'ಕೈ'ನಲ್ಲಿ ಸ್ಫೋಟಗೊಂಡ ಆಂತರಿಕ ಭಿನ್ನಮತ: ಬಹಿರಂಗವಾಗಿಯೇ ವಾಕ್ಸಮರಕ್ಕಿಳಿದ ನಾಯಕರು
ಕಾಂಗ್ರೆಸ್ ನಾಯಕರ ಗುಂಪುಗಾರಿಕೆ, ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ರಾಜ್ಯ ಉಸ್ತುತವಾರಿ ಕೆ.ಸಿ.ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯಲ್ಲಿ ನಾಯಕರು ಬಹಿರಂಗವಾಗಿಯೇ ವಾಕ್ಸಮರಕ್ಕಿಳಿದ ಘಟನೆ ನಡೆದಿದೆ...

Published On :
ಬೆಂಗಳೂರು: ಕಾಂಗ್ರೆಸ್ ನಾಯಕರ ಗುಂಪುಗಾರಿಕೆ, ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ರಾಜ್ಯ ಉಸ್ತುತವಾರಿ ಕೆ.ಸಿ.ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯಲ್ಲಿ ನಾಯಕರು ಬಹಿರಂಗವಾಗಿಯೇ ವಾಕ್ಸಮರಕ್ಕಿಳಿದ ಘಟನೆ ನಡೆದಿದೆ.
ನಾಯಕರ ಆಟಾಟೋಪ ಯಾವ ಪ್ರಮಾಣದಲ್ಲಿತ್ತು ಎಂದರೆ, ಸಭೆ ವೇಳೆ ವಾಕ್ಸಮರಕ್ಕಿಳಿದ ನಾಯಕರನ್ನು ಹತೋಟಿಗೆ ತರಲು ಸಾಧ್ಯವಾಗದೆ ವೇಣುಗೋಪಾಲ್ ಅವರು ಕೊನೆಗೆ ಸಭೆಯನ್ನೇ ಅರ್ಧಕ್ಕೇ ರದ್ದು ಮಾಡಬೇಕಾಗಿ ಬಂದಿತ್ತು.
ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ಸಂಜೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರ ಸಭೆ ನಡೆದಿದ್ದು, ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಅರ್ಹರ ಪಟ್ಟಿ ಸಿದ್ಧಪಡಿಸಲು ಚರ್ಚೆ ನಡೆಸುವ ಉದ್ದೇಶ ಹೊಂದಿದ್ದರು.
ಸಭೆ ಆರಂಭವಾಗುತ್ತಿದ್ದಂತೆಯೇ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಅವರು ಇರುವುದರಿಂದ ಅವರ ಏಕೈಕ ಹೆಸರನ್ನು ಪಟ್ಟಿಯಲ್ಲಿ ಇಡುವುದು ಸೂಕ್ತ ಎಂಬ ಚರ್ಚೆ ನಡೆದಿದೆ.
ಇದಾದ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅರ್ಹ ಅಭ್ಯರ್ಥಿ ಆಯ್ಕೆವಿಚಾರ ಪ್ರಸ್ತಾಪವಾದಾಗ, ಶಾಸಕ ಫಿರೋಜ್ ಸೇಠ್ ಅವರು ಜಿಲ್ಲೆಯಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಒಂದರಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿಯವರು, ಎರಡರಲ್ಲಿ ಒಂದು ಮುಸ್ಲಿಮರಿಗೆ ನೀಡಬೇಕು ಎಂದರೆ ಹೇಗೆ? ಈಗಾಗಲೇ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿಯವರಿದ್ದಾರೆ. ಅವರಿಗೇ ಮತ್ತೆ ಟಿಕೆಟ್ ನೀಡಬೇಕಾಗುತ್ತದೆ. ಇನ್ನು ಉಳಿದಿರುವ ಬೆಳಗಾವಿ ಕ್ಷೇತ್ರ. ಅದನ್ನು ಕಡ್ಡಾಯವಾಗಿ ಮುಸ್ಲಿಮರಿಗೇ ನೀಡಬೇಕು ಎಂದು ನೀವು ಹೇಳಿದಂತಾಗುತ್ತದೆ. ಇದು ಸರಿಯಲ್ಲ ಎಂದು ವಾದಿಸಿದರು.
ಇದಕ್ಕೆ ಒಪ್ಪದ ಫಿರೋಜ್ ಸೇಠ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್'ಗೆ ಮತ ನೀಡಿರುವುದೇ ಮುಸ್ಲಿಮರು. ಮುಸ್ಲಿಮರಿಗೆ ಟಿಕೆಟ್ ನೀಡದಿದ್ದರೆ ಹೇಗೆ? ಟಿಕೆಟ್ ಗಾಗಿ ಒತ್ತಾಯ ಮಾಡುತ್ತಿರುವ ನಾಯಕರ ಸಮುದಾಯಗಳು ಕಾಂಗ್ರೆಸ್'ಗೆ ಬೆಂಬಲ ನೀಡಿಲ್ಲ. ಆದರೆ, ಬೆಂಬಲ ನೀಡಿದ ಸಮುದಾಯವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ವಾದಿಸಿದರು.
ಫಿರೋಜ್ ಸೇಠ್ ಈ ಮಾತು ರಮೇಶ್ ಜಾರಕಿಹೊಳಿಯವರನ್ನು ಕೆರಳಿಸಿದ್ದು, ಬೆಳಗಾವಿಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿದರೆ ನಾವು ಪಕ್ಷದ ಪರ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದರು.
ಈ ಹಂತದಲ್ಲಿ ಫಿರೋಜ್ ಹಾಗೂ ರಮೇಶ್ ನಡುವೆ ತೀವ್ರ ವಾಕ್ಸಮರವೂ ನಡೆಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಡಿ.ಕೆ.ಶಿವಕುಮಾರ್ ಮಧ್ಯಪ್ರವೇಶಿಸಲು ಮುಂದಾದಾಗ ರಮೇಶ್ ಜಾರಕಿಹೊಳಿ ಹಾಗೂ ಶಿವಕುಮಾರ್ ನಡುವೆಯೂ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಘಟನಾಘಟಿ ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್, ಶಿವಕುಮಾರ್ ಅವರ ಸಮ್ಮುಖದಲ್ಲಿಯೇ ತಾರಕ ಸ್ವರದಲ್ಲಿ ನಡೆದ ಈ ವಾಕ್ಸಮರವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆಯೇ ವೇಣುಗೋಪಾಲ್ ಅವರು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು ಎಂದು ಮೂಲಗಳಿ ತಿಳಿಸಿವೆ.
ವೇಣುಗೋಪಾಲ್ ಮುಂದೆ ಬಂದ ರಮೇಶ್-ಲಕ್ಷ್ಮೀ ಸಮರ
ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಬೆಳಿಗ್ಗೆಯಿಂದಲೇ ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನಲೆಯಲ್ಲಿ ವಿವಿಧ ಲೋಕಸಭಾ ಕ್ಷೇತ್ರಗಳ ನಾಯಕರ ಸಭೆ ನಡೆಸಿದ್ದು, ಬೆಳಗಾವಿ ಜಿಲ್ಲೆಯ ನಾಯಕರ ಸಭೆ ಸಂಜೆಗೆ ನಿಗದಿಯಾಗಿತ್ತು. ಆದರೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಪಿಎಲ್'ಡಿ ಬ್ಯಾಂಕ್ ಚುನಾವಣೆ ವಿಷಯವಾಗಿ ನಡೆದಿರುವ ಜಟಾಪಟಿ ವಿಚಾರ ಬೆಳಿಗ್ಗೆಯೇ ವೇಣುಗೋಪಾಲ್ ಮುಂದೆ ಪ್ರಸ್ತಾಪಗೊಂಡಿತ್ತು. ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಲಕ್ಷ್ಮೀಯವರು ಜಾರಕಿಹೊಳಿ ಸಹೋದರರು ತಮ್ಮ ಮೇಲೆ ನಡೆಸುತ್ತಿರುವ ವಾಗ್ದಾಳಿ ಬಗ್ಗೆ ದೂರು ನೀಡಿದರು.
ಈ ಬಗ್ಗೆ ರಮೇಶ್ ಜಾರಕಿಹೊಳಿ ಅವರೊಂದಿಗೆ ಖುದ್ದು ಮಾತನಾಡುವುದಾಗಿ ಆಗ ವೇಣುಗೋಪಾಲ್ ತಿಳಿಸಿದರು. ಆದರೆ, ಸಂಜೆ ಬೆಳಗಾವಿ ಜಿಲ್ಲಾ ನಾಯಕರ ಸಭೆ ವಾಕ್ಸಮರದಿಂದಾಗಿ ಸಭೆ ರದ್ದುಗೊಂಡಿತ್ತು. ಹೀಗಾಗಿ ವೇಣುಗೋಪಾಲ್ ಕುಮಾರಕೃಪಾ ಅತಿಥಿ ಗೃಹಕ್ಕೆ ಬಂದು ಪ್ರತ್ಯೇಕವಾಗಿ ಭೇಟಿ ಮಾಡುವಂತೆ ರಮೇಶಅ ಅವರಿಗೆ ಸೂಚನೆ ನೀಡಿ ಕೆಪಿಸಿಸಿ ಕಚೇರಿಯಿಂದ ತೆರಳಿದರು ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್Karnatakaಕರ್ನಾಟಕCongress leadersverbal duelಕಾಂಗ್ರೆಸ್ ನಾಯಕರುಆಂತರಿಕ ಭಿನ್ನಾಭಿಪ್ರಾಯInternal fight
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


