ್ಡಿ?: ರಾಜ್ಯ ರಾಜಕೀಯ ನಡೆ ಕುರಿತು ಇಂದು ಅಂತಿಮ ನಿರ್ಧಾರ!
ಹೊಸ ಪಕ್ಷ ಸ್ಥಾಪನೆ ಕುರಿತು ಈಗಾಗಲೇ ಬಿಜೆಪಿಗೆ ಕಳವಳವನ್ನುಂಟು ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು, ತಮ್ಮ ರಾಜ್ಯ ರಾಜಕೀಯ ನಡೆ ಕುರಿತು ಭಾನುವಾರ ಅಂತಿಮ ನಿರ್ಧಾರ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಬೆಂಗಳೂರು: ಹೊಸ ಪಕ್ಷ ಸ್ಥಾಪನೆ ಕುರಿತು ಈಗಾಗಲೇ ಬಿಜೆಪಿಗೆ ಕಳವಳವನ್ನುಂಟು ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು, ತಮ್ಮ ರಾಜ್ಯ ರಾಜಕೀಯ ನಡೆ ಕುರಿತು ಭಾನುವಾರ ಅಂತಿಮ ನಿರ್ಧಾರ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಇಷ್ಟು ದಿನ ಗಂಗಾವತಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದ ಜನಾರ್ಧನ ರೆಡ್ಡಿಯವರು, ಇಂದು (ಡಿಸೆಂಬರ್ 25) ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಬೆಳಗ್ಗೆ 10.30 ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಮುಂದಿನ ರಾಜಕೀಯ ಹೆಜ್ಜೆಯನ್ನು ಘೋಷಣೆ ಮಾಡುವ ಅಥವಾ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
ಈಗಾಗಲೇ ಗಣಿ ಅಕ್ರಮದಿಂದ ರಾಜಕೀಯವಾಗಿ ಭಾರೀ ಹಿನ್ನಡೆ ಅನುಭವಿಸಿದ್ದ ಜನಾರ್ಥನ್ ರೆಡ್ಡಿ, ಹಲವು ವರ್ಷಗಳ ಕಾಲ ಸೈಲೆಂಟ್ ಆಗಿದ್ದರು. ಆದರೆ. ಇದೀಗ 2023 ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ರಾಜಕೀಯವಾಗಿ ಸಕ್ರಿಯರಾಗುವ ಸೂಚನೆ ನೀಡುತ್ತಿದ್ದಾರೆ.
ಈ ನಡುವೆ ಜನಾರ್ದನ ರೆಡ್ಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇಲ್ಲಿಂದಲೇ ನನ್ನ ಸ್ಪರ್ಧೆ, ಟಿಕೆಟ್ ನೀಡಿ ಎಂಬ ಸಂದೇಶವನ್ನು ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ ಎಂಬ ಚರ್ಚೆಗಳೂ ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಅಲ್ಲದೇ, ಗಂಗಾವತಿಯಲ್ಲಿಯೂ ಹೊಸ ನಿವಾಸವನ್ನ ಮಾಡಿದ್ದು, ಇಲ್ಲಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ಅವರ ಆಪ್ತ ವಲಯದಲ್ಲಿ ಕೇಳಿಬಂದಿದೆ.
ಗಂಗಾವತಿಯಲ್ಲಿರುವ ರೆಡ್ಡಿಯವರು ಕೆಲವು ದಿನಗಳ ಹಿಂದೆ, ಖಲೀಲುಲ್ಲಾ ಕ್ವಾದ್ರಿ ದರ್ಗಾದ ಅಭಿವೃದ್ಧಿಗೆ 6 ಕೋಟಿ ರೂಪಾಯಿಗಳನ್ನು ಘೋಷಿಸಿದ್ದರು. ಅವರ ಈ ನಿರ್ಧಾರದ ಬಗ್ಗೆ ಕೆಲ ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿದೆ.
ತಮ್ಮದೇ ಆದ "ಜಾತ್ಯತೀತ ಪಕ್ಷ" ವನ್ನು ಪ್ರಾರಂಭಿಸುವ ಬಗ್ಗೆ ಊಹಾಪೋಹಗಳು ಸೃಷ್ಟಿಯಾಗಿರುವುದಕ್ಕೆ ಇದು ಒಂದು ಕಾರಣವೆಂದು ಹೇಳಲಾಗುತ್ತಿದೆ.
2011 ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿಯವರು ಜೈಲು ಶಿಕ್ಷೆಗೆ ಗುರಿಯಾಗಿದ್ದರು ಮತ್ತು 2015 ರಲ್ಲಿ ಜಾಮೀನು ಪಡೆದುಕೊಂಡಿದ್ದರು. ನಂತರ, ಅಕ್ಟೋಬರ್ 2022 ರಲ್ಲಿ ಅವರ ಹುಟ್ಟೂರಾದ ಬಳ್ಳಾರಿಗೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತು. ಈ ಬೆಳವಣಿಗೆಗಳ ಬಳಿಕ ರೆಡ್ಡಿಯವರು ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಲು ನಿರ್ಧರಿಸಿದರು.
ಇದರಂತೆ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರೊಂದಿಗೆ ತಮ್ಮ ನಿವಾಸದಲ್ಲಿ ರಾತ್ರಿ ಊಟ ಮಾಡಿದ ಅವರು, ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಇಬ್ಬರ ನಡುವೆ ಮಹತ್ವದ ಮಾತುಕತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ರೆಡ್ಡಿಯವರು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಮಗೆ ಹಾಗೂ ತಮ್ಮ ಬೆಂಬಲಿಗರಿಗೆ ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳಲು ಬಯಸಿದ್ದಾರೆ.
ತಮಗೆ ಹಾಗೂ ಪತ್ನಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿರುವುದರಿಂದ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಸಮಾಧಾನಗೊಂಡಿದ್ದು ಇದರಿಂದ ರೆಡ್ಡಿ ಭೇಟಿಗೆ ನಿರಾಕರಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


