ಲೋಕಸಭಾ ಟಿಕೆಟ್ ನೀಡುವುದಾಗಿ ಪ್ರಜ್ವಲ್ ರೇವಣ್ಣ ಸಂತೈಸಿದ ಎಚ್ ಡಿ ದೇವೇಗೌಡ?
ಪಕ್ಷದ ವಿರುದ್ಧ ಬಹಿರಂಗವಾಗಿಯೇ ಮಾತನಾಡುವ ಮೂಲಕ ಆಂತರಿಕ ಬಂಡಾಯದ ಆತಂಕಕ್ಕೆ ಕಾರಣವಾಗಿದ್ದ ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಲೋಕಸಭಾ ಸ್ಥಾನ ನೀಡುವುದಾಗಿ ಹೇಳಿ ಜೆಡಿಎಸ್ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಸಂತೈಸಿದ್ದಾರೆ ಎನ್ನಲಾಗಿದೆ.

Published On :
ಬೆಂಗಳೂರು: ಪಕ್ಷದ ವಿರುದ್ಧ ಬಹಿರಂಗವಾಗಿಯೇ ಮಾತನಾಡುವ ಮೂಲಕ ಆಂತರಿಕ ಬಂಡಾಯದ ಆತಂಕಕ್ಕೆ ಕಾರಣವಾಗಿದ್ದ ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಲೋಕಸಭಾ ಟಿಕೆಟ್ ನೀಡುವುದಾಗಿ ಹೇಳಿ ಜೆಡಿಎಸ್ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಸಂತೈಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಪ್ರಜ್ವಲ್ ರೇವಣ್ಣ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರ ನಗರ ಅಥವಾ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಈಗಾಗಲೇ ವಿಧಾನಸಭಾ ಕ್ಷೇತ್ರದಲ್ಲಿ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಘೋಷಣೆ ಮಾಡಿರುವುದರಿಂದ ಪ್ರಜ್ವಲ್ ರೇವಣ್ಣ ಅವರಿಗೆ ಸ್ಥಾನವಿಲ್ಲ ಎಂದು ತೀರ್ಮಾನಿಸಲಾಗಿತ್ತು. ಇದಾಗ್ಯೂ ಪ್ರಜ್ವಲ್ ರೇವಣ್ಣ ಪಟ್ಟು ಸಡಿಲಿಸದ ಹಿನ್ನಲೆಯಲ್ಲಿ ಎಚ್ ಡಿ ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಮೂಲಕ ಸಂತೈಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಯಾವುದಾದರೂ ಲೋಕಸಭಾ ಕ್ಷೇತ್ರ, ಅಥವ ಪ್ರಮುಖವಾಗಿ ಹಾಸನ ಕ್ಷೇತ್ರದಿಂದ ಪಕ್ಷದ ಪರ ಕಣಕ್ಕಿಳಿಸುವುದಾಗಿಯೂ ಎಚ್ ಡಿ ದೇವೇಗೌಡ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಜ್ವಲ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ ಇತ್ತೀಚೆಗಷ್ಟೇ ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸಾಕಷ್ಟು ಬಳಲಿಕೆಯ ನಡುವೆಯೇ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಕುಮಾರಸ್ವಾಮಿ ಅವರ ಒತ್ತಡವನ್ನು ಕಡಿತಗೊಳಿಸುವ ಕಾರಣದಿಂದಾಗಿಯೂ ಪ್ರಜ್ವಲ್ ರೇವಣ್ಣ ಅವರಿಗೆ ಮಣೆ ಹಾಕಲಾಗಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಪ್ರಜ್ವಲ್ ತಂದೆ ರೇವಣ್ಣ, ಅವನಿನ್ನೂ ಯುವಕ.. ಉತ್ಸಾಹವಿದೆ. ಹೀಗಾಗಿ ಪಕ್ಷ ಸಂಘಟನೆಗಾಗಿ ಆತನಿಗೆ ಜವಾಬ್ದಾರಿ ನೀಡಲಾಗಿದೆ. ಕಠಿಣ ಶ್ರಮವಹಿಸಿ ಪಕ್ಷ ಸಂಘಟನೆ ಮಾಡಬೇಕಿದೆ. ಪಕ್ಷದ ಹಿರಿಯ ಮುಖಂಡರಾಗಿ ಪಕ್ಷಕ್ಕಾಗಿ ದುಡಿಯುವವರಿಗೆ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


