ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ; ಪೂರ್ವ ನಿಯೋಜಿತವೇ, ಆಂತರಿಕ ಕೃತ್ಯವೇ?
ರಾಜ್ಯ ರಾಜಕೀಯ ಪಕ್ಷಗಳ ಮೂಲಗಳ ಪ್ರಕಾರ ನಿನ್ನೆ ಶಾಸಕರ ರಾಜೀನಾಮೆ ಪೂರ್ವ ನಿಯೋಜಿತ ಎಂಬುದು ಬಲ್ಲ ಆಂತರಿಕ ಮೂಲಗಳ ...

Published On :
ಬೆಂಗಳೂರು: ರಾಜ್ಯ ರಾಜಕೀಯ ಪಕ್ಷಗಳ ಮೂಲಗಳ ಪ್ರಕಾರ ನಿನ್ನೆ ಶಾಸಕರ ರಾಜೀನಾಮೆ ಪೂರ್ವ ನಿಯೋಜಿತ ಎಂಬುದು ಬಲ್ಲ ಆಂತರಿಕ ಮೂಲಗಳ ಹೇಳಿಕೆ. ಹಾಗಾದರೆ ಇಷ್ಟೊಂದು ಶಾಸಕರ ರಾಜೀನಾಮೆಗೆ ಕಾರಣಕರ್ತರು ಯಾರು ಎಂಬುದು ಪ್ರಶ್ನೆ.
ರಾಜೀನಾಮೆ ನೀಡಿದ ಶಾಸಕರು ನಿರಂತರವಾಗಿ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಸಂಪರ್ಕದಲ್ಲಿದ್ದರು. ರಮೇಶ್ ಜಾರಕಿಹೊಳಿ ನಿನ್ನೆ ಮುಂಬೈಗೆ ಪ್ರಯಾಣ ಬೆಳೆಸಿದ್ದು ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಬಿಜೆಪಿಯ ಹಿರಿಯ ಸಚಿವರಿಗೆ ನಿಕಟವರ್ತಿಯಾಗಿದ್ದಾರೆ.
ಅವರೇ ಶಾಸಕರ ರಾಜೀನಾಮೆಯ ಯೋಜನೆ ರೂಪಿಸಿದ್ದು ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ನಾಯಕರ ಸಂಪರ್ಕದಿಂದ ದೂರವಿರಲು ಮುಂಬೈಗೆ ಕರೆಸಿಕೊಂಡು ಹೋಗಿದ್ದಾರೆ. ಎಲ್ಲಾ 10 ಶಾಸಕರನ್ನು ಮುಂಬೈಯ ಸಿಬಿಐ ಕಚೇರಿ ಹತ್ತಿರವಿರುವ ಸ್ಟಾರ್ ಪ್ರೊಪರ್ಟಿ ಹೊಟೇಲ್ ನಲ್ಲಿ ಇರಿಸಲಾಗಿದೆ.
ಜೆಡಿಎಸ್ ನ ಮಾಜಿ ರಾಜ್ಯಾಧ್ಯಕ್ಷ ಎ ಎಚ್ ವಿಶ್ವನಾಥ್ ಅವರು ಅಧಿಕಾರವನ್ನು ಹಸ್ತಾಂತರಿಸುವುದಕ್ಕೆ ಕಾಯುತ್ತಿದ್ದರು. ಮೊನ್ನೆ 4ರಂದು ಅವರು ಹೆಚ್ ಕೆ ಕುಮಾರಸ್ವಾಮಿಗೆ ಅಧಿಕಾರ ಹಸ್ತಾಂತರಿಸಿದ ನಂತರ ಶಾಸಕರು ನಿನ್ನೆ ರಾಜೀನಾಮೆ ನೀಡಿದ್ದಾರೆ. ನಂತರ ರಾಜೀನಾಮೆ ಕೊಟ್ಟಿದ್ದಾರೆ. ಅದು ವಿಶ್ವನಾಥ್ ನೇತೃತ್ವದಲ್ಲಿ, ನಿನ್ನೆ ರಾಜೀನಾಮೆ ನೀಡಿದ ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ತಮಗೆ ರಕ್ಷಣೆ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ರಾಜ್ಯ ಬಿಜೆಪಿ ನಾಯಕರು ದೂರದಲ್ಲಿ ಕುಳಿತು ನೋಡಲು ಬಯಸುತ್ತಿದ್ದಾರೆ. ಸಿದ್ದರಾಮಯ್ಯನವರು ಸದ್ಯದ ಬಿಕ್ಕಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಗಮನಿಸುತ್ತಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಮೂವರಾದ ಭೈರತಿ ಬಸವರಾಜ್, ಸೋಮಶೇಖರ್ ಮತ್ತು ಬಿ ಸಿ ಪಾಟೀಲ್ ಸಿದ್ದರಾಮಯ್ಯನವರ ನಿಷ್ಠಾವಂತರು ಎಂದು ಹೇಳಲಾಗುತ್ತಿತ್ತು. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿದರೆ ಇವರು ರಾಜೀನಾಮೆಯನ್ನು ಹಿಂತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಮೇಲ್ನೋಟಕ್ಕೆ ತಮ್ಮ ಆತ್ಮೀಯ ಶಾಸಕರು ರಾಜೀನಾಮೆ ನೀಡಿರುವುದು ಆಘಾತ, ಆಶ್ಚರ್ಯ ತಂದಿದೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಕಳೆದ ವಾರ ಭೈರತಿ ಸುರೇಶ್ ಮತ್ತು ಸಚಿವ ಕೆ ಜೆ ಜಾರ್ಜ್ ಅವರ ಮಧ್ಯೆ ಹಿರಿಯ ಅಧಿಕಾರಿಯೊಬ್ಬರ ರಾಜೀನಾಮೆ ವಿಚಾರದಲ್ಲಿ ವಾಗ್ವಾದ ನಡೆದು ಅದನ್ನು ಸಿದ್ದರಾಮಯ್ಯನವರೇ ಬಗೆಹರಿಸಿದ್ದರು. ಆಗ ಬಸವರಾಜ್ ಅವರು ಪಕ್ಷ ತೊರೆಯುವ ಬೆದರಿಕೆಯನ್ನು ಒಡ್ಡಿದ್ದರು. ಇದೇ ರೀತಿಯ ಪರಿಸ್ಥಿತಿ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಅವರ ವಿಚಾರದಲ್ಲಿ ಕೂಡ ಆಗಿದೆ. ಸಿಎಂ ಕುಮಾರಸ್ವಾಮಿಗೆ ಆಪ್ತರಾದವರೊಬ್ಬರ ಐಎಎಸ್ ಅಧಿಕಾರಿ ವರ್ಗಾವಣೆ ವಿಚಾರದಲ್ಲಿ ಅವರು ಕೂಡ ಅಸಮಾಧಾನಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ResignationSiddaramaiahಸಿದ್ದರಾಮಯ್ಯರಾಜೀನಾಮೆKarnatakaಕರ್ನಾಟಕಕಾಂಗ್ರೆಸ್-ಜೆಡಿಎಸ್ ಶಾಸಕರುCongress-JDS legislators
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


