ಕಾಂಗ್ರೆಸ್-ಬಿಜೆಪಿ ಚುನಾವಣಾ ಪ್ರಣಾಳಿಕೆ ಜಟಾಪಟಿ: ಸುಧಾರಣೆಯೋ ಅಥವಾ ನಕಲೋ?
ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತ್ತೊಂದು ಸುತ್ತಿನ ಗುದ್ದಾಟಕ್ಕೆ ವೇದಿಕೆ ಒದಗಿಸಿದ್ದು, ಬಿಡೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ತಮ್ಮದೇ ಪ್ರಣಾಳಿಕೆಯ ನಕಲು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Published On :
ಬೆಂಗಳೂರು: ಶುಕ್ರವಾರ ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತ್ತೊಂದು ಸುತ್ತಿನ ಗುದ್ದಾಟಕ್ಕೆ ವೇದಿಕೆ ಒದಗಿಸಿದ್ದು, ಬಿಡೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ತಮ್ಮದೇ ಪ್ರಣಾಳಿಕೆಯ ನಕಲು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಿನ್ನೆ ಸಂತೇಬೆನ್ನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಡ್ನಾಳ್ ರಾಜಣ್ಣ ಪರ ಪ್ರಚಾರ ಮಾಡಿದ ಸಿಎಂ ಸಿದ್ದರಾಮಯ್ಯ, 'ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ನಮ್ಮ ಕಾರ್ಯಕ್ರಮಗಳನ್ನೇ ಕಾಪಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ‘ಅನ್ನಪೂರ್ಣ’ ಎಂಬ ಹೆಸರಿಟ್ಟು ‘ಇಂದಿರಾ ಕ್ಯಾಂಟೀನ್’ ಯೋಜನೆಯನ್ನು ಕಾಪಿ ಮಾಡಲಾಗಿದೆ. ಈ ಮೊದಲೂ ಬಿಜೆಪಿಯವರು ಪ್ರಣಾಳಿಕೆ ಮಾಡಿದ್ದಾರೆ. ಆದರೆ, ಪ್ರಣಾಳಿಕೆಯಲ್ಲಿರುವ ಎಷ್ಟು ಅಂಶಗಳನ್ನು ಈಡೇರಿಸಿದ್ದಾರೆ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.
ಅಂತೆಯೇ ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಮ್ಮ ಟ್ವೀಟ್ ಮೂಲಕ ಬಿಸಿ ಮುಟ್ಟಿಸಿರುವ ಸಿಎಂ ಸಿದ್ದರಾಮಯ್ಯ, ‘ಕ್ಯೂಂ ಝೂಟ್ ಬೋಲ್ ರಹೇ ಹೋ? ಕಿತ್ನಾ ಝೂಟ್ ಬೋಲೋಗೆ’ (ಸುಳ್ಳು ಯಾಕೆ ಹೇಳುತ್ತಿರುವಿರಿ? ಇನ್ನೆಷ್ಟು ಸುಳ್ಳುಗಳನ್ನೇ ಹೇಳುವಿರಿ?) ಎಂದು ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಹಿಂದಿಯಲ್ಲಿ ಪ್ರಶ್ನಿಸಿದ್ದಾರೆ.
ಇನ್ನು ಇದೇ ಪ್ರಣಾಳಿಕೆ ವಿಚಾರವಾಗಿ ನಿನ್ನೆ ಕಲಬುರ್ಗಿ ಜಿಲ್ಲೆ ಕಾಳಗಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲಾಗುವುದು. ದೇಶದಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೇಳಿದೆ. ಅವರು ಆಗುವುದಿಲ್ಲ ಎಂದರು. ಆದರೆ, ಕಾರ್ಪೋರೇಟ್ ಕ್ಷೇತ್ರದ ರೂ.2.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಹೇಳಿದಾಗ 10 ದಿನದಲ್ಲಿ ಅವರು ರಾಜ್ಯದ ರೈತರ 50 ಸಾವಿರ ರೂ ವರೆಗಿನ ಸಾಲ ಮನ್ನಾ ಮಾಡಿದರು’ ಎಂದು ರಾಹುಲ್ ಗಾಂಧಿ ನೆನಪಿಸಿಕೊಂಡರು.
ಶುಕ್ರವಾರ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಸಂಘಗಳಲ್ಲಿರುವ ₹1 ಲಕ್ಷ ವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗುವುದು. ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿದೆ. ಈ ವಿಚಾರ ತಿಳಿದ ರಾಹುಲ್ ಗಾಂಧಿ ತಮ್ಮ ಪ್ರಣಾಳಿಕೆಯೊಂದಿಗೆ ರೈತರ ಸಾಲಮನ್ನಾ ಕುರಿತು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇತ್ತ ಈ ಹಿಂದೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಸುಮಾರು ಅಂಶಗಳು ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಸುಧಾರಣೆಯೊಂದಿಗೆ ಸ್ಥಾನ ಪಡೆದಿದೆ. ಪ್ರಮುಖವಾಗಿ 18 ರಿಂದ 23ರ ವಯೋಮಾನದ ಬಿಪಿಎಲ್ ಫಲಾನುಭವಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದ್ದರೆ, ಬಿಜೆಪಿ ಬಿಪಿಎಲ್ ಫಲಾನುಭವಿದಾರ ಎಲ್ಲ ಮಹಿಳೆಯರಿಗೂ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಣೆ ಮಾಡಿದೆ. ಅಂತೆಯೇ 50 ಸಾವಿರ ರೂ ವರೆಗಿನ ರೈತರ ಸಾಲ ಮನ್ನಾ ಮಾಡುವ ಕುರಿತು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರೆ, ಬಿಜೆಪಿ ಪಕ್ಷ 1 ಲಕ್ಷ ರೂ ವರಗಿನ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ.
ಇನ್ನು ತನ್ನ ಕಾರ್ಯಕರ್ತರ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಇದೀಗ ಪಿಎಫ್ ಐ ಸಂಘಟನೆಯನ್ನು ನಿಷೇಧಿಸುವ ಕುರಿತು ಪ್ರಣಾಳಿಕೆಯಲ್ಲಿ ಹೇಳಿದೆ, ಅಂತೆಯೇ ಗೋ ಹತ್ಯೆ ಕುರಿತು ಕಠಿಣ ಕ್ರಮ ಜಾರಿ ಮಾಡುವುದಾಗಿಯೂ ಭರವಸೆ ನೀಡಿದೆ. ಅಲ್ಲದೆ ದಲಿತ, ಹಿಂದುಳಿದ ಜಾತಿಗಳತ್ತ ಚಿತ್ತ ಹರಿಸಿರುವ ಬಿಜೆಪಿ ಸಾಕಷ್ಟು ಯೋಜನೆಗಳನ್ನುಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಬಿಜೆಪಿ ಘೋಷಣೆ ಮಾಡಿರುವ ಸಾಕಷ್ಟು ಅಂಶಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಅಂಶಗಳೊಂದಿಗೆ ಸಾಮ್ಯತೆ ಹೊಂದಿದ್ದರೂ ಇವು ಪ್ರಮುಖಾಂಶಗಳಾಗಿವೆ ಎನ್ನಲಾಗಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುCongressಕಾಂಗ್ರೆಸ್Bengalurubjpಬಿಜೆಪಿmanifestoಪ್ರಣಾಳಿಕೆಕರ್ನಾಟಕ ವಿಧಾನಸಭೆKarnataka Assembly Election
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


