ರಾಜಕೀಯ

ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ ಸಂಪುಟ ವಿಸ್ತರಣೆ: ಸೃಷ್ಟಿಯಾಗುತ್ತಾ 2 ಡಿಸಿಎಂ ಹುದ್ದೆ?

ಸಮ್ಮಿಶ್ರ ಸರ್ಕಾರ ರಚನೆ ಖಾತ್ರಿಯಾಗುತ್ತಿದ್ದಂತೆಯೇ ಸಚಿವರ ಆಯ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು, ಸಂಪುಟದಲ್ಲಿ ಸ್ಥಾನ ಪಡೆಯಲು ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಗಟ್ಟಿಸಲು ಭರ್ಜರಿ ಲಾಭಿ ಆರಂಭವಾಗಿದೆ...

ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ ಸಂಪುಟ ವಿಸ್ತರಣೆ: ಸೃಷ್ಟಿಯಾಗುತ್ತಾ 2 ಡಿಸಿಎಂ ಹುದ್ದೆ?
ತಮಿಳುನಾಡಿನ ಶ್ರೀರಂಗಂನಲ್ಲಿರುವ ರಂಗನಾಥ ದೇಗುಲಕ್ಕೆ ಭೇಟಿ ನೀಡಿದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ
Published On :

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆ ಖಾತ್ರಿಯಾಗುತ್ತಿದ್ದಂತೆಯೇ ಸಚಿವರ ಆಯ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು, ಸಂಪುಟದಲ್ಲಿ ಸ್ಥಾನ ಪಡೆಯಲು ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಗಟ್ಟಿಸಲು ಭರ್ಜರಿ ಲಾಭಿ ಆರಂಭವಾಗಿದೆ. 

ಮೈತ್ರಿ ಸರ್ಕಾರ ರಚನೆಗೆ ಬೇಷರತ್ ಬೆಂಬಲ ನೀಡಲು ಮುಂದಾಗಿದ್ದ ಜೆಡಿಎಸ್'ಗೆ ಬಾಹ್ಯ ಬೆಂಬಲದ ಪ್ರಸ್ತಾಪವನ್ನು ಇಟ್ಟಿದ್ದ ಕಾಂಗ್ರೆಸ್ ಪಕ್ಷ ಕ್ರಮೇಣ ಷರತ್ತುಗಳನ್ನು ವಿಧಿಸುವ ದಿಸೆಯಲ್ಲಿ ಮುಂದುವರೆದಿದ್ದು, ಅಧಿಕಾರ ಹಂಚಿಕೆ ಸಮಾನ ಹಾಗೂ ಪರಸ್ಪರ ಚರ್ಚೆ ಮೂಲಕ ನಡೆಯಬೇಕೆಂಬ ಸಂದೇಶವನ್ನು ಜೆಡಿಎಶ್ ಪಾಳೆಯಕ್ಕೆ ರವಾನಿಸತೊಡಗಿದೆ. 

ಉಪ ಮುಖ್ಯಮಂತ್ರಿ ಹುಡ್ಡೆಗೆ 5 ಪ್ರಭಾವಿ ನಾಯಕರು ಪೈಪೋಟಿ ಆರಂಭಿಸಿದ್ದಾರೆಂದು ಹೇಳಲಾಗುತ್ತಿದ್ದು, ಪರಿಣಾಮ ಒಂದಕ್ಕಿಂತ ಹೆಚ್ಚು ಡಿಸಿಎಂ ಪದವಿ ಸೃಷ್ಟಿಯಾಗುವುದೇ ಎಂಬ ಪ್ರಶ್ನೆಗಳು ಮೂಡತೊಡಗಿವೆ. 

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾತುಕತೆ ಪ್ರಾರಂಭದ ಹಂತದಲ್ಲಿಯೇ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ಪಕ್ಷದಿಂದ ದಲಿತರೊಬ್ಬರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂಬುದು ನಿರ್ಧಾರವಾಗಿತ್ತು. ಆದರೆ, ಇದೀಗ ಈ ಪದವಿಗೆ ಲಿಂಗಾಯತ-ವೀರಶೈವರು ಪ್ರಬಲ ಲಾಭಿ ಆರಂಭಿಸಿದ್ದಾರೆ. 

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹೆಚ್ಚು ಶಾಸಕ ಸ್ಥಾನ ತಂದುಕೊಟ್ಟಿರುವ ವೀರಶೈವ ಲಿಂಗಾಯತ ಸಮುದಾಯದ ಶಾಮನೂರು ಶಿವಶಂಕರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಐದು ಮಂದಿಗೆ ಸಚಿವ ಸ್ಥಾನ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಗಳೂರು ನಗರ ಘಟಕ ಒತ್ತಾಯ ಮಾಡಿದೆ. 

30-30 ಸರ್ಕಾರ ಕುರಿತು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿಯವರು ಮುಂದಿನ 5 ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡುವುದಾಗಿ ಹೇಳಇದ್ದಾರೆ. ಈ ಮೂಲಕ 30-30 ತಿಂಗಳ ಅಧಿಕಾರ ಹಂಚಿಕೆಯ ಚಿಂತನೆಯನ್ನು ತಳ್ಳಿಹಾಕಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷವು ಜೆಡಿಎಸ್'ಗೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಯಾವುದೇ ಷರತ್ತು ವಿಧಿಸಿಲ್ಲ. ಹೀಗಾಗಿ ಸರ್ಕಾರದ ಅವಧಿಯಲ್ಲಿ ಹಂಚಿಕೆ ಇಲ್ಲ. ಮುಖ್ಯಮಂತ್ರಿ ಸ್ಥಾನವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಕಾಂಗ್ರೆಸ್ ಪಕ್ಷವು 5 ವರ್ಷಗಳ ಕಾಲ ಬೆಂಬಲ ನೀಡುವ ವಿಶ್ವಾಸವಿದೆ. ಹೀಗಾಗಿ ಕಾಂಗ್ರೆಸ್ ಬೆಂಬಲದೊಂದಿಗೆ 5 ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. 

ಇನ್ನು ಸಂಪುಟ ರಚನೆ ಕುರಿತಂತೆ ಕುಮಾರಸ್ವಾಮಿಯವರು ನಿನ್ನೆ ಬೆಳಿಗ್ಗೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ, ಎಐಸಿಸಿ ನಾಯಕರಾದ ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್, ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಸಂಪುಟ ರಚನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಂಹಪಾಲಿದ್ದು, 34 ಮಂತ್ರಿಗಿರಿಯಲ್ಲಿ 18-20 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಜೆಡಿಎಸ್ ಪಕ್ಷ 14 ಸ್ಥಾನಗಳನ್ನು ಪಡೆದುಕೊಳ್ಳಲಿದೆ. 

2 ಉಪಮುಖ್ಯಮಂತ್ರಿ ಸ್ಥಾನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ ಅವರು, ಇಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಕುರಿತು ಆಗ್ರಹಗಳು ವ್ಯಕ್ತವಾಗತೊಡಗಿವೆ. ಈ ಬಗ್ಗೆ ಪಕ್ಷದ ಹೈ ಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.