ರಾಜಕೀಯ

ಸಂಪುಟ ವಿಸ್ತರಣೆ: ಆಕಾಂಕ್ಷಿಗಳಿಗೆ 'ಸಾಂತಾ ಕ್ಲಾಸ್'ರಂತೆ ಕಾಣುತ್ತಿದ್ದಾರೆ ಸಿಎಂ ಯಡಿಯೂರಪ್ಪ

ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿ ಸರ್ಕಾರ ಸುಭದ್ರಗೊಂಡು ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿರುವಾಗಲೇ ಸಚಿವ ಸ್ಥಾನಕ್ಕೆ ಲಾಬಿ ಆರಂಭವಾಗಿದ್ದು, ಇದೀಗ ಸಚಿವಾಕಾಂಕ್ಷಿಗಳಿಗೆ ಸಿಎಂ ಯಡಿಯೂರಪ್ಪ ಅವರು ಕ್ರಿಸ್ ಮಸ್ ವೇಳೆ ಉಡುಗೊರೆ ನೀಡುವ ಕ್ರಿಸ್ ಮಸ್ ತಾತಾ 'ಸಾಂತಾ ಕ್ಲಾಸ್' ರಂತೆ ಕಾಣಿಸಲು ಆರಂಭಿಸಿದ್ದಾರೆ.

ಸಂಪುಟ ವಿಸ್ತರಣೆ: ಆಕಾಂಕ್ಷಿಗಳಿಗೆ 'ಸಾಂತಾ ಕ್ಲಾಸ್'ರಂತೆ ಕಾಣುತ್ತಿದ್ದಾರೆ ಸಿಎಂ ಯಡಿಯೂರಪ್ಪ
ಯಡಿಯೂರಪ್ಪ
Published On :

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿ ಸರ್ಕಾರ ಸುಭದ್ರಗೊಂಡು ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿರುವಾಗಲೇ ಸಚಿವ ಸ್ಥಾನಕ್ಕೆ ಲಾಬಿ ಆರಂಭವಾಗಿದ್ದು, ಇದೀಗ ಸಚಿವಾಕಾಂಕ್ಷಿಗಳಿಗೆ ಸಿಎಂ ಯಡಿಯೂರಪ್ಪ ಅವರು ಕ್ರಿಸ್ ಮಸ್ ವೇಳೆ ಉಡುಗೊರೆ ನೀಡುವ ಕ್ರಿಸ್ ಮಸ್ ತಾತಾ 'ಸಾಂತಾ ಕ್ಲಾಸ್' ರಂತೆ ಕಾಣಿಸಲು ಆರಂಭಿಸಿದ್ದಾರೆ. 

ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡುತ್ತಿದ್ದು, ಸಮಾಲೋಚನೆ ನಡೆಸುತ್ತಿದ್ದಾರೆ. ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ನಾರಾಯಣಗೌಡ ಸೇರಿದೆತ ಹಲವು ಮುಖಂಡರು ಡಾಲರ್ಸ್ ಕಾಲೋನಿಯಲ್ಲಿನ ಮುಖ್ಯಮಂತ್ರಿಗಳ ನಿವಾಸಕ್ಕೆ ಮಂಗಳವಾರ ಆಗಮಿಸಿದ್ದು, ಈ ವೇಳೆ ಸಚಿವ ಸ್ಥಾನದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. 

ಇದೇ ವೇಳೆ ತಮ್ಮ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆ ರೆಡ್ಡಿ ಲಿಂಗಾಯತ ಶಾಸಕರ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಈ ನಿಯೋಗದಲ್ಲಿ ಎ.ಎಸ್.ಪಾಟೀಲ್ ನಡಹಳ್ಳಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಸೋಮನಗೌಡ ಪಾಟೀಲ್, ವೆಂಕಟರೆಡ್ಡಿ ಮುದ್ನಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ರಮೇಶ್ ಜಾರಕಿಹೊಳಿಯವರನ್ನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪ್ರಮುಖ ಖಾತೆಗಳಿಗೆ ಹಾಗೂ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. 

ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಆಯ್ಕೆಯಾಗಿರುವ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಸಹ ಸಮಾಲೋಚನೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. 

ಆರೋಗ್ಯ ಸಚಿವ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಇಬ್ಬರೂ ಡಿಸಿಎಂ ಆಕಾಂಕ್ಷಿಗಳಾಗಿದ್ದಾರೆ. ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಕೂಗ ಕೇಳಿಬಂದಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕೋರಿದ್ದಾರೆಂದು ಹೇಳಲಾಗುತ್ತಿದೆ. 

ಉಮೇಶ್ ಕತ್ತಿ ಕೂಡ ತಮಗೆ ಸಚಿವ ಸ್ಥಾನ ನೀಡುವಂತೆ ಲಾಬಿ ನಡೆಸಿದ್ದಾರೆಂದು ಹೇಳಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕತ್ತಿ ಸಮಾಲೋಚನೆ ನಡೆಸಿದರು. 

ಮರಾಠ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಗವಾಡ ಶಾಸಕ ಶ್ರೀಮಂತ ಪಾಲೀಟ್ ಅವರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಮರಾಠ ಜನಾಂಗವನ್ನು 3ಬಿಯಿಂದ 2ಎಗೆ ಸೇರ್ಪಡೆ ಮಾಡಬೇಕು. ಮರಾಠ ಸಮಾಜಕ್ಕೆ ಅಭಿವೃದ್ಧಿ ನಿಗಮ ಮಂಡಳಿ ರಚನೆ ಮಾಡಬೇಕು. ಜಿಲ್ಲಾಮಟ್ಟದಲ್ಲಿ ಸಮಾಜವನ್ನು ಗುರುತಿಸಿ ಸದಸ್ಯ, ನಿರ್ದೇಶಕನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು. ಶಾಸಕ ಸೋಮಶೇಖರ ರೆಡ್ಡಿ ಕೂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಚಿವ ಶ್ರೀ ರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಮನವಿ ಮಾಡಿಕೊಂಡರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.