ರಾಜಕೀಯ

ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಸೋಂಕಿನ ವಿರುದ್ಧ ಇಷ್ಟು ನಿಧಾನದ ಕಾರ್ಯಾಚರಣೆ ಸರಿಯೇ?

ರಾಜ್ಯವನ್ನೇ ವ್ಯಾಪಿಸುತ್ತಿರುವ ಕೊರೊನಾ ವೈರಸ್‌ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದು ನಿಜವೇ ಆಗಿದ್ದರೆ, ವೈರಸ್‌ ವ್ಯಾಪಿಸುತ್ತಿರುವುದೇಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಸೋಂಕಿನ ವಿರುದ್ಧ ಇಷ್ಟು ನಿಧಾನದ ಕಾರ್ಯಾಚರಣೆ ಸರಿಯೇ?
ಎಚ್.ಡಿ ಕುಮಾರಸ್ವಾಮಿ
Published On :

ಬೆಂಗಳೂರು: ರಾಜ್ಯವನ್ನೇ ವ್ಯಾಪಿಸುತ್ತಿರುವ ಕೊರೊನಾ ವೈರಸ್‌ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದು ನಿಜವೇ ಆಗಿದ್ದರೆ, ವೈರಸ್‌ ವ್ಯಾಪಿಸುತ್ತಿರುವುದೇಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

ಕೊರೊನಾ ವೈರಸ್‌ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸರ್ಕಾರದ ಪ್ರತಿನಿಧಿಗಳು ಹೇಳುತ್ತಿರುವುದರ ನಡುವೆಯೇ ಕರ್ನಾಟಕ ಕೊರೊನಾ ಸೋಂಕು ಪೀಡಿತರ ಪಟ್ಟಿಯಲ್ಲಿ ದೇಶದಲ್ಲೇ 3ನೇ ಸ್ಥಾನಕ್ಕೇರಿದೆ. ನಿತ್ಯವೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದು ಸರ್ಕಾರದ ‘ಕಟ್ಟುನಿಟ್ಟಿನ ಕ್ರಮ’ಗಳನ್ನು ಪ್ರಶ್ನಿಸುವಂತೆ ಮಾಡಿದೆ.

ಪ್ರಧಾನಿ ಹೊರಡಿಸಿದ ಲಾಕ್‌ಡೌನ್‌ ಆದೇಶದ ಹೊರತುಪಡಿಸಿ,ವೈರಸ್‌ ತಡೆಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿರುವುದು ನಿಜವೇ ಆಗಿದ್ದರೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಸವಲತ್ತು, ರಕ್ಷಣಾ ಕವಚಗಳನ್ನು ಪೂರೈಸಿದ್ದರೆ, ಚಿಕಿತ್ಸೆಗೆ ವೈದ್ಯಕೀಯ ಸಲಕರಣೆಗಳನ್ನು ನೀಡಿದ್ದರೆ ಸೋಂಕು ಶರವೇಗದಲ್ಲಿ ವ್ಯಾಪಿಸುತ್ತಿರುವುದೇಕೆ? 

ಒಂದು ಸಾವಿರ ವೆಂಟಿಲೇಟರ್, 10 ಲಕ್ಷ ಎನ್‌95 ಮಾಸ್ಕ್‌ಗಳು , 5ಲಕ್ಷ ಕಿಟ್, 15ಲಕ್ಷ ತ್ರೀ ಲೇಯರ್‌ ಮಾಸ್ಕ್‌ ಖರೀಸುವುದಾಗಿ ಸರ್ಕಾರ ಹೇಳಿ ವಾರವಾಯ್ತು. ಒಂದು ವಾರದಲ್ಲಿ ಸೋಂಕು ತೀವ್ರಗತಿಯಲ್ಲಿ ಏರಿದೆ. ಆದರೆ ಸರ್ಕಾರ ಹೇಳಿರುವುದೆಲ್ಲವೂ ಕಾರ್ಯಗತವಾಗಿದೆಯೇ? ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಸೋಂಕಿನ ವಿರುದ್ಧ ಇಷ್ಟು ನಿಧಾನದ ಕಾರ್ಯಾಚರಣೆ ಸರಿಯೇ? ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಪ್ರೋತ್ಸಾಹ ಧನ ನೀಡುವಂತೆ ನಾನು ಕೋರಿದ್ದೆ.ಆದರೆ, ರಕ್ಷಣಾ ಕವಚವನ್ನೇ ನೀಡದಿರುವ ಬಗ್ಗೆ ಮಾಹಿತಿ ಇದೆ. ಜನ ರಸ್ತೆಗಳಿಯದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿದೆ.ಅವರಿಗೂ ಸೂಕ್ತ ರಕ್ಷಣಾ ಕವಚಗಳಿಲ್ಲ. ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಂತೆ ಪೊಲೀಸರಿಗೂ ರಕ್ಷಣಾ ಕವಚಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೊರೊನಾ ವೈರಸ್‌ ಕುರಿತ ಸುದ್ದಿಗಳನ್ನು ಮಾಧ್ಯಮಗಳಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳಿವೆ ಎಂದು ನಾನು ಮೊದಲೇ ಹೇಳಿದ್ದೆ. ಕೊರೊನಾ ನಿಯಂತ್ರಣದ ಜವಾಬ್ದಾರಿ ಒಬ್ಬ ಸಚಿವರ ಹೆಗಲಿಗೆ ವಹಿಸುವ ಮೂಲಕ ಆ ಮುಸುಕಿನ ಗುದ್ದಾಟ ಬಯಲಾಗಿದೆ. ಇದು ಮಾಧ್ಯಮಗಳಲ್ಲೂ ವರದಿಯಾಗಿದೆ. ಈ ಸಂದರ್ಭದಲ್ಲಿ ಪ್ರತಿಷ್ಠೆ ಮುಖ್ಯವಲ್ಲ ಎಂದು ಕುಟುಕಿದ್ದಾರೆ.

ಸರ್ಕಾರ ಮೊದಲು ಹೆಚ್ಚಿನ ಪ್ರಮಾಣದಲ್ಲಿ ವೈದ್ಯಕೀಯ ಪರಿಕರಗಳನ್ನು ಹೊಂದಿಸಿಕೊಳ್ಳಬೇಕು.ವೈದ್ಯರಿಗೆ ಸೂಕ್ತ ಸವಲತ್ತುಗಳನ್ನು ನೀಡಬೇಕು.ಘೋಷಣೆಗಳು ಹೇಳಿಕೆಗಳು ಅಷ್ಟಕ್ಕೆ ಸೀಮಿತವಾಗಬಾರದು,ಕಾರ್ಯರೂಪಕ್ಕೆ ಬರಬೇಕು ಇಲ್ಲವಾದರೆ ಜಗತ್ತನ್ನೇ ಆವರಿಸಿರುವ ಮಹಾಮಾರಿ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ "ಮರಣ ಮೃದಂಗ" ಬಾರಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.