ರಾಜಕೀಯ

ಅಮಿತ್ ಶಾ, ರಾಹುಲ್ ಗಾಂಧಿ ಭೇಟಿ ಮತದಾರರ ಮೇಲೆ ಪರಿಣಾಮ ಬೀರಲ್ಲ: ಎಚ್ ಡಿಕೆ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಭೇಟಿ ಮತದಾರರ ಮೇಲೆ ಯಾವುದೇ ....

ಅಮಿತ್ ಶಾ, ರಾಹುಲ್ ಗಾಂಧಿ ಭೇಟಿ ಮತದಾರರ ಮೇಲೆ ಪರಿಣಾಮ ಬೀರಲ್ಲ: ಎಚ್ ಡಿಕೆ
ಎಚ್ ಡಿ ಕುಮಾರಸ್ವಾಮಿ
Published On :
ಯಾದಗಿರಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಭೇಟಿ ಮತದಾರರ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಭೀಮರಾನಗುಡಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕುಮರಸ್ವಾಮಿ, ಅಮಿತ್‌ ಶಾ ಎಷ್ಟೇ ಗುಡಿ ಗುಂಡಾರ ಸುತ್ತಿದರೂ,  ರಾಹುಲ್‌ ಗಾಂಧಿ ಎಷ್ಟೇ ಡಬ್ಬಾ ಅಂಗಡಿ, ಡಾಬಾಗಳಲ್ಲಿ ಟಿಫಿನ್‌ ತಿಂದು ಟೀ, ಕಾಫಿ ಕುಡಿದರೂ ರಾಜ್ಯದಲ್ಲಿ ಅವರ ಹವಾ ನಡೆಯೋಲ್ಲ ಎಂದರು.
ಎರಡೂ ರಾಷ್ಟ್ರೀಯ ಪಕ್ಷದ ನಾಯಕರು ರಾಜ್ಯದಲ್ಲಿನ ಮಠ, ಮಂದಿರ, ಮಸೀದಿಗಳಿಗೆ ಭೇಟಿ ಕೊಟ್ಟು ಜನರ ಭಾವನಾತ್ಮಕ ಸಂಬಂಧಗಳೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಇವರ ಸೋಗಲಾಡಿತನ ರಾಜ್ಯದ ಜನರಿಗೆ ಗೊತ್ತಿಲ್ಲ ಅಂದುಕೊಂಡಿದ್ದಾರೆ. ಕನ್ನಡಿಗರು ಅಷ್ಟೊಂದು ಮೂರ್ಖರಲ್ಲ ಎಂಬುದನ್ನು ಈಗಿನ ಚುನಾವಣೆ ನಿರ್ಧರಿಸಲಿದೆ ಎಂದು ಕುಮಾರಸ್ವಾಮಿ ಹೇಳಿದರು. 
ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ನೀಡಿ ನಾವು ಬಗೆಹರಿಸುತ್ತೇವೆ ಎಂಬುದಾಗಿ ರಾಹುಲ್‌ ಗಾಂಧಿ ಹೇಳುತ್ತಿದ್ದಾರೆ. ಇವರಿಗೆ ಮಹದಾಯಿ ಒಂದು ಅಂತರರಾಜ್ಯ ಸಮಸ್ಯೆ ಎಂಬುದು ಗೊತ್ತಿಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ಅಂತರರಾಜ್ಯ ಸಮಸ್ಯೆಗಳನ್ನು ಕೇಂದ್ರ ಮಧ್ಯೆ ಪ್ರವೇಶಿಸಿ ಬಗೆಹರಿಸುವುದು ಸಾಂವಿಧಾನಿಕ ನಿಯಮವಿದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತಿರುವ ವಿಷಯ. ಅಮಿತ್‌ ಶಾ ಮತ್ತು ರಾಹುಲ್ ಗಾಂಧಿ ಅವರು ಮಹದಾಯಿ ವಿಚಾರದಲ್ಲಿ ಬಾಲಿಶ ಹೇಳಿಕೆಗಳನ್ನು ನೀಡುತ್ತಿರುವುದು ಮುಜುಗರ ಉಂಟು ಮಾಡಿದೆ ಎಂದರು. 
ಇದೇ ವೇಳೆ ಮುಂದಿನ ತಿಂಗಳು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಒಂದು ಸೀಟು ಬಿಟ್ಟುಕೊಡುವಂತೆ ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸಿದ್ದೇನೆ. ಬಿಟ್ಟು ಕೊಡದಿದ್ದರೆ ಕಾಂಗ್ರೆಸ್ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಲಿದೆ. ಕೌರವರಿಗೆ ಐದು ಗ್ರಾಮ ಬಿಟ್ಟುಕೊಡುವಂತೆ ಪಾಂಡವರು ಕೇಳಿದ ನಂತರವೂ ಹಠಹಿಡಿದ ಕೌರವರ ಸ್ಥಿತಿ ಏನಾಯಿತು ಎಂಬುದು ತಿಳಿದಿದೆಯಲ್ಲ. ಅಂತಹ ಸ್ಥಿತಿಯನ್ನು ಕಾಂಗ್ರೆಸ್ ತಂದುಕೊಳ್ಳಲಿದೆ ಎಂದು ವರದಿಗಾರರ ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.