666 ಕೋಟಿ ರೂ. ಕಿಕ್ ಬ್ಯಾಕ್ ಆರೋಪ: ಸಿಎಂ ಯಡಿಯೂರಪ್ಪ ರಾಜೀನಾಮೆಗೆ ಸುರ್ಜೇವಾಲಾ ಒತ್ತಾಯ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಕ್ಕಳು ಮತ್ತು ಮೊಮ್ಮಕ್ಕಳು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದು, ಈ ಕುರಿತು ತಮ್ಮ ಬಳಿ ಸಾಕ್ಷ್ಯ ದಾಖಲೆಗಳಿವೆ.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಕ್ಕಳು ಮತ್ತು ಮೊಮ್ಮಕ್ಕಳು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದು, ಈ ಕುರಿತು ತಮ್ಮ ಬಳಿ ಸಾಕ್ಷ್ಯ ದಾಖಲೆಗಳಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್‌ಸಿಂಗ್ ಸುರ್ಜೇವಾಲಾ ಅವರು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲಾ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರ ಕುಟುಂಬದ ಸದಸ್ಯರು ಬಿಡಿಎ ನಲ್ಲಿ 666 ಕೋಟಿ ರೂಗಳ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ಗುತ್ತಿಗೆದಾರರಿಂದ ಲಂಚ ಸ್ವೀಕರಿಸಿದ್ದು, ಆರ್ ಟಿಜಿಎಸ್ ಮೂಲಕ ಕೊಲ್ಕತ್ತಾ, ಬೆಂಗಳೂರಿನ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಯಡಿಯೂರಪ್ಪ ಪುತ್ರ, ಮೊಮ್ಮಗ ಭಾಗಿಯಾಗಿದ್ದಾರೆ. ಇದು ಕೇವಲ ಆರೋಪವಲ್ಲ, ಸತ್ಯ. ಇದರ ಸಂಪೂರ್ಣ ದಾಖಲೆಗಳು ತಮ್ಮ ಬಳಿಯಿವೆ ಎಂದರು.
ಯಡಿಯೂರಪ್ಪ ಒಂದು ಸೆಕೆಂಡ್ ವ್ಯರ್ಥಮಾಡದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪ ಕೆಳಗಿಳಿಯಬೇಕು ಎಂದು ಸುರ್ಜೇವಾಲಾ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರ ಎರಡೂ ಒಟ್ಟಿಗೆ ಸಾಗುತ್ತಿವೆ. ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಂದು ಬಿ.ಎಸ್. ಯಡಿಯೂರಪ್ಪ ನಾಮಕಾವಸ್ತೆ ಮುಖ್ಯಮಂತ್ರಿ. ಇನ್ನೊಬ್ಬರು ಅವರ ಪುತ್ರ ಬಿ.ವೈ. ವಿಜಯೇಂದ್ರ ಸೂಪರ್ ಸಿಎಂ. ಇದಲ್ಲದೆ ಯಡಿಯೂರಪ್ಪ ಅವರ ಮೊಮ್ಮಕ್ಕಳು ಕೂಡ ನೇರವಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಡಿಎ ನಿಂದ 576 ಕೋಟಿ ರೂಪಾಯಿಗೆ ಹೌಸಗ್ ಪ್ರಾಜೆಕ್ಟ್ ಟೆಂಡರ್ ಘೋಷಣೆ ಮಾಡಲಾಗಿದೆ. ಟೆಂಡರ್ ನಲ್ಲಿ ಇಬ್ಬರು ಬಿಲ್ಡರ್ ಪಾರ್ಟಿಸಿಪೇಟ್ ಮಾಡ್ತಾರೆ. ರಾಮಲಿಂಗಂ ಕನ್ ಸ್ಟ್ರಕ್ಷನ್ ಕಂಪನಿ ಕೂಡ ಇರುತ್ತೆ. ರಾಮಲಿಂಗಂ ಕನ್ಸ್ ಸ್ಟ್ರಕ್ಷನ್ ಕಂಪನಿಗೆ 22/02/2020ರಲ್ಲಿ ಒಪ್ಪಿಗೆ ಪತ್ರವನ್ನು ನೀಡಲಾಗುತ್ತೆ. ಆ ಬಳಿಕ ವಿಜಯೇಂದ್ರ ರಾಮಲಿಂಗಂ ಕಂಪನಿ ಮಾಲೀಕರಿಗೆ ಕರೆ ಮಾಡಿ ಟೆಂಡರ್ ಕ್ಲೋಸ್ ಮಾಡುವ ಬೆದರಿಕೆ ಹಾಕುತ್ತಾರೆ. ತಮ್ಮ ಆಪ್ತ ಹೊಟೇಲ್ ಮಾಲಿಕನಿಗೆ ಹಣ ನೀಡುವಂತೆ ಸೂಚನೆ ನೀಡುತ್ತಾರೆ. ವಿಜಯೇಂದ್ರನಿಗೆ ಕೊಡುವುದಾಗಿ ಹೇಳಿ ಬಿಡಿಎ ಆಯುಕ್ತ ಪ್ರಕಾಶ್ 12 ಕೋಟಿ ಹಣ ಪಡೆಯುತ್ತಾರೆ. ಈ ವೇಳೆ ಕಂಟ್ರಾಕ್ಟರ್ ಗೆ ವಿಜಯೇಂದ್ರ ಫೋನ್ ಮಾಡಿ 'ಹಣ ಬಂದಿಲ್ಲವಲ್ಲ' ಅಂತಾ ಕೇಳುತ್ತಾರೆ. ಪ್ರಕಾಶ್ ಗೆ ಕೊಟ್ಟೆ ಅಂತಾ ಕಂಟ್ರಾಕ್ಟರ್ ಹೇಳುತ್ತಾರೆ.
ವಿಜಯೇಂದ್ರ ಪ್ರಾಮಾಣಿಕರಾಗಿದ್ದರೆ ಬಿಡಿಎ ಕಮೀಷನರ್, ಕಂಟ್ರಾಕ್ಟರ್ ಮೇಲೆ ಕೇಸ್ ಯಾಕೆ ಹಾಕಲಿಲ್ಲ. ಏಕೆಂದರೆ ಪ್ರಕಾಶ್ ಬಿಡಿಎ ಕಮೀಷನರ್ ಆಗೋಕೆ 15 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಆನಂತರ ಕಂಟ್ರಾಕ್ಟರ್ ಯಡಿಯೂರಪ್ಪ ಮೊಮ್ಮಗ ಶಶಿಧರ್ ಮರಡಿ ಅಕೌಂಟಿಗೆ 7.40 ಕೋಟಿ ರೂಪಾಯಿಗಳನ್ನು ಆರ್ ಟಿಜಿಎಸ್ ಮಾಡುತ್ತಾರೆ. ಇದು ಶೇಷಾದ್ರಿಪುರಂನ HDFC ಬ್ಯಾಂಕ್ ಅಕೌಂಟ್ ಗೆ ಹಣ ಸಂದಾಯವಾಗುತ್ತದೆ ಎಂದು ಭ್ರಷ್ಟಾಚಾರದ ಕರ್ಮಕಾಂಡವನ್ನು ಬಿಚ್ಚಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


