ಉಪಚುನಾವಣೆ: ಕಾಂಗ್ರೆಸ್, ಜೆಡಿಎಸ್ ಗೆ ಬಂಡಾಯದ ಭೀತಿ
ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಕೆಲವರು ಬಂಡಾಯದ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.

ಬೆಂಗಳೂರು: ನವೆಂಬರ್ 3 ರಂದು ನಡೆಯಲಿರುವ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಕೆಲವರು ಬಂಡಾಯದ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.
ಮಂಡ್ಯ ಹಾಗೂ ರಾಮನಗರದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿಗೆ ಕೆಲ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಮುಖಂಡ ರವಿಕುಮಾರ್ ಗೌಡ, ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ರಾಮನಗರದಲ್ಲೂ ಕೂಡಾ ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದಕ್ಕೆ ಇಷ್ಟಪಡುತ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ನೆರವಾಗಲಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ಅಲ್ಪಸಂಖ್ಯಾತ ಮತಗಳೇ ಹೆಚ್ಚಾಗಿರುವ ರಾಮನಗರದಲ್ಲಿ ಇಕ್ಬಲ್ ಹುಸೇನ್ ಕಾಂಗ್ರೆಸ್ ಪರ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಅವರು ಅಸಮಾಧಾನಗೊಂಡಿದ್ದಾರೆ. ಅವರನ್ನು ಭೇಟಿ ಮಾಡಿದ ಸಂಸದ ಡಿ. ಕೆ. ಸುರೇಶ್, ಪಕ್ಷದ ನಿರ್ಧಾರವನ್ನು ಪರಿಗಣಿಸುವಂತೆ ಮನವಿ ಮಾಡಿಕೊಂಡರು.
ಬಿಜೆಪಿಯಲ್ಲೂ ಬಂಡಾಯ ಕಂಡಬರುತ್ತಿದೆ. ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಪುತ್ರ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಿರುವುದರಿಂದ ಕೆಲ ನಿಷ್ಠಾವಂತ ಕಮಲ ಕಾರ್ಯಕರ್ತರು ಅತೃಪ್ತಿ ಗೊಂಡಿದ್ದಾರೆ. ಮಂಡ್ಯದಲ್ಲೂ ಸಿದ್ದರಾಮಯ್ಯ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಜಮಖಂಡಿಯಲ್ಲಿ ಸಿದ್ದು ನ್ಯಾಮೇಗೌಡ ಪುತ್ರ ಆನಂದ್ ನ್ಯಾಮೇಗೌಡ ಸ್ಪರ್ಧೆಯಿಂದ ಕೆಲ ಸ್ಥಳೀಯ ನಾಯಕರು ಅಸಮಾಧಾನಗೊಂಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಸನತ್ ಕುಮಾರ್ ಬೆಳಗಲಿ ಸ್ವತಂತ್ರವಾಗಿ ಸ್ಪರ್ಧಿಸುವ ಬೆದರಿಕೆ ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


