ರಾಜಕೀಯ

ವಿಜಯೇಂದ್ರಗೆ ಟಿಕೆಟ್ ನಿರಾಕರಣೆ; ಕಮಲಕ್ಕೆ ಮತ ನೀಡಬೇಡಿ ಎನ್ನುತ್ತಿರುವ ಬಿಜೆಪಿ ಕಾರ್ಯಕರ್ತರು!

ಬಿವೈ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿರುವ ಹಿನ್ನಲೆಯಲ್ಲಿ ಕೇಂದ್ರ ನಾಯಕರ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಕಾರ್ಯಕರ್ತರು ತಮ್ಮದೇ ಪಕ್ಷದ ವಿರುದ್ಧ ಪ್ರಚಾರ ನಡೆಸುತ್ತಿದ್ದು, ಕಮಲಕ್ಕೆ ಮತ ನೀಡದಂತೆ ಮನವಿ ಮಾಡುತ್ತಿದ್ದಾರೆ.

ವಿಜಯೇಂದ್ರಗೆ ಟಿಕೆಟ್ ನಿರಾಕರಣೆ; ಕಮಲಕ್ಕೆ ಮತ ನೀಡಬೇಡಿ ಎನ್ನುತ್ತಿರುವ ಬಿಜೆಪಿ ಕಾರ್ಯಕರ್ತರು!
ಸಂಗ್ರಹ ಚಿತ್ರ
Published On :
ಮೈಸೂರು: ಬಿವೈ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿರುವ ಹಿನ್ನಲೆಯಲ್ಲಿ ಕೇಂದ್ರ ನಾಯಕರ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಕಾರ್ಯಕರ್ತರು ತಮ್ಮದೇ ಪಕ್ಷದ ವಿರುದ್ಧ ಪ್ರಚಾರ ನಡೆಸುತ್ತಿದ್ದು, ಕಮಲಕ್ಕೆ ಮತ ನೀಡದಂತೆ ಮನವಿ ಮಾಡುತ್ತಿದ್ದಾರೆ.
ಪ್ರಮುಖವಾಗಿ ಮೈಸೂರಿನ ವರುಣಾ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮದೇ ಪಕ್ಷದ ವಿರುದ್ಧ ಪ್ರಚಾರ ನಡೆಸುತ್ತಿದ್ದು, ಕಮಲಕ್ಕೆ ಮತ ನೀಡದಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಅಂತೆಯೇ ಕಣದಲ್ಲಿರುವ ಯಾವುದೇ ಅಭ್ಯರ್ಥಿಗೂ ಮತ ನೀಡದಂತೆ ನೋಟಾ ಆಯ್ಕೆ ಮಾಡುವಂತೆ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ನಾಯಕ ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸಿರುವ ಹಿನ್ನಲೆಯಲ್ಲಿ ಪಕ್ಷದ ಹಿರಿಯ ನಾಯಕರಿಗೆ ತಕ್ಕ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರು ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ವಾಟ್ಸಪ್, ಫೇಸ್ ಬುಕ್ ನಲ್ಲಿ ಕಮಲದ ವಿರುದ್ಧ ಅಭಿಯಾನ
ಇನ್ನು ಮೈಸೂರು ಮತ್ತು ಚಾಮರಾಜನಗರಗಳಲ್ಲಿ ಬಿಜೆಪಿ ಮತ ನೀಡದಂತೆ, ನೋಟಾ ಆಯ್ಕೆ ಮಾಡಿ ಎಂಬ ಮನವಿಯ ನೂರಾರು ಸಂದೇಶಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅಲ್ಲದೆ ವರುಣಾದಲ್ಲಿ ಅಂತಿಮ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿದ ಟಿ ಬಸವರಾಜು ಅವರ ಪರವಾಗಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರಚಾರಕ್ಕೆ ತೆರಳುತ್ತಿಲ್ಲ.
ಬಿಜೆಪಿ ನಾಯಕರಿಗೆ ತಲೆನೋವಾದ ಕಾರ್ಯಕರ್ತ ಬಂಡಾಯ
ಇನ್ನು ಮೈಸೂರು ಮತ್ತು ಚಾಮರಾಜನಗರಗಳಲ್ಲಿನ ಬಿಜೆಪಿ ಕಾರ್ಯಕರ್ತರ ಬಂಡಾಯ ಕಮಲ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಕಾರ್ಯಕರ್ತ ಬಂಡಾಯ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಹಿಂದೆ ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರ ಯತೀಂದ್ರ ವಿರುದ್ಧ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಕುರಿತು ಮಾಹಿತಿ ಸಿಕ್ಕಾಗ ಕ್ಷೇತ್ರದಲ್ಲಿ ಸಮರೋಪಾದಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದ ಇದೇ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ ಬಳಿಕ ತಮ್ಮದೇ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. 
ನಂಜನಗೂಡಿನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ವಿಜೇಂದ್ರ ಸ್ಪರ್ಧೆ ಮಾಡುತ್ತಿಲ್ಲ ಎಂದಾಗಲೇ ಅದೇ ಸಭೆಯಲ್ಲೇ ನಾಯಕರ ಎದುರೇ ಕುರ್ಚಿಗಳನ್ನು ಮುರಿದು ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಜಿಲ್ಲೆಯಾದ್ಯಂತ ಇರುವ ಬಿಜೆಪಿ ನಾಯಕರ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ಮಾಡಿದ ಘಟನೆ ಕೂಡ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಹೇಳಿಕೆ ನೀಡಿದ್ದ ವಿಜಯೇಂದ್ರ ಟಿಕೆಟ್ ಕೈ ತಪ್ಪಿದ್ದರಿಂದ ತಮಗೆ ಅಸಮಾಧನ ಇಲ್ಲ. ಅಭ್ಯರ್ಥಿ ಯಾರೇ ಆದರೂ ಅವರ ಪರವಾಗಿ ಮತ್ತು ಪಕ್ಷದ ಪರವಾಗಿ ಪ್ರಚಾರ ನಡೆಸಬೇಕು. ಓರ್ವ ಕಾರ್ಯಕರ್ತನಾಗಿ ಅದು ನನ್ನ ಕರ್ತವ್ಯವಾಗಿದ್ದು, ಅದನ್ನು ನಾನು ಮಾಡುತ್ತೇನೆ. ಕ್ಷೇತ್ರದಲ್ಲೇ ಇದ್ದು ಪಕ್ಷದ ಪರ ಪ್ರಚಾರ ನಡೆಸುತ್ತೇನೆ. ಬೆಂಬಲಿಗರು ಅಸಮಾಧಾನಗೊಳ್ಳಬಾರದು ಎಂದು ಕರೆ ನೀಡಿದ್ದರು. ಇನ್ನು ಬಂಡಾಯ ಕಾರ್ಯಕರ್ತರ ಆಕ್ರೋಶ ಶಮನಕ್ಕೆ ಯತ್ನಿಸಿರುವ ಬಿಜೆಪಿ ವಿಜಯೇಂದ್ರಗೆ ಯುವಮೋರ್ಚಾ ಅಧ್ಯಕ್ಷರನ್ನಾಗಿಸಿದೆ. ಇದಕ್ಕೂ ಸಮಾಧಾನವಾಗದ ಕಾರ್ಯಕರ್ತರು ಇಂದಿಗೂ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.
ಮತ್ತೊಂಂದೆಡೆ ವರುಣಾದಲ್ಲಿ ವಿಜಯೇಂದ್ರ ಟಿಕೆಟ್ ಕೈ ತಪ್ಪಿದ್ದರಿಂದ ಬೇಸತ್ತಿದ್ದ ಬಿಜೆಪಿ ಕಾರ್ಯಕರ್ತ ಗವಿಯಪ್ಪ ಎಂಬಾತ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ಕ್ಷೇತ್ರದಲ್ಲಿನ ಒಟ್ಟಾರೆ ಬೆಳವಣಿಗೆಗಳ ಕುರಿತು ಮಾತನಾಡಿರುವ ಬಿಜೆಪಿ ಹಿರಿಯ ನಾಯಕರೊಬ್ಬರು ತಮ್ಮದೇ ಪಕ್ಷದ ಕೆಲ ನಾಯಕರು ಹಾಗೂ ಕೆಲ ಕಾಣದ 'ಕೈ'ಗಳು ಬಿಜೆಪಿ ವಿರುದ್ಧ ಪ್ರಚಾರ ನಡೆಸುವಂತೆ ಬಿಜೆಪಿ ಕಾರ್ಯಕರ್ತರನ್ನು ಪ್ರೇರೇಪಿಸುತ್ತಿದ್ದಾರೆ. ಇನ್ನು ವಿಜಯೇಂದ್ರಗೆ ಟಿಕೆಟ್ ಕೈತಪ್ಪಲು ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಆರ್ ಎಸ್ ಎಸ್ ಮುಖಂಡ ಸಂತೋಷ್ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.