ತಮ್ಮ ಹಿನ್ನೆಲೆ ಬಗ್ಗೆ ಮಾತನಾಡಿದ ಸಚಿವ ಸುಧಾಕರ್ ವಿರುದ್ಧ ಹೆಚ್'ಡಿಕೆ ತೀವ್ರ ಕಿಡಿ
ತಮ್ಮ ಹಿನ್ನೆಲೆ ಬಗ್ಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಕಿಡಿಕಾರಿದ್ದಾರೆ.

ಬೆಂಗಳೂರು: ತಮ್ಮ ಹಿನ್ನೆಲೆ ಬಗ್ಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸುಧಾಕರ್ ಅವರು ನನ್ನ ಹಿನ್ನೆಲೆ ಬಗ್ಗೆ ಮಾತನಾಡಿದ್ದಾರೆ. ಬಹುಶಃ ಸುಧಾಕರ್ ಅವರಿಗೆ ಸ್ಮರಣ ಶಕ್ತಿ ಕಡಿಮೆ ಇದ್ದಂತಿದೆ. ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಹಿನ್ನೆಲೆ ಬಗ್ಗೆ ಮಾತನಾಡಿದರೆ ರಾಜ್ಯದ ಜನತೆ ನಗುತ್ತಾರೆಂದು ಕಿಡಿಕಾರಿದ್ದಾರೆ.
ಬಿಜೆಪಿ ಸಿದ್ಧಾಂತದ ಬಗ್ಗೆ ಮಾತನಾಡುವಷ್ಟು ಅರ್ಹತೆ ಸುಧಾಕರ್ ಅವರಿಗೆ ಬಂದಿದೆಯೇ ಎಂಬುದನ್ನು ಅವರ ಪಕ್ಷದ ಕಾರ್ಯಕರ್ತರು ಕೂಡ ಒಪ್ಪುವುದಿಲ್ಲ. ಡ್ರಗ್ಸ್ ಮಾಫಿಯಾ, ಬೆಟ್ಟಿಂಗ್ ದಂಧೆ ಮಾಡುವವರಿಂದ ವಸೂಲಿ ಮಾಡಿದ ಹಣದಿಂದಲೇ ನನ್ನ ಸರ್ಕಾರವನ್ನು ಬುಡಮೇಲು ಮಾಡಲಾಯಿತು ಎಂಬುದು ಸೂರ್ಯ-ಚಂದ್ರರಷ್ಟೇ ಸ್ಪಷ್ಟ. ಇದನ್ನು ಮುಂಬೈವೀರರು ಚೆನ್ನಾಗಿಯೇ ಬಲ್ಲರು. ಅದಕ್ಕೆ ಸಚಿವ ಸುಧಾಕರ್ ಹೊರತಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಸಚಿವ ಸ್ಥಾನ ಸಿಕ್ಕಿದೆ ಎಂಬ ಉತ್ಸಾಹದಲ್ಲಿ ನನ್ನ ಹಿನ್ನೆಲೆ-ಮುನ್ನೆಲೆ ಬಗೆಗೆ ಮಾತನಾಡುವುದು ಸುಧಾಕರ್ ಅವರ ನೈಜ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅಧಿಕಾರ ಶಾಶ್ವತ ಮತ್ತು ತಮ್ಮ ಸ್ವಂತ ಶಕ್ತಿ ಎಂಬ ಭ್ರಮೆಯಲ್ಲಿ ಇರುವವರು ಮಾತ್ರ ಹೀಗೆ ಮಾತನಾಡುತ್ತಾರೆ ಎಂಬುದು ನನ್ನ ಗ್ರಹಿಕೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಕಳೆದ 2 ದಶಕಗಳಿಂದ ಸುಧಾಕರ್ ಅವರು ಯಾವ್ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆಂಬ ಹಿನ್ನೆಲೆ ಬಗ್ಗೆ ನಾನು ಮಾತನಾಡಲಾರೆ. ಜನಸೇವೆಯಲ್ಲಿ ವಿಶ್ವಾಸವಿಟ್ಟು ರಚನೆಗೊಂಡು ಸರ್ಕಾರವೊಂದು ಮಾಪಿಯಾದ ಹಣದಿಂದ ಹೇಗೆ ಬುಡಮೇಲಾಯಿತು ಎಂಬುದಷ್ಟನ್ನೇ ಜನತೆಯ ಮುಂದೆ ಹೇಳಿದ್ದೇನೆ. ಆದರೆ, ಸುಧಾಕರ್ ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಉದ್ಭವಿಸಿದ್ದು ಏಕೆಂದು ಅರ್ಥವಾಗಲಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


