ಸಿದ್ದರಾಮಯ್ಯರ ಭಾಗ್ಯದ ಯೋಜನೆಗಳು ಮಧ್ಯವರ್ತಿಗಳ ಪಾಲಾಗಿವೆ: ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಘೋಷಣೆ ಮಾಡಿದ ಭಾಗ್ಯಗಳು ಜನರ ಮನೆ ಬಾಗಿಲಿಗೆ ತಲುಪದೇ ಮಧ್ಯವರ್ತಿಗಳ ಪಾಲಾದವು. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ತಿರಸ್ಕರಿಸಿ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ವಿರುದ್ಧ ವಾಕ್ಸಮರ ನಡೆಸಿದರು.

ಹಾನಗಲ್: ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಘೋಷಣೆ ಮಾಡಿದ ಭಾಗ್ಯಗಳು ಜನರ ಮನೆ ಬಾಗಿಲಿಗೆ ತಲುಪದೇ ಮಧ್ಯವರ್ತಿಗಳ ಪಾಲಾದವು. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ತಿರಸ್ಕರಿಸಿ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ವಿರುದ್ಧ ವಾಕ್ಸಮರ ನಡೆಸಿದರು.
ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿಂದು ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜಾರಿ ಮಾಡಿದ ನಂತರವೇ ಜನ ಅಕ್ಕಿ ನೋಡಿದ್ದಾರೆ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಈ ಅಕ್ಕಿಯಲ್ಲಿ ಕೇಂದ್ರದ ಪಾಲು ಹೆಚ್ಚು. ರಾಜ್ಯ ಸರ್ಕಾರದ ಪಾಲು ಪ್ರತಿ ಕೆಜಿಗೆ ಕೇವಲ 3 ರೂಪಾಯಿ. ಆದರೆ ಅನ್ನಭಾಗ್ಯ ಯೋಜನೆ ತಮ್ಮದೆಂದು ಹೇಳಿಕೊಳ್ಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ರೈತರ ಪರವಾಗಿರಲಿಲ್ಲ, ರೈತರನ್ನು ಉದ್ಧಾರ ಮಾಡುವ ಮನಸ್ಥಿತಿ ಅವರಿಗಿಲ್ಲ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವುದೇ ಕಾಂಗ್ರೆಸ್ ಕೆಲಸ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ವಿರೋಧ ಪಕ್ಷದ ಎಲ್ಲ ಟೀಕೆ-ಟಿಪ್ಪಣಿಗಳಿಗೆ ನಾನು ಉತ್ತರಕೊಡಲು ಬಯಸುವುದಿಲ್ಲ. ನಮ್ಮ ಮೂಲಮಂತ್ರ ಅಭಿವೃದ್ಧಿಯಾಗಿದ್ದು, ಕಾಂಗ್ರೆಸ್ ಪಕ್ಷದವರು ತಮಗೆ ಬೇಕಾದ ಅಜೆಂಡಾ ಇಟ್ಟುಕೊಳ್ಳಲಿ. ಆದರೆ ಭಾರತೀಯ ಜನತಾ ಪಕ್ಷದ ಏಕೈಕ ಅಜೆಂಡಾ ಅಭಿವೃದ್ಧಿ. ಕಾಂಗ್ರೆಸ್ ಪಕ್ಷ ಮಾಡುವಂತಹ ಎಲ್ಲ ಟೀಕೆಗಳಿಗೆ ಹಾನಗಲ್ ಕ್ಷೇತ್ರದ ಜನ ಉತ್ತರ ಕೊಡಲಿದ್ದಾರೆ ಎಂದರು.
ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ಯಡಿಯೂರಪ್ಪ ಅವರು ಕಾಲಿಟ್ಟಿದ್ದಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಬೊಮ್ಮಾಯಿಯವರು ಉಚ್ಚರಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪನವರು ಪರಿಚಯಿಸಿದ ಎಲ್ಲಾ ಯೋಜನೆಗಳ ಹಿಂದೆ ಬಲವಾದ ಸಾಮಾಜಿಕ ಅಭಿವೃದ್ಧಿಗೆ ಕಳಕಳಿ ಮತ್ತು ಕಾಳಜಿ ಇತ್ತು ಎಂದು ಬೊಮ್ಮಾಯಿ ಅವರು ಹಾನಗಲ್ ಪ್ರಚಾರದ ಸಂದರ್ಭದಲ್ಲಿ ಹೇಳಿದರು.
ನಮ್ಮ ರೈತರು ಅಭಿವೃದ್ಧಿ ಹೊಂದಬೇಕು ಹಣಗಳಿಸಬೇಕು. ಕಾಲಿನಲ್ಲಿ ಜೂರ್ಕಿ ಚಪ್ಪಲಿ, ರೇಷ್ಮೆ ಜುಬ್ಬಾ,, ರೇಷ್ಮೆ ರುಮಾಲು ಹಾಕಬೇಕು, ಕೈಯಲ್ಲಿ ಬಾರಕೋಲು ಹಿಡಿದುಕೊಳ್ಳಬೇಕು ಇದು ಭಾರತೀಯ ಜನತಾ ಪಕ್ಷದ ಅಭಿವೃದ್ಧಿಯ ಕನಸು. ರೈತರ ಜೀವನ ಸುಧಾರಿಸುವುದೇ ನಮ್ಮ ಉದ್ದೇಶ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


