ರಾಜಕೀಯ

ಬಾಯಿ ಮಾತಲ್ಲಿ ಮಾತ್ರ ಮೋದಿ ದಲಿತ ಪ್ರೀತಿ: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ

ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಯಾವ ರಾಜ್ಯದಲ್ಲೂ ದಲಿತ ಮುಖ್ಯಮಂತ್ರಿಯನ್ನು ಮಾಡಿಲ್ಲ. ಆದರೆ ನಾವು ಪಂಜಾಬ್‌ನಲ್ಲಿ ದಲಿತ ಮುಖ್ಯಮಂತ್ರಿ ಮಾಡಿದ್ದೇವೆ.

ಬಾಯಿ ಮಾತಲ್ಲಿ ಮಾತ್ರ ಮೋದಿ ದಲಿತ ಪ್ರೀತಿ: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ
ನರೇಂದ್ರ ಮೋದಿ
Published On :

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಯಾವ ರಾಜ್ಯದಲ್ಲೂ ದಲಿತ ಮುಖ್ಯಮಂತ್ರಿಯನ್ನು ಮಾಡಿಲ್ಲ. ಆದರೆ ನಾವು ಪಂಜಾಬ್‌ನಲ್ಲಿ ದಲಿತ ಮುಖ್ಯಮಂತ್ರಿ ಮಾಡಿದ್ದೇವೆ. ಮೋದಿಯದ್ದು ಬರಿ ಬಾಯಿ ಮಾತಿನ ದಲಿತ ಪ್ರೀತಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರದು ಬಾಯಿ ಮಾತಿನ ದಲಿತ ಪ್ರೀತಿ. ಮೋದಿ ಅವರು ಬಿಜೆಪಿ ಆಳ್ವಿಕೆ ಇರುವ ಯಾವ ರಾಜ್ಯದಲ್ಲೂ ದಲಿತ ಮುಖ್ಯಮಂತ್ರಿ ಮಾಡಿಲ್ಲ. ಆದರೆ ನಾವು ಪಂಜಾಬ್‌ನಲ್ಲಿ ದಲಿತ ಮುಖ್ಯಮಂತ್ರಿ ಮಾಡಿದ್ದೇವೆ. ಅವರು ಬರಿ ಬಾಯಿ ಮಾತಲ್ಲಿ ದಲಿತ ಪ್ರೀತಿ ತೋರಿಸುತ್ತಾರೆ ಎಂದು ಟೀಕಿಸಿದ್ದಾರೆ.

ಕರ್ನಾಟಕದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬಸವರಾಜ ಬೊಮ್ಮಾಯಿ‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಲಿನಿಂದ ತಲೆಯವರೆಗೂ ಬೊಮ್ಮಾಯಿ‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ತೈಲ ಬೆಲೆ, ಅನಿಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನೋಡಿದರೆ ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಜನರನ್ನು ಹೇಗೆ ಲೂಟಿ ಮಾಡುತ್ತಿವೆ ಎನ್ನುವುದು ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.

ನರೇಂದ್ರ ಮೋದಿ ಮತ್ತು ಬೊಮ್ಮಾಯಿ‌ ಸರ್ಕಾರ ಜನರನ್ನು ಬೆಲೆ ಏರಿಕೆಯಿಂದ ಲೂಟಿ ಮಾಡುತ್ತಿದೆ. ವಿದೇಶದಿಂದ ತೊಗರಿ ಬೇಳೆ ದೇಶಕ್ಕೆ ಬರಲಿದೆ. ಆದರೆ ನಮ್ಮ ದೇಶದ ರೈತರು ಬೆಳೆದ ಬೇಳೆ ಮಾರಾಟ ಆಗುವುದಿಲ್ಲ. ದೇಶದ ಜನ ಸರ್ಕಾರದಲ್ಲಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸ್ಥಾನದಿಂದ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಒಂದು ಕುಟುಂಬ. ಕುಟುಂಬದ ಮುಖ್ಯಸ್ಥರಿಗೆ ಪತ್ರ ಬರೆಯಲು ಮುಕ್ತ ಅವಕಾಶ ಇದೆ. ಪಕ್ಷದ ಯಾರೇ ಕಾರ್ಯಕರ್ತರು ಸೋನಿಯಾ ಗಾಂಧಿಗೆ ಪತ್ರ ಬರೆಯಬಹುದು. ತಮ್ಮ ಅಭಿಪ್ರಾಯ ಸೋನಿಯಾ ಗಾಂಧಿ ಅವರಿಗೆ ತಿಳಿಸೋದ್ರಲ್ಲಿ ತಪ್ಪೇನಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.