ಬೆಳಗಾವಿಯಲ್ಲಿ ಕೂಡಲೇ ವಿಧಾನ ಮಂಡಲ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ
ಬೆಳಗಾವಿಯಲ್ಲಿ ಕೂಡಲೇ ವಿಧಾನ ಮಂಡಲ ಅಧಿವೇಶನ ನಡೆಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಆಗ್ರಹಿಸಿದ್ದಾರೆ.

ಬೆಂಗಳೂರು: ಬೆಳಗಾವಿಯಲ್ಲಿ ಕೂಡಲೇ ವಿಧಾನ ಮಂಡಲ ಅಧಿವೇಶನ ನಡೆಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಧಾನಸಭೆಯ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಬೆಳಗಾವಿಯಲ್ಲಿ ಕೂಡಲೇ ವಿಧಾನ ಮಂಡಲ ಅಧಿವೇಶನ ನಡೆಸುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮದಂತೆ ಜುಲೈ ತಿಂಗಳಲ್ಲಿ ವಿಧಾನಸಭೆಯ ಅಧಿವೇಶನ ನಡೆಸಬೇಕಾಗಿತ್ತು. ಆದರೆ ಸರ್ಕಾರವು ಇದುವರೆಗೂ ಕೂಡ ಅಧಿವೇಶನ ನಡೆಸಲು ಯಾವುದೇ ಕ್ರಮನ್ನು ಕೈಗೊಳ್ಳದಿರುವುದು ನಿಯಮಬಾಹಿರ ಕ್ರಮವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ರಾಜ್ಯದ ಆರ್ಥಿಕ, ರಾಜಕೀಯ, ಆಡಳಿತಾತ್ಮಕ ಮತ್ತು ಆರೋಗ್ಯ ಕ್ಷೇತ್ರಗಳ ಆರೋಗ್ಯವು ಕುಸಿದು ಬಿದ್ದಿದೆ. ಕೋವಿಡ್ 2ನೇ ಅಲೆಯನ್ನು ರಾಜ್ಯ ಸರ್ಕಾರ ನಿಭಾಯಿಸಿದ ರೀತಿ ಅತ್ಯಂತ ಅರಾಜಕವಾಗಿತ್ತು. ಜನರ ಪಾಲಿಗೆ ಮಾರಣಾಂತಿಕವಾಗಿತ್ತು. ಈಗಾಗಲೇ ಮತ್ತೆ 3ನೇ ಅಲೆಯ ಭೀತಿ ಜನರನ್ನು ಕಾಡುತ್ತಿದೆ. ಜನರಿಗೆ ಸಮರ್ಪಕವಾಗಿ ಲಸಿಕೆ ಸಿಕ್ಕಿಲ್ಲ. 3ನೇ ಅಲೆಯನ್ನೂ ನಿಭಾಯಿಸಲು ಸರ್ಕಾರ ಯಾವ ರೀತಿಯ ತಯಾರಿಯನ್ನು ಮಾಡಿಕೊಂಡಿದೆ ಎಂಬ ಕುರಿತು ಮಾಹಿತಿ ಇಲ್ಲ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತವಾದ ಹಣವನ್ನು ನೀಡದೆ ವಂಚಿಸುತ್ತಿದೆ. ಆದರೂ ರಾಜ್ಯ ಸರ್ಕಾರವು ಕಮಕ್ ಕಿಮಕ್ ಎನ್ನದೆ ಕುಳಿತಿದೆ. ಇದರೆ ಜೊತೆಗೆ ರಾಜ್ಯ ಸರ್ಕಾರವು ಭೀಕರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ.
ರಾಜ್ಯವನ್ನು ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ. ಕಳೆದ 2 ವರ್ಷಗಳಲ್ಲಿ ಪ್ರವಾಹದಿಂದ ಸಂಭವಿಸಿದ ಹಾನಿಗೆ ಸಮಪರ್ಕ ಪರಿಹಾರವನ್ನು ನೀಡಿಲ್ಲ. ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಶಿಕ್ಷಣ ವ್ಯವಸ್ಥೆಯೂ ಅಧೋಗತಿಗಿಳಿದಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ದಲಿತ, ದಮನಿತ ಹೆಣ್ಣು ಮಕ್ಕಳ ಮೇಲೆ ಘೋರ ಅತ್ಯಾಚಾರ ಪ್ರಕರಣಗಳು, ಮರ್ಯಾದಾ ಹತ್ಯೆಗಳು, ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಕೃಷಿ ಕ್ಷೇತ್ರದ ಕುರಿತ ಸರ್ಕಾರದ ನಿರ್ಲಕ್ಷ್ಯ ಹೆಚ್ಚುತ್ತಿದೆ. ಮತ್ತೆ ಅಕ್ರಮ ಗಣಿಗಾರಿಕೆ ದಂಧೆ ಹೆಚ್ಚಾಗುತ್ತಿದೆ. ರಾಜ್ಯದ ಒಟ್ಟಾರೆ ಆಡಳಿತವು ಅಂಧಕಾರದಲ್ಲಿ ಮುಳುಗಿದೆ.
ರಾಜ್ಯದ ಜನರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಚರ್ಚಿಸಿ ಅವುಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಿಯಮ ಪ್ರಕಾರ ಪ್ರತಿ ವರ್ಷ ಕನಿಷ್ಟ 60 ದಿನಗಳ ಕಾಲ ಅಧಿವೇಶ ನಡೆಸಬೇಕು. ಮೇಲೆ ಉಲ್ಲೇಘಿಸಿದ ಕಾಯ್ದೆಯ ಪ್ರಕಾರ ವರ್ಷದಲ್ಲಿ ಕನಿಷ್ಠ 4 ಅಧಿವೇಶನಗಳನ್ನು ನಡೆಸಬೇಕು. ಜನವರಲ್ಲಿ 15, ಮಾರ್ಚ್ ನಲ್ಲಿ 20, ಜುಲೈನಲ್ಲಿ 15 ಮತ್ತು ನವೆಂಬರ್ ನಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಬೇಕು. ಆದರೆ, ಬಿಜೆಪಿ ಆಡಳಿತದ ಸರ್ಕಾರವು ಈ ನಿಯಮಗಳನ್ನೆಲ್ಲ ಗಾಳಿಗೆ ತೂರುತ್ತಿದೆ. 2020ರಲ್ಲಿ ಒಟ್ಟಾರೆ 31 ದಿನಗಳ ಕಾಲ ಮತ್ತು 2021ರಲ್ಲಿ ಇದೂವರೆಗೆ 20 ದಿನಗಳ ಕಾಲ ಮಾತ್ರ ಅಧಿವೇಶನ ನಡೆಸಿದೆ. ಬೆಳಗಾವಿಯಲ್ಲಿ ಇದೂವರೆಗೆ ಒಂದು ಅಧಿವೇಶನವನ್ನೂ ನಡೆಸಿಲ್ಲ. ಸರ್ಕಾರದ ನಿಯಮ ಬಾಹಿರವಾದ ಈ ಕ್ರಮವು ಅಕ್ಷಮ್ಯವಾಗುತ್ತದೆ. ಆದ್ದರಿಂದ ಕೂಡಲೇ ಅಧಿವೇಶನ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


