ರಾಜಕೀಯ

ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿದ್ದರಾಮಯ್ಯ ಆಗ್ರಹ

ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದವರನ್ನು ಗುಂಡಿಟ್ಟುಕೊಲ್ಲಿ ಎಂದು ಬಿಜೆಪಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿದ್ದರಾಮಯ್ಯ ಆಗ್ರಹ
ಸಿದ್ದರಾಮಯ್ಯ
Published On :

ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದವರನ್ನು ಗುಂಡಿಟ್ಟುಕೊಲ್ಲಿ ಎಂದು ಬಿಜೆಪಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವಂತೆ ವಿಧಾನಸಭೆ ವಿಪಕ್ಷ ನಾಯಕ  ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಡೀ ಅಲ್ಪ ಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕೆಲವರು ಮಾತನಾಡುತ್ತಿದ್ದಾರೆ. ನಿಜಾಮುದ್ದೀನ್ಗೆ ಹೋಗಿ ಬಂದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷದ  ತಕರಾರಿಲ್ಲ. ಒಂದು ವೇಳೆ ನಿಜಾಮುದ್ದೀನ್ ಗೆ ಹೋಗಿ ಬಂದವರ ಪೈಕಿ ಯಾರಾದರೂ ದುರುದ್ದೇಶಪೂರ್ವಕವಾಗಿ ಮಾಹಿತಿ ನೀಡದೇ ಇದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ. ಆದರೆ, ಕೆಲವರು ಧಾರ್ಮಿಕ ಸಭೆಗೆ ಹೋಗಿಬಂದಿದ್ದಕ್ಕಾಗಿ ಇಡೀ ಮುಸ್ಲಿಂ ಸಮುದಾಯವನ್ನು  ಗುರಿಯಾಗಿಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ. ಒಂದು ಸಮುದಾಯದವರನ್ನು ತಪ್ಪಿತಸ್ಥರಂತೆ ಕಾಣುವುದು ದುರುದ್ದೇಶಪೂರ್ವಕವಾದ ನಡವಳಿಕೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಯತ್ನಾಳ್ ಹಾಗೂ ರೇಣುಕಾಚಾರ್ಯ ಈ ಇಬ್ಬರ ಹೇಳಿಕೆ ಖಂಡನೀಯ. ಶಾಸಕರಾದವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಗುಂಡಿಟ್ಟು ಕೊಲ್ಲಲು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿರುವ ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಬೇಕು. ಅವರು ಏನೇ ಹೇಳಿಕೆ ಕೊಟ್ಟರೂ ಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟಂತಾಗುತ್ತದೆ. ಆದ್ದರಿಂದ ರೇಣುಕಾಚಾರ್ಯ ಆ  ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಯತ್ನಾಳ್ ಹಾಗೂ ರೇಣುಕಾಚಾರ್ಯ ವಿರುದ್ಧ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.

ಅಗತ್ಯ ವಸ್ತುಗಳ ಬೆಲೆ ದಿಢೀರ್ ಏರಿಕೆಯನ್ನು ಖಂಡಿಸಿ ಮಾತನಾಡಿದ ವಿಪಕ್ಷ ನಾಯಕರು, ಲಾಕ್ ಡೌನ್ ನಿಂದ ಬಡವರು ಹಾಗೂ ಮಧ್ಯಮ ವರ್ಗದ ಜನತೆ ತೊಂದರೆಯಲ್ಲಿದ್ದಾರೆ. ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಕೆಲ ವ್ಯಾಪಾರಸ್ಥರು ಅಗತ್ಯ ವಸ್ತುಗಳ ಬೆಲೆಯನ್ನು ದಿಢೀರ್  ಏರಿಸಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದರು. ಅಗತ್ಯ ವಸ್ತುಗಳ ಬೆಲೆಯನ್ನು ಶೇ. 20-30ರಷ್ಟು ಏರಿಕೆ ಮಾಡಿದರೆ ಈಗಾಗಲೇ ಕಷ್ಟದಲ್ಲಿರುವ ಬಡವರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಅಕ್ಕಿ, ಬೇಳೆ ಬೆಲೆ ಹೆಚ್ಚಾದರೆ ಖರೀದಿ ಮಾಡುವುದಾದರೂ ಹೇಗೆ ? ಈಗಲೇ  ಅವರಿಗೆ ದುಡಿಮೆ ಇಲ್ಲ, ಹಣವೂ ಇಲ್ಲ. ಈ ಕುರಿತು ಗಮನ ಹರಿಸಿ, ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಆಹಾರ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಬೇಕು.

ಹಣ್ಣು, ತರಕಾರಿ ಸೇರಿದಂತೆ ತಾವು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವವರೇ ಇಲ್ಲ ಎಂದು ಅನೇಕ ರೈತರು ದೂರವಾಣಿ ಕರೆ ಮಾಡಿ ಅವತ್ತುಕೊಳ್ಳುತ್ತಿದ್ದಾರೆ. ಅದೇ ರೀತಿ ಭತ್ತ, ರಾಗಿಯನ್ನೂ ಖರೀದಿಸುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು. ರಾಜ್ಯದ ವಿವಿಧೆಡೆ ಇತ್ತೀಚೆಗೆ ಭಾರಿ ಮಳೆಯಾಗಿದೆ ಇದರಿಂದ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತಿತರ ಜಿಲ್ಲೆಗಳಲ್ಲಿ ಭತ್ತ, ಕಬ್ಬು, ಬಾಳೆ ಬೆಳೆಗೆ ಹಾನಿಯಾಗಿದೆ. ಎಲ್ಲೆಲ್ಲಿ ಹಾನಿಯಾಗಿದೆ. ಅಲ್ಲಿ ಪರಿಹಾರ ಕೊಡಬೇಕು. ಬೆಳೆ ನಷ್ಟ ಕುರಿತು ಸಮೀಕ್ಷೆ ನಡೆಸಬೇಕು ಎಂದರು. ಕೊರೊನಾಗಾಗಿ ಶಾಸಕರು, ಸಂಸದರ ವೇತನ ಕಡಿತ ಮಾಡುವ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ತಮ್ಮ ಸಹಮತವಿದೆ. ಸಂಕಷ್ಟದ ಸಂದರ್ಭಲ್ಲಿ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷಗಳು ಸಹಕರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರಿ ನೌಕರರ ವೇತನ ಕಡಿತ ಬೇಡ ನೌಕರರ ವೇತನ ನಿಲ್ಲಿಸುವ ಅಥವಾ ಕಡಿತ ಮಾಡುವ ನಿರ್ಧಾರ ಸರಿಯಲ್ಲ. ಈಗಾಗಲೇ ಅವರು ಒಂದು ದಿನದ ವೇತನವನ್ನು ದೇಣಿಯಾಗಿ ನೀಡಿದ್ದರಿಂದ ಕಡಿತದ ಅವಶ್ಯಕತೆಯಿಲ್ಲ. ಬೇಕಾದರೆ ಸಂಸದರು, ಶಾಸಕರ ವೇತನವನ್ನು ಇನ್ನಷ್ಟು  ವೇತನ ಕಡಿತ ಮಾಡಲಿ. ಅದಕ್ಕೆ ತಮ್ಮ ವಿರೋಧ ಇಲ್ಲ ಎಂದು ಸಲಹೆ ನೀಡಿದರು. ಒಂದು ವೇಳೆ ಏಪ್ರಿಲ್ 14 ರ ಬಳಿಕವೂ ಕ್ಡೌನ್ ಮುಂದುವರಿಸುವ ಅನಿವಾರ್ಯ ಪರಿಸ್ಥಿತಿ ಎದುರಾದರೆ ರಾಜ್ಯದ ಜನತೆ ಅದಕ್ಕೆ ಸಹಕಾರ ನೀಡಬೇಕು. ಇದಕ್ಕೆ ಪ್ರತಿಪಕ್ಷವೂ ಸಹಕರಿಸುತ್ತದೆ. ಅಗತ್ಯ  ವಸ್ತುಗಳನ್ನು ಖರೀದಿ ಮಾಡುವುದು ಹಾಗೂ ಮಾರಾಟ ಮಾಡುವುದನ್ನು ಹೊರತುಪಡಿಸಿ ಲಾಕ್ ಡೌನ್ ಬಿಗಿ ಮಾಡಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.