ರಾಜಕೀಯ

ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಶನಿವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಡೆಸುವ ವಿಶ್ವಾಸಮತ ಯಾಚನೆ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ. ಇಡೀ...

ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ವಿಶ್ವಾಸಮತ ಯಾಚನೆಗೆ ವಿಧಾನಸಭೆಯಲ್ಲಿ ಮಾಡಿದ ಸಿದ್ಧತೆ
Published On :

ಬೆಂಗಳೂರು: ಶನಿವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಡೆಸುವ ವಿಶ್ವಾಸಮತ ಯಾಚನೆ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ. ಇಡೀ ರಾಜ್ಯದ ಜನತೆ ಏನಾಗಬಹುದು ಎಂದು ಕಾಯುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ನೂತನ ಶಾಸಕರಿಗೆ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಇಂದು ಮಧ್ಯಾಹ್ನದ ಹೊತ್ತಿಗೆ ನೂತನ ಶಾಸಕರ ಪ್ರಮಾಣವಚನ ನಡೆದ ಬಳಿಕ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ. ಕೆ.ಜೆ.ಬೋಪಯ್ಯ ಅವರು ಯಡಿಯೂರಪ್ಪ ಬಳಿ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಲಿದ್ದಾರೆ. ಮತ್ತು ಅದಕ್ಕೆ ಸದನ ಸದಸ್ಯರು ಬೆಂಬಲ ಸೂಚಿಸುವಂತೆ ಕೇಳಲಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.

ಇಂದು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿನ ಪ್ರಕ್ರಿಯೆಗಳನ್ನು ವಿವರಿಸಿದ ಅವರು, ಇಲ್ಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಲಿದ್ದಾರೆ. ವಿಪ್ ಜಾರಿ ಸದನಕ್ಕೆ ಗೈರು ಹಾಜರಾಗಿರುವ ಅಥವಾ ಪ್ರಮಾಣವಚನ ಸ್ವೀಕರಿಸದಿರುವ ಶಾಸಕರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.

ವಿಶ್ವಾಸಮತ ಯಾಚನೆ ವಿಧಾನವನ್ನು ವಿವರಿಸಿದ ಅವರು, ವಿಶ್ವಾಸಮತಕ್ಕೆ ಬೆಂಬಲಿಸುವ ಶಾಸಕರು ಎದ್ದು ನಿಂತು ಹೇಳಬೇಕು ಮತ್ತು ಅವರು ಸೂಚಿಸಿದ ಹೆಸರುಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಒಂದು ಸಾಲಿನ ಶಾಸಕರ ವಿಶ್ವಾಸಮತವನ್ನು ಒಂದು ಬಾರಿಗೆ ಲೆಕ್ಕಹಾಕಲಾಗುತ್ತದೆ. ನಂತರ ವಿಶ್ವಾಸಮತಕ್ಕೆ ವಿರುದ್ಧವಾಗಿರುವ ಶಾಸಕರ ಹೆಸರುಗಳನ್ನು ಲೆಕ್ಕಹಾಕಲಾಗುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಮಸಮನಾಗಿ ಶಾಸಕರ ಬೆಂಬಲ ಸಿಕ್ಕಿದರೆ ಹಂಗಾಮಿ ಸ್ಪೀಕರ್ ತಮ್ಮ ಮತ ಚಲಾಯಿಸುತ್ತಾರೆ ಎಂದು ಮೂರ್ತಿ ತಿಳಿಸಿದರು.

ವಿಶ್ವಾಸಮತ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ, "ನನ್ನ ನೇತೃತ್ವದ ಸಚಿವ ಸಂಪುಟದ ಮೇಲೆ ವಿಶ್ವಾಸ ವ್ಯಕ್ತಪಡಿಸುವಂತೆ ಕೋರುತ್ತೇನೆ' ಎಂಬ ಪ್ರಸ್ತಾವವನ್ನು ಸದನದಲ್ಲಿ ಮಂಡಿಸುತ್ತಾರೆ. ಸಾಮಾನ್ಯವಾಗಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮೊದಲು ಮುಖ್ಯಮಂತ್ರಿಯಾದವರು ಸದನದಲ್ಲಿ ಪ್ರಸ್ತಾವನೆ ಮಂಡಿಸುತ್ತಾರೆ. ಅದನ್ನು ಮತಕ್ಕೆ ಹಾಕುವಂತೆ ಸಭೆಯ ಯಾವುದೇ ಸದಸ್ಯರೊಬ್ಬರು ಅಥವಾ ಪಕ್ಷ ಕೋರುತ್ತದೆ. ಆಗ 2-3 ನಿಮಿಷಗಳ ಕಾಲ ಸದನದಲ್ಲಿ ಬೆಲ್‌ ಮಾಡಲಾಗುತ್ತದೆ. ಬಳಿಕ, ಬೆಲ್‌ ಆಫ್ ಮಾಡಿ, ಸದನದ ಬಾಗಿಲು ಬಂದ್‌ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರುವ ಸದಸ್ಯರನ್ನು ಮಾತ್ರ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಮೊದಲು ವಿಶ್ವಾಸ ಮತದ ಪರವಾಗಿ ಇರುವ ಸದಸ್ಯರನ್ನು ಎದ್ದು ನಿಲ್ಲಿಸಿ, ತಲೆ ಎಣಿಕೆ ಮಾಡಲಾಗುತ್ತದೆ. ಬಳಿಕ ವಿಶ್ವಾಸಮತ ಯಾಚನೆಗೆ ವಿರುದ್ಧವಾಗಿರುವವರ ತಲೆ ಎಣಿಸಲಾಗುತ್ತದೆ. ಪರ ಎಷ್ಟು, ವಿರೋಧ ಎಷ್ಟು ಅನ್ನುವುದನ್ನು ಸ್ಪೀಕರ್‌ ಘೋಷಿಸುತ್ತಾರೆ.

ಇದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಆದರೆ, ವಿಶ್ವಾಸ ಮತಯಾಚನೆ ಪ್ರಕ್ರಿಯೆ ಹೇಗಿರಬೇಕು ಎಂಬುದನ್ನು ಅಂತಿಮವಾಗಿ ಸ್ಪೀಕರ್‌ ನಿರ್ಧರಿಸುತ್ತಾರೆ ಎಂದು ಮೂರ್ತಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.