ಮುಂದುವರೆದ ಹೈಡ್ರಾಮಾ; ಅತೃಪ್ತ ಶಾಸಕ ಸೋಮಶೇಖರ್ ಗಾಗಿ ಕಾದು ಕುಳಿತ ಡಿಕೆಶಿ, ಮತ್ತೆ ಕೈ ಕೊಟ್ಟ ಶಾಸಕ
ಕರ್ನಾಟಕ ರಾಜಕೀಯ ಹೈಡ್ರಾಮ ತಡರಾತ್ರಿಯೂ ಮುಂದುವರೆದಿದ್ದು, ಶನಿವಾರ ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ತಡರಾತ್ರಿ ಸುಮಾರು 1 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು.

Published On :
ಬೆಂಗಳೂರು: ಕರ್ನಾಟಕ ರಾಜಕೀಯ ಹೈಡ್ರಾಮ ತಡರಾತ್ರಿಯೂ ಮುಂದುವರೆದಿದ್ದು, ಶನಿವಾರ ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ತಡರಾತ್ರಿ ಸುಮಾರು 1 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು.
ಎಸ್.ಟಿ.ಸೋಮಶೇಖರ್ ಆಗಮಿಸುತ್ತಿದ್ದಂತೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಾಣಿಸಿಕೊಂಡರು. ವಿಮಾನ ನಿಲ್ದಾಣದಿಂದ ಎಸ್.ಟಿ.ಸೋಮಶೇಖರ್ ಹೊರ ಬರುತ್ತಿದ್ದಂತೆ ಮಾಧ್ಯಮಗಳನ್ನು ಕಂಡ ಕೂಡಲೇ ಬಿಜೆಪಿ ಶಾಸಕರು ಅಂತರ ಕಾಯ್ದುಕೊಂಡರು. ಇತ್ತ ಸೋಮಶೇಖರ್ ಕಾರನ್ನು ಹಿಂಬಾಲಿಸಿಕೊಂಡು ಎಸ್.ಆರ್.ವಿಶ್ವನಾಥ್ ಹೋದರು. ಮಾಜಿ ಡಿಸಿಎಂ ಆರ್.ಅಶೋಕ್ ಅವರ ಸುಪರ್ದಿಯಲ್ಲಿಯೇ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, ನಾನು ಎಲ್ಲಿಯೂ ಹೋಗಿಲ್ಲ. ಈಗ ಬೆಂಗಳೂರಿಗೆ ಬಂದಿದ್ದೇನೆ. ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ನಲ್ಲಿಯೇ ಇದ್ದೇನೆ ಎಂದು ಹೇಳಿದರು. ಇಂದು ಕರ್ನಾಟಕ ವಸತಿ ಮಹಾಮಂಡಳಿ ಚುನಾವಣೆ ಹಿನ್ನೆಲೆ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅತೃಪ್ತರ ಶಾಸಕರು ತಮ್ಮ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಸುಪ್ರೀಂಕೋರ್ಟ್ ಗೆ ಬುಧವಾರ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್ ಆದೇಶವನ್ನು ನೋಡಿಕೊಂಡು ಅತೃಪ್ತರು ಬೆಂಗಳೂರಿಗೆ ಬರುವ ಕುರಿತು ಪ್ಲಾನ್ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಮಧ್ಯ ರಾತ್ರಿಯವರೆಗೂ ಶಾಸಕನ ಮನೆ ಮುಂದೆ ಕಾದು ಕುಳಿತಿದ್ದ ಡಿಕೆಶಿ
ಏತನ್ಮಧ್ಯೆ ಬೆಂಗಳೂರಿಗೆ ಆಗಮಿಸಿದ ಅತೃಪ್ತ ಶಾಸಕ ಎಸ್ ಟಿ ಸೋಮಶೇಖರ್ ಅವರ ಮನವೊಲಿಕೆಗೆ ಸಚಿವ ಡಿಕೆ ಶಿವಕುಮಾರ್ ಯತ್ನಿಸಿದ್ದು, ಮತ್ತೆ ವಿಫಲರಾಗಿದ್ದಾರೆ. ಮಧ್ಯ ರಾತ್ರಿಯವರೆಗೂ ಶಾಸಕನ ಮನೆ ಮುಂದೆ ಡಿಕೆ ಶಿವಕುಮಾರ್ ಕಾದು ಕುಳಿತಿದ್ದರು. ಆದರೆ ಸೋಮಶೇಖರ್ ಮಾತ್ರ ಮನೆಗೆ ಬಾರದೇ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruDK Shivakumarಡಿಕೆ ಶಿವಕುಮಾರ್ಶಾಸಕ ಸೋಮಶೇಖರ್Karnataka politicsಕರ್ನಾಟಕ ರಾಜಕೀಯMLA Somashekar
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


