ಅನರ್ಹ ಶಾಸಕರನ್ನು ನಂಬಿಸಿ ತಪ್ಪು ಮಾಡಿದೆ,ನನಗೆ ಮುಖ್ಯಮಂತ್ರಿಗಿರಿ ಬೇಕಾಗಿರಲಿಲ್ಲ : ಬಿ.ಎಸ್.ಯಡಿಯೂರಪ್ಪ
ವಿರೋಧ ಪಕ್ಷದಲ್ಲಿದ್ದ ನಮ್ಮನ್ನು ಆಡಳಿತಕ್ಕೆ ತಂದಿದ್ದು ಅನರ್ಹ ಶಾಸಕರು.ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು ಎಂದು ಪಕ್ಷದ ಮುಖಂಡರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತರಾಟೆ ತೆಗೆದುಕೊಂಡಿದ್ದಾರೆ.

ಹುಬ್ಬಳ್ಳಿ: ವಿರೋಧ ಪಕ್ಷದಲ್ಲಿದ್ದ ನಮ್ಮನ್ನು ಆಡಳಿತಕ್ಕೆ ತಂದಿದ್ದು ಅನರ್ಹ ಶಾಸಕರು.ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು ಎಂದು ಪಕ್ಷದ ಮುಖಂಡರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತರಾಟೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿಉಪ ಚುನಾವಣೆಯ ಕ್ಷೇತ್ರಗಳ ಬಗ್ಗೆ ನಡೆದ ಚೆರ್ಚೆಯ ವೇಳೆ ಅನರ್ಹ ಶಾಸಕರ ವಿರುದ್ಧ ಪಕ್ಷದ ಮುಖಂಡರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರಿಂದ ಬೇಸರಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಸಭೆಯಲ್ಲಿ ಬಿಜೆಪಿ ನಾಯಕರಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಮಾತನಾಡಿದ ವಿಡಿಯೋ ಬಿಡುಗಡೆಯಾಗಿದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಚೆರ್ಚೆಗೆ ಗ್ರಾಸವಾಗಿದೆ.
‘ನೀವು ಮಾತನಾಡಿದ ಧಾಟಿ ನೋಡಿದರೆ ಸರ್ಕಾರ ಉಳಿಸುವಂತೆ ಇದೆ ಅಂತ ಅನ್ನಿಸುತ್ತಿಲ್ಲ. 17 ಶಾಸಕರ ರಾಜೀನಾಮೆ ತೀರ್ಮಾನ ನಾನು ತೆಗೆದುಕೊಂಡಿದ್ದಲ್ಲ. ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದೇ ಎರಡೂವರೆ ತಿಂಗಳು ಶಾಸಕರನ್ನು ಮುಂಬೈಯಲ್ಲಿ ಇಟ್ಟಿದ್ದು ನಿಮಗೆಲ್ಲ ಗೊತ್ತಿದೆಯಲ್ಲವೆ. ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. 3–4 ಬಾರಿ ಸಿ.ಎಂ ಆಗಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಉತ್ತಮ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ಅಪೇಕ್ಷೆ ಆಗಿತ್ತು. ದೊಡ್ಡತನ, ಧಾರಾಳತನ ನಿಮಗೆ ಇಲ್ಲವಲ್ಲ. ವಾಸ್ತವಿಕ ಸ್ಥಿತಿಯನ್ನು ತಿಳಿದುಕೊಳ್ಳದೇ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತೀರಿ. ಎರಡು ಕ್ಷೇತ್ರಗಳ (ಅಥಣಿ, ಕಾಗವಾಡ) ಬಗ್ಗೆ ನಿಮ್ಮಿಂದ ಇಂತಹ ಅಭಿಪ್ರಾಯ ನಿರೀಕ್ಷಿಸಿರಲಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿ. ಇಲ್ಲಿ ಹೇಳಿದ ಮಾತು ನಾಲ್ಕು ಗೋಡೆಗಳ ಮಧ್ಯೆ ಇರಲಿ. ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲೂ ಇಲ್ಲ ಎಂದು ಬಿಎಸ್ ವೈ ಅಸಹಾಯಕತೆ ತೋಡಿಕೊಂಡಿದ್ದಾರೆ.
‘ನಾನೇ ಅಪರಾಧ ಮಾಡಿದ್ದೇನೆ. ಅವರನ್ನು (17 ಶಾಸಕರು) ನಂಬಿಸಿ, ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಅಪರಾಧ ಮಾಡಿದ್ದೇನೆ. ಉಪಚುನಾವಣೆಯಲ್ಲಿ ಸೋಲೊ, ಗೆಲುವೊ ಬೇರೆ ಪ್ರಶ್ನೆ. ಆದರೆ, ಯಾರೊಬ್ಬರ ಬಾಯಲ್ಲೂ ಅವರೆಲ್ಲ (ಅನರ್ಹ ಶಾಸಕರು) ತ್ಯಾಗ ಮಾಡಿದ್ದರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಮಾತು ಬರಲಿಲ್ಲ. ಅವರು ಮೂರ್ಖರು, ಹುಚ್ಚರು. ನಮ್ಮನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಅವರಿಗೆ ಆ ಅಗತ್ಯವಾದರೂ ಏನಿತ್ತು? ಎರಡು– ಮೂರು ತಿಂಗಳು ಮುಂಬೈನಲ್ಲಿ ಇದ್ದರು. ಕ್ಷೇತ್ರಗಳತ್ತ ಮುಖ ಮಾಡಲಿಲ್ಲ. ಹೆಂಡತಿ, ಮಕ್ಕಳ ಮುಖವನ್ನೂ ನೋಡಲಿಲ್ಲ. ಅದೆಲ್ಲ ನಿಮಗೆ ಗೊತ್ತಿರುವುದೇ. ರಾಜೀನಾಮೆ ಕೊಟ್ಟು ಬಂದವರು ಮೂರ್ಖರಾ? ಇಲ್ಲಿ ನಿಂತು ಉಪದೇಶ, ಭಾಷಣ ಮಾಡುತ್ತೀರಿ. ನೀವು ಅವರ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ. ನಾನು ಮಾತನಾಡಿದ್ದು ಸುದ್ದಿ ಮಾಡಿಸುತ್ತೀರಿ ಎಂಬುದೂ ಗೊತ್ತಿದೆ ಎಂದು ಬಿಎಸ್ ವೈ ಹೇಳಿದ್ದಾರೆ.
ಇದೇ ವೇಳೆ ಶಾಸಕರ ಬಂಡಾಯದ ಹಿಂದೆ ಕಾಣದ ಕೈಗಳ ವಾಡದ ಕುರಿತು ಶಂಕೆ ವ್ಯಕ್ತಪಡಿಸಿದ ಬಿಎಸ್ ವೈ, 'ಯಾರನ್ನು ತೃಪ್ತಿ ಪಡಿಸಲು ಹೀಗೆಲ್ಲ ಮಾಡುತ್ತಿದ್ದೀರಿ. ನಾನೂ ಪಕ್ಷದ ಅಧ್ಯಕ್ಷನಾಗಿದ್ದೆ. ಎಲ್ಲೂ ಅಸಹಕಾರ ತೋರಿಸಿರಲಿಲ್ಲ. ನಿಮ್ಮೆಲ್ಲರಿಂದ ನೋವು ನಿರೀಕ್ಷೆ ಮಾಡಿರಲಿಲ್ಲ. ಲಕ್ಷ್ಮಣ ಸವದಿ ಕ್ಷೇತ್ರದ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ನಿಮ್ಮ ಬಾಯಲ್ಲಿ ರಾಜು ಕಾಗೆ ಹೆಸರು ಬಂದಿದೆ. ಕಾಗವಾಡದಲ್ಲಿ ಕಾಗೆ 30 ಸಾವಿರಕ್ಕೂ ಹೆಚ್ಚು ಓಟುಗಳಿಂದ ಸೋತಿಲ್ಲವೆ... ನೀವೆಲ್ಲ ಮಾತನಾಡಿದ್ದು ಎಷ್ಟರ ಮಟ್ಟಿಗೆ ಸರಿ. ಮಂತ್ರಿಗಳು, ಕೇಂದ್ರ ಮಂತ್ರಿಗಳ ಅಭಿಪ್ರಾಯ ಏನಿದೆ ಗೊತ್ತಿಲ್ಲ. ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಈ ಸಭೆಗೆ ಬರಬಾರದಾಗಿತ್ತು. ಬಂದು ತಪ್ಪು ಮಾಡಿದೆ ಎಂದು ಯಡಿಯೂರಪ್ಪ ನೊಂದು ಹೇಳಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


