ರಾಜಕೀಯ

ಚುನಾವಣಾ ಪ್ರಚಾರ ಅಂತಿಮ ಘಟ್ಟಕ್ಕೆ; ಕೊನೇ ಕ್ಷಣದಲ್ಲಿ ರಾಜಕೀಯ ನಾಯಕರ ಕಸರತ್ತು

ಪ್ರತಿಷ್ಠೆಯ ಕಣವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೆರೆಡು ದಿನಗಳಲ್ಲಿ ನಡೆಯಲಿದ್ದು, ಚುನಾವಣೆಯ ಬಹಿರಂಗ ಪ್ರಚಾರ ಗುರುವಾರ ಸಂಜೆ ಅಂತ್ಯಗೊಳ್ಳಲಿದೆ...

ಚುನಾವಣಾ ಪ್ರಚಾರ ಅಂತಿಮ ಘಟ್ಟಕ್ಕೆ; ಕೊನೇ ಕ್ಷಣದಲ್ಲಿ ರಾಜಕೀಯ ನಾಯಕರ ಕಸರತ್ತು
ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ
Published On :
ಬೆಂಗಳೂರು; ಪ್ರತಿಷ್ಠೆಯ ಕಣವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೆರೆಡು ದಿನಗಳಲ್ಲಿ ನಡೆಯಲಿದ್ದು, ಚುನಾವಣೆಯ ಬಹಿರಂಗ ಪ್ರಚಾರ ಗುರುವಾರ ಸಂಜೆ ಅಂತ್ಯಗೊಳ್ಳಲಿದೆ. 
ಚುನಾವಣೆಯ ಪ್ರಚಾರ ಕಾರ್ಯ ಅಂತಿಮ ಘಟ್ಟ ತಲುಪಿದ್ದು, ಇದರೊಂದಿಗೆ ಗದ್ದಲದ ರ್ಯಾಲಿಗಳು, ರೋಡ್ ಶೋಗಳು, ಅಬ್ಬರದ ಪ್ರಚಾರಗಳು, ಬಹಿರಂಗ ಬೈದಾಟಗಳು ಇಂದು ಸಂಜೆಯ ಹೊತ್ತಿಗೆ ಮುಕ್ಯತಾಯವಾಗಿ ಸದ್ದಿಲ್ಲದ ಎರಡು ದಿನದ ಮನೆ ಮನೆ ಪ್ರಚಾರ ಆರಂಭವಾಗಲಿದೆ. 
ಇದರಂತೆ ಕರ್ನಾಟಕಕ್ಕೆ ಆಗಮಿಸಿದ್ದ ವಿವಿಧ ರಾಜ್ಯಗಳಘ ಘಟಾನುಘಟಿ ನಾಯಕರು ಕರ್ನಾಟಕ ಬಿಟ್ಟು ಹೊರಹೋಗಬೇಕಾಗುತ್ತದೆ. ಕರ್ನಾಟಕದ ವಿವಿಧ ನಾಯಕರೂ ತಮ್ಮದಲ್ಲದ ಕ್ಷೇತ್ರಗಳಿಂದ ಕಾಲುಕಿತ್ತು ತಮ್ಮ ತಮ್ಮ ಕ್ಷೇತ್ರಗಳಿಗೆ ಮರಳಬೇಕಾಗುತ್ತದೆ. 

ಮೇ.12ಕ್ಕೆ ಮತದಾನ ನಡೆಯಲಿದ್ದು, ಮೇ. 10ರ ಸಂಜೆ 6 ಗಂಟೆ ಬಳಿಕ ಬಹಿರಂಗ ಸಮಾವೇಶ, ರ್ಯಾಲಿಗಳನ್ನು ಯಾವುದೇ ರಾಜಕೀಯ ಮುಖಂಡರು ನಡೆಸುವಂತಿಲ್ಲ. ರಾಜ್ಯದಲ್ಲಿ ಮತದಾನದ ಹಕ್ಕು ಇಲ್ಲದ ರಾಜಕೀಯ ಮುಖಂಡರು ಗುರುವಾರ ಸಂಜೆ 6 ಗಂಟೆಯ ನಂತರ ರಾಜ್ಯದಿಂದ ಹೊರಹೋಗಬೇಕು ಎಂದು ಆಯೋಗ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. 

ಈ ಹಿನ್ನಲೆಯಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕಾಗಿ ರಾಜ್ಯದಲ್ಲಿ ವಾಸ್ತವ್ಯ ಹೂಡಿದ್ದ ರಾಜಕೀಯ ಮುಖಂಡರು ತಮ್ಮ ರಾಜ್ಯಕ್ಕೆ ಬುಧವಾರ ರಾತ್ರಿಯೇ ರಾಜ್ಯದಿಂದ ಹಿಂತಿರುಗಿದ್ದಾರೆ. 
ಚುನಾವಣೆಯ ಕೊನೆಯ ಹಂತದ ಪ್ರಚಾರಕ್ಕಾಗಿ ಕಾಯ್ದಿಟ್ಟುಕೊಂಡಿದ್ದ ಮೋದಿ ಅಸ್ತ್ರವನ್ನು ಬಿಜೆಪಿ ಯಶಸ್ವಿಯಾಗಿಯೇ ಪ್ರಯೋಗ ಮಾಡಿತು. ಕಳೆದ 9 ದಿನಗಳಲ್ಲಿ 21 ಮೆಗಾ ರ್ಯಾಲಿಗಳನ್ನು ನಡೆಸಿದ ಮೋದಿಯವರು ನಿನ್ನೆ ರಾತ್ರಿ ಬೀದರ್ ನಲ್ಲಿ ಚುನಾವಣೆಯ ಕಟ್ಟ ಕಡೆಯ ಪ್ರಚಾರ ಭಾಷಣ ಮಾಡಿ ದೆಹಲಿಗೆ ಹಿಂತಿರುಗಿದರು. 
ಮೋದಿಯವರ ಬಿರುಗಾಳಿಯಂಥ ಈ ಸಭೆಗಳಲ್ಲಿ ಕಾಂಗ್ರೆಸ್, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರ ಮೇಲೆ ಈವರೆಗಿನ ಸಭೆಗಳಿಗಿಂತ ಅತ್ಯಂತ ಪ್ರಖರವಾದ ವಾಗ್ದಾಳಿಯನ್ನು ಮಾಡಿದ್ದು ವಿಶೇಷವಾಗಿತ್ತು. 
ಇನ್ನು ಮೋದಿಯವರಿಗಿಂತಲೂ ಮೊದಲೇ ಕರ್ನಾಟಕದಲ್ಲಿ ಮೆಗಾ ಸಭೆಗಳ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಕೊನೆಯ ಹಂತದ ಪ್ರಚಾರದಲ್ಲಿ ಮೆಗಾ ರ್ಯಾಲಿಗಳಿಗಿಂತ ಚಿಕ್ಕ ಚಿಕ್ಕ ಸಂವಾದ ಸಭೆಗಳು, ರೋಡ್ ಶೋಗಳು, ದೇವಾಲಯ, ಚರ್ಚ್, ಮಸೀದಿ ಭೇಟಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. 
ನಿಗದಿಯಂತೆ ನಿನ್ನೆಯೇ ಅವರ ಕೊಲೆಯ ಪ್ರಚಾರ ಸಭೆಯಾಗಬೇಕಾಗಿತ್ತು. ಆದರೆ, ಅವರು ಒಂದು ದಿನ ವಿಸ್ತರಿಸಿ ಇಂದು ಹುಬ್ಬಳ್ಳಿಯಲ್ಲಿ ಪ್ರಚಾರ ಕಾರ್ಯ ನಡೆಸಿ, ಇಂದು ರಾತ್ರಿ ರಾಜಧಾನಿ ದೆಹಲಿಗೆ ಹಿಂತಿರುಗಲಿದ್ದಾರೆ. 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಆ ಅವರು ಮೆಗಾ ರ್ಯಾಲಿಗಿಂತಲೂ ಹೆಚ್ಚಾಗಿ ರೋಡ್ ಶೋ ಗಳನ್ನು ನಡೆಸುವುದರ ಜೊತೆಗೆ ಎಲ್ಲಾ ಪ್ರಮುಖ ಕೇಂದ್ರಗಳಲ್ಲೂ ಕಾರ್ಯಕರ್ತರ ಸಭೆಗಳನ್ನು ನಡೆಸಿದರು. 
ಈ ಮೂಲಕ ಮತಗಟ್ಟೆಗೆ ಹೆಚ್ಚೆಚ್ಚು ಮತದಾರರನ್ನು ಕರೆ ತಂದು ಹೆಚ್ಚೆಚ್ಚು ಮತದಾನ ಮಾಡಿಸುವ ಕುರಿತು ಕಾರ್ಯಕರ್ತರಿಗೆ ಸಲಹೆಗ ಹಾಗೂ ಸೂಚನೆಗಳನ್ನು ನೀಡಿದರು. ಇದು ಸಾರ್ವಜನಿಕ ಸಭೆಗಳಿಗಿಂತ ಹೆಚ್ಚು ವೈಯಕ್ತಿಕ ರೀತಿಯ ಪ್ರಚಾರಕ್ರಮವಾಗಿದ್ದು, ಮತದಾರರಿಗೆ ಹೆಚ್ಚು ಆತ್ಮೀಯವೂ ಪ್ರಭಾವಶಾಲಿಯೂ ಆದ ತಂತ್ರವಾಗಿದೆ. ಈ ಪರಿಯ ತಂತ್ರ ಕರ್ನಾಟಕ ರಾಜ್ಯಕ್ಕೆ ಹೊಸತೆಂದೇ ಹೇಳಬಹುದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.