ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ
ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
‘ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಲೋಕಸಭಾ ಸಚಿವಾಲಯದ ‘ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್) ಸಂಸ್ಥೆ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗಿಗೆ ಆದ್ಯತೆ ನೀಡಿದೆ. ಕನ್ನಡಭಿಮಾನವಿಲ್ಲದ 25 ಮಂದಿಯನ್ನು ಲೋಕಸಭೆಗೆ ಆರಿಸಿ ಕಳಿಸಿದ್ದರ ಫಲವಿದು ಎಂದು ಆರೋಪಿಸಿದ್ದಾರೆ.
ಇದೇ 22ರಿಂದ ಭಾಷೆಗಳ ಕಲಿಕಾ ತರಬೇತಿ ಆನ್‌ಲೈನಲ್ಲಿ ಆರಂಭವಾಗುತ್ತಿದೆ. ಇದರಲ್ಲಿ ವಿವಿಧ ರಾಜ್ಯಗಳ ಸಂಸದರು, ಶಾಸಕರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಫ್ರೆಂಚ್, ಜರ್ಮನ್, ಜಪಾನೀಸ್, ಪೊರ್ಚುಗೀಸ್, ರಷ್ಯನ್, ಸ್ಪ್ಯಾನಿಷ್ಅನ್ನು ಕಲಿಸಲಾಗುತ್ತಿದೆ. ಇದರಲ್ಲಿ ಕನ್ನಡವನ್ನು ಸೇರಿಸಬೇಕು. ಇಲ್ಲವೇ ನಾವೆಲ್ಲರೂ ಇದನ್ನು ದಿಕ್ಕರಿಸಬೇಕು’ ಎಂದು ಹೇಳಿದ್ದಾರೆ.
ಕೇಂದ್ರ ಪ್ರತಿ ಬಾರಿ ಕನ್ನಡ ನಿರ್ಲಕ್ಷಿಸುತ್ತಿದೆ. ಇದರ ವಿರುದ್ಧ ನಾವೇ ಕೆಲವರು ಮಾತನಾಡುವಂತಾಗಿದೆ. ಕನ್ನಡ ಭಾಷೆ ವಿಚಾರದಲ್ಲಿನ ಕೇಂದ್ರದ ಇಂಥ ನಡವಳಿಕೆಗಳ ವಿರುದ್ಧ ಎಲ್ಲರೂ ಹೋರಾಡಬೇಕು. ಅವರು ನಿರ್ಲಕ್ಷಿಸುವುದು ನಾವು ಎಚ್ಚರಿಸುವುದು, ಅತ್ತು ಕರೆದು ಔತಣ ಪಡೆಯುವುದು ನಿಲ್ಲಬೇಕು. ‘ಕನ್ನಡ ಮರೆತರೆ ಕಷ್ಟ’ ಎಂಬ ಸಂದೇಶ ರವಾನಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಕನ್ನಡದ ವಿಚಾರದಲ್ಲಿ ನಿರ್ಲಕ್ಷ್ಯ ಭಾವ ತಳೆದಿದ್ದರೂ ಬಿಜೆಪಿಯ ಯಾವೊಬ್ಬ ಸಂಸದರೂ ಇದರ ಬಗ್ಗೆ ಮಾತನಾಡಿರುವುದನ್ನು ನಾನಂತೂ ನೋಡಿಲ್ಲ. ಇಷ್ಟರಲ್ಲೇ ಜನರಿಗೆ ಅರ್ಥವಾಗಬೇಕು ‘ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ’ ಎಂದು. ತಾವು ಕನ್ನಡ ವಿರೋಧಿಗಳಲ್ಲ ಎಂದಾದರೆ ಈಗ ಆಗಿರುವ ಪ್ರಮಾದವನ್ನು ತಾಕತ್ತಿದ್ದರೆ ಬಿಜೆಪಿ ಸರಿಪಡಿಸಲಿ ಎಂದು ಸವಾಲು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


