ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಂಡು ಜನರು ನನಗೆ ಮತ ಹಾಕಿದ್ದಾರೆ- ಶಾಸಕ ಮುನಿರತ್ನ
ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಪರ ಕೆಲಸಗಳನ್ನು ನೋಡಿ ಜನ ನನಗೆ ಮತ ಹಾಕಿ ...

ಬೆಂಗಳೂರು: ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಪರ ಕೆಲಸಗಳನ್ನು ನೋಡಿ ಜನ ನನಗೆ ಮತ ಹಾಕಿ ಆಶೀರ್ವಾದ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಇಂದಿನ ಫಲಿತಾಂಶದಲ್ಲಿ ಗೆಲುವು ಕಂಡಿರುವ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದ ಫಲಿತಾಂಶ ಹೊರಬಂದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರಿಗೆ ನಾನು ಆಭಾರಿಯಾಗಿದ್ದೇನೆ. ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ನನ್ನ ಗೆಲುವಿಗೆ ಕಾರಣವಾಗಿದೆ ಎಂದರು.
ರಾಜರಾಜೇಶ್ವರಿ ನಗರ ಕ್ಷೇತ್ರದ ಜನತೆ ಚೆನ್ನಾಗಿಯೇ ಆಲೋಚನೆ ಮಾಡಿಯೇ ಮತ ಹಾಕಿದ್ದಾರೆ. ಇಲ್ಲಿನ ಮತದಾರರು ಯಾವುದೇ ಜಾತಿ ಧರ್ಮ ನೋಡಿ ಮತ ಹಾಕಿಲ್ಲ. ನಾನು ಹಣಬಲದಿಂದ ಗೆದ್ದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪ ಮಾಡಿದ್ದಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಆರ್.ಆರ್.ನಗರ ಕ್ಷೇತ್ರದ ಅಭಿವೃದ್ಧಿ ಹೇಗಿತ್ತು, ಈಗ ಹೇಗಿದೆ ಅಂತ ಅವಲೋಕನ ಮಾಡಿ ಮಾತನಾಡಲಿ’ ಎಂದು ತಿರುಗೇಟು ನೀಡಿದರು.
ನನ್ನ ಮೇಲೆ ಎಷ್ಟೇ ಆರೋಪ, ಕುತಂತ್ರಗಳು ನಡೆದರು ಮತದಾರ ನನ್ನ ಕೈಬಿಡಲಿಲ್ಲ. ಇದು ರಾಜ್ಯಕ್ಕೆ ಮಾದರಿಯಾದ ಗೆಲುವು. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸ ಮಾಡುತ್ತೇನೆ ಎಂದು ಮುನಿರತ್ನ ಆಶ್ವಾಸನೆ ನೀಡಿದರು.
ಚುನಾವಣೆ ಮುಂದೂಡಿದ್ದು ನನಗೆ ಸಹಕಾರಿ ಆಯ್ತು. ತಪ್ಪು ತಿಳುವಳಿಕೆಯಿಂದ ಬಿಜೆಪಿ ಕಡೆ ಹೋಗುತ್ತಿದ್ದ ಮತಗಳು ಮತ್ತೆ ನಮ್ಮ ಕಡೆ ಬರುವಂತಾಯ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಡಿಕೆ ಶಿವಕುಮಾರ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನಂತರ ಕಾಂಗ್ರೆಸ್ ಪರಿಸ್ಥಿತಿಯನ್ನು ಎಲ್ಲರೂ ಗಮನಿಸಿದ್ದಾರೆ. ಪಕ್ಷಕ್ಕೆ ಕೆಟ್ಟ ಹೆಸರು ತರಲು ಸಾಕಷ್ಟು ಕೆಲಸ ಮಾಡಲಾಯಿತು. ಆದರೆ, ರಾಜರಾಜೇಶ್ವರಿ ನಗರದ ಮತದಾರರು ಸರಿಯಾದ ಫಲಿತಾಂಶ ನೀಡಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


