'ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ? ಅಥವಾ ಹಿಂದಿ ಮತ್ತು ಸಂಸ್ಕೃತಿ ಇಲಾಖೆಯೇ?': ಸಿದ್ದರಾಮಯ್ಯ ಕಿಡಿ
ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದ್ದು, ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ? ಅಥವಾ ಹಿಂದಿ ಮತ್ತು ಸಂಸ್ಕೃತಿ ಇಲಾಖೆಯೇ?ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಬೆಂಗಳೂರು: ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದ್ದು, ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ? ಅಥವಾ ಹಿಂದಿ ಮತ್ತು ಸಂಸ್ಕೃತಿ ಇಲಾಖೆಯೇ?ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ ಕೇಂದ್ರ ಬಿಜೆಪಿ ನಾಯಕರ ಓಲೈಕೆಗಾಗಿ ಮತ್ತೆ ಮತ್ತೆ ಕನ್ನಡವನ್ನು ತುಳಿದು ಹಿಂದಿಯನ್ನು ಮೆರೆಸಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ' ಸಂಕಲ್ಪ್ ಸೆ ಸಿದ್ಧಿ' ಎಂಬ ಕಾರ್ಯಕ್ರಮದ ಬ್ಯಾನರ್ ಸಂಪೂರ್ಣ ಹಿಂದಿಮಯವಾಗಿತ್ತು. ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತನ್ನ ಜಾಲತಾಣದಲ್ಲಿ ಹಿಂದಿಯ ಕಿರೀಟ ಇಟ್ಟುಕೊಂಡು ಮೆರೆಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
'ರಾಜ್ಯದ ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದೆ ಎಂಬುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣವೇ ಸಾಕ್ಷಿ. ಮೊದಲು ಈ ಜಾಲತಾಣದಿಂದ ಹಿಂದಿಯನ್ನು ಕಿತ್ತೊಗೆದು, ಕನ್ನಡಿಗರ ಸ್ವಾಭಿಮಾನ ಉಳಿಸಿ. ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ? ಅಥವಾ ಹಿಂದಿ ಮತ್ತು ಸಂಸ್ಕೃತಿ ಇಲಾಖೆಯೇ? ಎನ್ನುವುದನ್ನು ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಪೋಷಣೆಗಾಗಿ ಇರುವ ಇಲಾಖೆಯೇ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಹೊರಗಿಟ್ಟು ಹಿಂದಿ ಭಾಷೆಯ ಪ್ರಚಾರಕ್ಕೆ ಇಳಿದರೆ ಕನ್ನಡ ಭಾಷೆಯನ್ನು ರಕ್ಷಿಸಿವವರು ಯಾರು? ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಕನ್ನಡಿಗರ ಸ್ವಾಭಿಮಾನವನ್ನು 'ಉತ್ತರ ಕುಮಾರ'ರ ಕಾಲಡಿ ಯಾಕೆ ಅಡವು ಇಡುತ್ತೀರಾ?. ಶರಣಾಗತಿ ಕನ್ನಡದ ಮಣ್ಣಿನ ಗುಣವಲ್ಲ, ವೀರರಾಣಿ ಅಬ್ಬಕ್ಕನ ನೆಲದಿಂದ ಬಂದ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


