ಇನ್ನೂ ಹಂಚಿಕೆಯಾಗದ ಖಾತೆ: ಸಿಎಂ ಬೊಮ್ಮಾಯಿ ನಿವಾಸದ ಬಳಿ ತಡರಾತ್ರಿವರೆಗೂ ಕಾದು ಕುಳಿತಿದ್ದ ನೂತನ ಸಚಿವರು!
ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಬಳಿಕ ಇದೀಗ ಮಹತ್ವದ ಖಾತೆಗಳಿಗಾಗಿ ಹಗ್ಗಜಗ್ಗಾಟ ಮುಂದುವರೆದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಯಂತೆ ಶುಕ್ರವಾರವೇ ಖಾತೆಗಳ ಹಂಚಿಕೆಯಾಗಬೇಕಿತ್ತು. ಆದರೆ, ವರಿಷ್ಠರು ಗ್ರೀನ್ ಸಿಗ್ನಲ್ ನೀಡದ ಕಾರಣ ಖಾತೆಗಳ ಹಂಚಿಕೆ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಬಳಿಕ ಇದೀಗ ಮಹತ್ವದ ಖಾತೆಗಳಿಗಾಗಿ ಹಗ್ಗಜಗ್ಗಾಟ ಮುಂದುವರೆದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಯಂತೆ ಶುಕ್ರವಾರವೇ ಖಾತೆಗಳ ಹಂಚಿಕೆಯಾಗಬೇಕಿತ್ತು. ಆದರೆ, ವರಿಷ್ಠರು ಗ್ರೀನ್ ಸಿಗ್ನಲ್ ನೀಡದ ಕಾರಣ ಖಾತೆಗಳ ಹಂಚಿಕೆ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗ ಮರುದಿನವೇ ಖಾತೆಗಳು ಹಂಚಿಕೆಯಾಗಿದ್ದವು. ಆದರೆ, ಇದೀಗ ನಾಲ್ಕು ದಿನಗಳಾದರೂ ಹಂಚಿಕೆಯಾಗಿಲ್ಲ.
ಸಚಿವರಿಗೆ ವಿಧಾನಸೌಧ, ವಿಕಾಸಸೌಧ ಕೊಠಡಿಗಳನ್ನು ಹಂಚಿದ ರೀತಿಯಲ್ಲಿ ಸರಾಗವಾಗಿ ಖಾತೆಗಳು ಹಂಚಿಕೆಯಾಗುವ ನಿರೀಕ್ಷೆಗಳಿದ್ದವು. ಈ ನಡುವೆ ಹಲವು ಸಚಿವರು ನಿರ್ದಿಷ್ಟ ಖಾತೆಗೆ ಪಟ್ಟು ಹಿಡಿದಿರುವುದರಿಂದ ಮುಖ್ಯಮಂತ್ರಿಗಳು ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಮುಖ್ಯಮಂತ್ರಿಗಳಾದ ಬಳಿಕ ಬೊಮ್ಮಯಿಯವರು ಮೊದಲ ಬಾರಿಗೆ ನಿನ್ನೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಮೊದಲಿಗೆ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದ ಮುಖ್ಯಮಂತ್ರಿಗಳು ನಂತರ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಹೋಗಿ ಸಚಿವರ ಖಾತೆಯನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಈ ಬೆಳವಣಿಗೆ ಬಳಿಕ ಮುಖ್ಯಮಂತ್ರಿಗಳು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಂತೆಯೇ ಆರ್'ಟಿ ನಗರದಲ್ಲಿರುವ ಬೊಮ್ಮಾಯಿಯವರ ನಿವಾಸಕ್ಕೆ ನೂತನ ಸಚಿವರು ಹಾಗೂ ಕೆಲ ಶಾಸಕರು ಭೇಟಿ ನೀಡಿದ್ದು,ಈ ವೇಳೆ ಕೆಲ ಹಿರಿಯ ಸಚಿವರುಗಳು ಪ್ರಭಾವಿ ಖಾತೆಗಳಿಗೆ ಪಟ್ಟು ಹಿಡಿದಿದ್ದರು ಎಂದು ತಿಳಿದುಬಂದಿದೆ. ಇದರಂತೆ ತಡರಾತ್ರಿವರೆಗೂ ಸಚಿವರು ಬೊಮ್ಮಾಯಿ ನಿವಾಸದಲ್ಲಿದೇ ಕಾದು ಕುಳಿತಿದ್ದರು ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


