ಇಂದಿರಾಗಾಂಧಿ ಕಾಲಿನ ಧೂಳಿಗೂ ಸಮನಲ್ಲದ ಸಿ.ಟಿ. ರವಿಗೆ ಚಂಬಲ್ ಘಾಟ್ ಉಸ್ತುವಾರಿ ನೀಡಲಿ: ರಾಮಲಿಂಗಾ ರೆಡ್ಡಿ
ಇಂದಿರಾಗಾಂಧಿ ಕಾಲಿನ ಧೂಳಿಗೂ ಸಮನಲ್ಲದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ತಮಿಳುನಾಡಿನ ಬದಲು ಚಂಬಲ್ ಘಾಟ್ ಉಸ್ತುವಾರಿ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು: ಇಂದಿರಾಗಾಂಧಿ ಕಾಲಿನ ಧೂಳಿಗೂ ಸಮನಲ್ಲದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ತಮಿಳುನಾಡಿನ ಬದಲು ಚಂಬಲ್ ಘಾಟ್ ಉಸ್ತುವಾರಿ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹೆಸರಿನಲ್ಲಿ ಹುಕ್ಕಾಬಾರ್ ಮಾಡಲಿ ಎಂದು ಹೇಳಿರುವ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ಕಿಡಿಕಾರಿರುವ ರಾಮಲಿಂಗಾರೆಡ್ಡಿ, ‘ಹುಕ್ಕಾ ಬಾರ್, ಗಾಂಜಾ, ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ ರವಿ ಹಾಗೂ ಬಿಜೆಪಿಯವರ ಸಂಸ್ಕೃತಿ’ಯಾಗಿದೆ. ‘ಕಾಂಗ್ರೆಸ್ ಪಕ್ಷ ಬಡವರಿಗಾಗಿ ಹಸಿವು ನೀಗಿಸಲು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಮಾಡಲಾಗಿದೆ. ಆದರೆ ಸಿ.ಟಿ ರವಿ ಅವರು ಇಂದಿರಾಗಾಂಧಿ ಅವರ ಹೆಸರಲ್ಲಿ ಹುಕ್ಕಾ ಬಾರ್ ಬೇಕಾದರೆ ಮಾಡಿಕೊಳ್ಳಲಿ ಎಂದು ಆಡಿರುವ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಆಚಾರವಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ. ಇಂದಿರಾ ಗಾಂಧಿ ಅವರ ಹೆಸರನ್ನು ಹೇಳುವ ಯೋಗ್ಯತೆ ಬಿಜೆಪಿ ನಾಯಕರಿಗಿಲ್ಲ, ಸಿ.ಟಿ ರವಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಇತಿ ಮಿತಿಯಲ್ಲಿ ಮಾತನಾಡಬೇಕು, ಇಂತಹ ಉದ್ಧಟತನದ ಮಾತುಗಳನ್ನು ನಿಲ್ಲಿಸಬೇಕು. ಬಿಜೆಪಿಯವರು ಇಂತಹ ಹೇಳಿಕೆ ನೀಡಿ ದೇಶ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಪ್ರಚೋದಿಸುತ್ತಿದ್ದಾರೆ. ಇವರು ರಾಜಕೀಯದಲ್ಲಿರಲು ಲಾಯಕ್ಕಿಲ್ಲ. ಸಿ.ಟಿ ರವಿ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದು, ಇವರಿಗೆ ಚಂಬಲ್ ಘಾಟ್ ಉಸ್ತುವಾರಿ ನೀಡಬೇಕು. ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದರು.
ಬಿಜೆಪಿ ಮುಖಂಡರ ವಿರುದ್ಧ ಕಾಂಗ್ರೆಸ್ ನವರಿಗೆ ಸಿ.ಟಿ.ರವಿ ನೀಡಿದ ಹೇಳಿಕೆಗಿಂತಲೂ ತೀಕ್ಷ್ಣವಾಗಿ ಮಾತನಾಡಲು ಬರುತ್ತದೆ. ಸಿ.ಟಿ ರವಿ ಅವರಿಂದಾಗಲಿ, ಬಿಜೆಪಿಯವರಿಂದಾಗಲಿ ಈ ರಾಜ್ಯ ಹಾಗೂ ದೇಶಕ್ಕೆ ಯಾವುದೇ ಕೊಡುಗೆ ಇಲ್ಲ. ಐಪಿಎಸ್ ಹುದ್ದೆಯಲ್ಲಿದ್ದ ಅಣ್ಣಾಮಲೈ ಅವರನ್ನು ಹುದ್ದೆಯಿಂದ ಬಿಡಿಸಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಅವರನ್ನು ತಮಿಳುನಾಡು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ರಾಜ್ಯದ ವಿರುದ್ಧ ನಿಲ್ಲುವಂತೆ ಮಾಡುತ್ತಿರುವುದು ಸಿ.ಟಿ ರವಿ ಎಂದು ತಿರುಗೇಟು ನೀಡಿದರು.
‘ದೇಶದ ಸ್ವಾತಂತ್ರ್ಯಕ್ಕಾಗಿ 2 ವರ್ಷ ಜೈಲು ಸೇರಿ, 16 ವರ್ಷ ದೇಶದ ಪ್ರಧಾನಿಯಾಗಿ ಬಾಂಗ್ಲಾ ವಿಮೋಚನೆ, ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ಕೊಟ್ಟು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿ ಆಗಲಿ, ಆರ್ ಎಸ್ ಎಸ್ ಆಗಲಿ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇವರು ಯಾರ ಜತೆ ಶಾಮೀಲಾಗಿದ್ದರು ಎಂಬುದನ್ನು ನೋಡಿದರೆ ಇವರ ಬಗ್ಗೆ ತಿಳಿಯುತ್ತದೆ. ಎಂದು ವಾಗ್ದಾಳಿ ನಡೆಸಿದರು.
ಮತ್ತೋರ್ವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ‘ಸಿ.ಟಿ ರವಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣುತ್ತಿದೆ. ಇದಕ್ಕೆ ಅವರ ಭಾಷೆ ಬಳಕೆಯೇ ಸಾಕ್ಷಿ. ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಅವರ ಮಾತುಗಳು ಅವರ ಆಚಾರ ವಿಚಾರವನ್ನು ತಿಳಿಸುತ್ತದೆ ಎಂದು ಕುಟುಕಿದರು.
ಇನ್ನೋರ್ವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ,‘ಮೇಕೆದಾಟು ಯೋಜನೆ ರಾಜ್ಯದ ಹಕ್ಕು. ಈಗಾಗಲೇ ಸುಪ್ರೀಂ ಕೋರ್ಟ್, ನ್ಯಾಯಾಧಿಕರಣ ತೀರ್ಪು ನೀಡಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಆದರೂ ರಾಜ್ಯದ ಹಕ್ಕನ್ನು ಕಸಿಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ತಮಿಳುನಾಡಿಗೆ ಹೆದರಿ ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಿದ್ದಾರೆ. ಸಿ.ಟಿ ರವಿ ತಮಿಳುನಾಡಿನ ಪರವಾಗಿ ವಕಾಲತ್ತು ವಹಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಿಕ್ಕಮಗಳೂರು ಜನ ರವಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ತಮಿಳುನಾಡು ಉಸ್ತುವಾರಿ ಆಗಿರುವ ಕಾರಣ ರವಿ ತಮಿಳುನಾಡಿನ ಪರ ವಕಾಲತ್ತು ವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರಿಗೆ ಛೀಮಾರಿ ಹಾಕಲಾಗಿದೆ. ಇಷ್ಟಾದರೂ ಅವರಿಗೆ ಮಾನ ಮರ್ಯಾದೆ ಇಲ್ಲ. ಅದಕ್ಕಾಗಿ ತಮಿಳುನಾಡಿನ ಪರ ಮಾತನಾಡುತ್ತಿದ್ದಾರೆ. ಅವರು ಬೇಕಾದರೆ ತಮಿಳುನಾಡಿನಲ್ಲಿ ಹೋಗಿ ವಾಸ ಮಾಡಲಿ. ನಿತ್ಯ ಹುಕ್ಕಾ ಬಾರ್ ಮಾಡುವವರು, ಹಾಡಹಗಲೇ ದರೋಡೆ ಮಾಡುವವರಿಗೆ ಅಂತಹದ್ದೇ ಆಲೋಚನೆ ಬರುತ್ತದೆ. ಇದನ್ನು ನಾನು ಖಂಡಿಸುತ್ತೇನೆ. ಇಂದಿರಾಗಾಂಧಿ ಅವರ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


