ಎಸ್'ಸಿ/ಎಸ್'ಟಿ ಹಾಸ್ಟೆಲ್'ಗಳಲ್ಲಿ ರೂ.2,157 ಕೋಟಿ ಅವ್ಯವಹಾರ: ಬಿಜೆಪಿ ಆರೋಪ
ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ಎಸ್'ಸಿ, ಎಸ್'ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ಗಳಲ್ಲಿ ರೂ.2,157 ಕೋಟಿ ಅವ್ಯವಹಾರಗಳು ನಡೆದಿದೆ ಎಂದು ಬಿಜೆಪಿ ಶುಕ್ರವಾರ ಗಂಭೀರ ಆರೋಪ ಮಾಡಿದೆ...

Published On :
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ಎಸ್'ಸಿ, ಎಸ್'ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ಗಳಲ್ಲಿ ರೂ.2,157 ಕೋಟಿ ಅವ್ಯವಹಾರಗಳು ನಡೆದಿದೆ ಎಂದು ಬಿಜೆಪಿ ಶುಕ್ರವಾರ ಗಂಭೀರ ಆರೋಪ ಮಾಡಿದೆ.
ರಾಜ್ಯದಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಲಲಿ ಇದೆ ಎನ್ನಲಾಗುತ್ತಿದ್ದ ಅವ್ಯವಸ್ಥೆಯನ್ನು ಎತ್ತಿ ತೋರಿಸುವ ಸರ್ಕಾರಿ ಹಾಸ್ಟೆಲ್; ವಿದ್ಯಾರ್ಥಿಗಳ ಪಾಲಿಗೆ ಜೀವನನರಕ, ಅಧಿಕಾರಿ/ಮಂತ್ರಿಗಳ ಲೂಟಿಗೆ ಸ್ವರ್ಗ ಎಂಬ ಸಮೀಕ್ಷಾ ವರದಿಯನ್ನು ಬಿಜೆಪಿ ನಿನ್ನೆ ಬಿಡುಗಡೆ ಮಾಡಿದೆ.
ಈ ವರದಿಯಲ್ಲಿ ಸರ್ಕಾರಿ ಹಾಸ್ಟೆಲ್ ಗಳಲ್ಲಿ ಇವೆ ಎನ್ನಲಾದ ಸಮಸ್ಯೆಗಳು, ಕೊರತೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿತ್ತು, ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳ ಪೈಕಿ ಅತ್ಯಂತ ದುಸ್ಥಿತಿಗೆ ಒಳಗಾಗಿರುವ ಜಿಲ್ಲೆಗಳ ಪೈಕಿ ಮುಖ್ಯಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಮತ್ತು ಬೆಳಗಾವಿ ಮೊದಲ ಸ್ಥಾನದಲ್ಲಿವೆ.
ಎರಡನೆಯ ಸ್ಥಾನದಲ್ಲಿ ಕಲಬುರಗಿ ಜಿಲ್ಲೆ ಎಂಬುದನ್ನು ಪ್ರಸ್ತಾಪಿಸಲಾಗಿದೆ. ಪಕ್ಷದ ಎಸ್'ಟಿ ಮೋರ್ಚಾ, ಎಸ್'ಸಿ ಮೋರ್ಚಾ, ಒಬಿಸಿ ಮೋರ್ಚಾ ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು-ಕಾರ್ಯಕರ್ತರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 2,590 ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಖುದ್ದಾಗಿ ಮಾತನಾಡಿಸಿ ಮಾಹಿತಿ ಕಲೆ ಹಾಕಿದ್ದಾರೆ.
ನಿನ್ನೆ ನಗರದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೊಡ ಅವರು ಈ ವರದಿಯನ್ನು ಬಿಡಗಡೆಗೊಳಿಸಿದ್ದಾರೆ. ಜೊತೆಗೆ ರಾಜ್ಯದ ಇತರ 15 ಜಿಲ್ಲೆಗಳಲ್ಲಿ ಪಕ್ಷದ ಪ್ರಮುಖ ಮುಖಂಡರು ವರದಿ ಬಿಡುಗಡೆ ಮಾಡಿದರು. ಹಾಸ್ಟೆಲ್ ಗಳಲ್ಲಿ ಕುಂದು ಕೊರತೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ವರದಿ ಸಿದ್ಧಪಡಿಸಲಾಗಿತ್ತು. ಇದನ್ನು ಸಂಬಂಧಪಟ್ಟವರಿಗೆ ತಲುಪಿಸಲಾಗುವುದು ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಹಾಸ್ಟೆಲ್ ಗಳ ಸ್ಥಿತಿಗತಿ ವರದಿ ಬಿಡುಗಡೆಯಿಂದ ಲೋಪದೋಷ ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ. ಟೆಂಡರ್ ಕರೆಯದೆಯೇ ಐದು ವರ್ಷದ ಅವಧಿಯಲ್ಲಿ ರೂ.1224 ಕೋಟಿ ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಹಾಸ್ಟೆಲ್ ಗಳಲ್ಲಿ ನಡೆದಿರುವ ಅಂದಾಜು ರೂ.2,157 ಕೋಟಿಗಳ ಅವ್ಯವಹಾರದ ಬಗ್ಗೆ ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅಧ್ಯಕ್ಷತೆಯ ವಿಧಾನಮಂಡಲದ ಸಮಿತಿಯೇ ವರದಿ ಬಹಿರಂಗಪಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಆಗ್ರಹಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಬಡಕುಟುಂಬದಿಂದ ಬಂದ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯ, ಕುರ್ಚಿ ಹಾಗೂ ಬೆಡ್ ಶೀಟ್ ಗಳಂತಹ ಸಾಮಾನ್ಯ ಸೌಲಭ್ಯಗಳೂ ಕೂಡ ವಿದ್ಯಾರ್ಥಿಗಳಿಗೆ ಸರಿಯಾಗಿ ಸಿಗುತ್ತಿಲ್ಲ. ರಾಜ್ಯದಲ್ಲಿರುವ ಅನೇಕ ಹಾಸ್ಟೆಲ್ ಗಳು ವಿದ್ಯಾರ್ಥಿಗಳು ಉಳಿಯಲು ಯೋಗ್ಯವಾದ ಹಾಸ್ಟೆಲ್ ಗಳಾಗಿಲ್ಲ. ಮೂರಲ್ಲಿ ಒಂದು ಹಾಸ್ಟೆಲ್ ನ್ನು ಬಾಡಿಗೆಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹಾಸ್ಟೆಲ್ ವ್ಯವಸ್ಥೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ನ್ಯಾಯಾಂಗ ತನಿಖೆಯಾಗಬೇಕಿದೆ. ಪಕ್ಷದ ನಾಯಕರು ರಾಜ್ಯ 3,300 ಹಾಸ್ಟೆಲ್ ಗಳಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಿದೆ. ಫೋಟೋಗಳನ್ನು ಕೂಡ ತೆಗೆದಿದೆ. ವಿದ್ಯಾರ್ಥಿಗಳಿಗೆ ಸರಿಯಾಗಿ ಬೆಳಿಗಿನ ಉಪಹಾರ, ಊಟ ರಾತ್ರಿ ಊಟಗಳೂ ಕೂಡ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಶೇ.20 ರಷ್ಟು ಎಸ್'ಸಿ ಮತ್ತು ಎಸ್'ಟಿ ಹಾಸ್ಟೆಲ್ ಗಳು ಹಾಗೂ ಶೇ.29ರಷ್ಟು ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ ಬಹುತೇಕ ವಿದ್ಯಾರ್ಥಿಗಳಿದ್ದಾರೆ. ನಾಲ್ಕು ಕೊಠಡಿಗಳಲ್ಲಿ 8-15 ವಿದ್ಯಾರ್ಥಿಗಳನ್ನು ಇರಿಸಲಾಗಿದೆ. ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಓದಲು ಹೇಗೆ ಸಾಧ್ಯ. ಪ್ರತೀ ಶೌಚಾಲಯದಲ್ಲಿ 10-15 ವಿದ್ಯಾರ್ಥಿಗಳು ಬಳಕೆ ಮಾಡಬೇಕಾಗಿದೆ. 3-2 ಹಾಸ್ಟೆಲ್ ಗಳಲ್ಲಿ ಕಂಪ್ಯೂಟರ್ ಹಾಗೂ ಟಿವಿ ಸೆಟ್ ಗಳಿಲ್ಲ. 3-4 ಹಾಸ್ಟೆಲ್ ಗಳಲ್ಲಿ ಗ್ರಂಥಾಲಯಗಳಿಲ್ಲ. ಶೇ.90 ರಷ್ಟು ಹಾಸ್ಟೆಲ್ ಗಳಲ್ಲಿ ಕ್ರೀಡಾ ಸೌಲಭ್ಯವಾಗಲೀ, ತರಬೇತುದಾರರಾಗಲೀ ಇಲ್ಲ. ನಾನು ಅಹಿಂದ ಪರವಾಗಿದ್ದೇನೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೀಗ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


