ರಾಜಕೀಯ

ಸರ್ಕಾರ ಬಿದ್ದು ಹೋಗದಂತೆ ನೋಡಿಕೊಳ್ಳಿ; ಕಾಂಗ್ರೆಸ್ ನಾಯಕರಿಗೆ ರಾಹುಲ್ ಸೂಚನೆ

ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಉಂಟಾಗಿರುವ ಭಿನ್ನಮತ ಹೈಕಮಾಂಡ್ ...

ಸರ್ಕಾರ ಬಿದ್ದು ಹೋಗದಂತೆ ನೋಡಿಕೊಳ್ಳಿ; ಕಾಂಗ್ರೆಸ್ ನಾಯಕರಿಗೆ ರಾಹುಲ್ ಸೂಚನೆ
ರಾಹುಲ್ ಗಾಂಧಿ
Published On :

ನವದೆಹಲಿ/ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಉಂಟಾಗಿರುವ ಭಿನ್ನಮತ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಮೈತ್ರಿ ಸರ್ಕಾರವನ್ನು ಸ್ಥಿರವಾಗಿಡಲು ಸಾಧ್ಯವಾದ ಪ್ರಯತ್ನಗಳನ್ನೆಲ್ಲಾ ಮಾಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರಿಗೆ ಪಕ್ಷದ ನಾಯಕರೊಳಗಿನ ಭಿನ್ನಮತವನ್ನು ಶಮನಗೊಳಿಸುವ ಜವಾಬ್ದಾರಿಯನ್ನು ರಾಹುಲ್ ಗಾಂಧಿ ವಹಿಸಿದ್ದಾರೆ.

ಪಕ್ಷದೊಳಗಿನ ಭಿನ್ನಮತ ಸರ್ಕಾರ ಉಳಿಸುವುದಕ್ಕೆ ಕಷ್ಟಸಾಧ್ಯ ಎಂಬ ಪರಿಸ್ಥಿತಿಗೆ ಹೋಗಿ ತಲುಪಿರುವುದಕ್ಕೆ ರಾಹುಲ್ ಗಾಂಧಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೆಡಿಎಸ್ ಜೊತೆಗಿನ ಮೈತ್ರಿಗೆ ಯಾವುದೇ ತೊಂದರೆಯುಂಟಾಗದಂತೆ ಕಾಪಾಡಬೇಕೆಂದು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜಾರಕಿಹೊಳಿ ಸೋದರರಿಗೆ ರಾಹುಲ್ ಗಾಂಧಿ ಕಡೆಯಿಂದ ಬುದ್ದಿಮಾತು ಹೇಳಿಸಲಾಗಿದ್ದು ಅವರು ಬಂಡಾಯದಿಂದ ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಯಾವ ಕಾರಣಕ್ಕೂ ಬೀಳಲು ಬಿಡಬಾರದು, ಲೋಕಸಭೆ ಚುನಾವಣೆಯವರೆಗಾದರೂ ಮೈತ್ರಿ ಸರ್ಕಾರ ಬಾಳ್ವಿಕೆ ಬರಬೇಕೆಂದು ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ. ವಿಧಾನ ಪರಿಷತ್ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ತಮ್ಮನ್ನು ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಾ ಜಿ ಪರಮೇಶ್ವರ್, ಸಿದ್ದರಾಮಯ್ಯ, ಕೆ ಸಿ ವೇಣುಗೋಪಾಲ್ ಅವರಿಗೆ ರಾಹುಲ್ ಈ ಸೂಚನೆ ನೀಡಿದ್ದಾರೆ.

ಸರ್ಕಾರ ಉರುಳಿಸಲು ಬಿಜೆಪಿ ನಾನಾ ತಂತ್ರಗಳನ್ನು ಮಾಡಬಹುದು. ಆಪರೇಷನ್ ಕಮಲಕ್ಕೂ ಮುಂದಾಗಬಹುದು. ಆದರೆ ಕಾಂಗ್ರೆಸ್ ನ ಶಾಸಕರು ಆಮಿಷಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಾಯಕರ ಮೇಲಿದೆ. ಕಾಂಗ್ರೆಸ್ ನ ಎಲ್ಲಾ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಸರ್ಕಾರದ ಮಟ್ಟದಲ್ಲಿ ಶಾಸಕರ ಕೆಲಸ ಆಗುವಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಗೆ ರಾಹುಲ್ ಗಾಂಧಿ ನಿರ್ದೇಶನ ನೀಡಿದ್ದಾರೆ.

ಭೇಟಿ ಸಂದರ್ಭದಲ್ಲಿ ರಾಜ್ಯ ನಾಯಕರು ವಿಧಾನ ಪರಿಷತ್ ಚುನಾವಣೆಯ ಸ್ಪರ್ಧೆಯ ಆಕಾಂಕ್ಷಿಗಳ 20 ಮಂದಿಯ ಹೆಸರನ್ನು ರಾಹುಲ್ ಗಾಂಧಿಯವರ ಮುಂದಿಟ್ಟಿದ್ದು, ಮೂರು ಖಾಲಿ ಸ್ಥಾನಗಳಿಗೆ ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಿ ಅದರಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ.

ಈ ಮಧ್ಯೆ ನಿನ್ನೆ ರಮೇಶ್ ಜಾರಕಿಹೊಳಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು ಭಿನ್ನಾಭಿಪ್ರಾಯ ಸದ್ಯದ ಮಟ್ಟಿಗೆ ಶಮನವಾಗಿದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.