ಜೆಡಿಎಸ್ ಆಂತರಿಕ ಭಿನ್ನಮತ ಸ್ಫೋಟ: ಪಕ್ಷದಲ್ಲಿ ಸೂಟ್ಕೇಸ್ ಸಂಸ್ಕೃತಿ ಇದೆ ಎಂದ ಪ್ರಜ್ವಲ್ ರೇವಣ್ಣ
ವಿಧಾನಸಭೆ ಚುನಾವಣೆಗೂ ಮೊದಲೇ ಜೆಡಿಎಸ್ ನಲ್ಲಿ ಮತ್ತೊಮ್ಮೆ ಆಂತರಿಕ ಬಂಡಾಯ ಸ್ಪೋಟಗೊಂಡಿದ್ದು, ಸೂಟ್ಕೇಸ್ ಜತೆ ಬಂದವರಿಗಷ್ಟೇ ಪಕ್ಷದಲ್ಲಿ ಮಣೆ, ನಿಷ್ಠೆಯಿಂದ ದುಡಿದವರಿಗೆ ಮನ್ನಣೆ ಇಲ್ಲ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರು: ವಿಧಾನಸಭೆ ಚುನಾವಣೆಗೂ ಮೊದಲೇ ಜೆಡಿಎಸ್ ನಲ್ಲಿ ಮತ್ತೊಮ್ಮೆ ಆಂತರಿಕ ಬಂಡಾಯ ಸ್ಪೋಟಗೊಂಡಿದ್ದು, ಸೂಟ್ಕೇಸ್ ಜತೆ ಬಂದವರಿಗಷ್ಟೇ ಪಕ್ಷದಲ್ಲಿ ಮಣೆ, ನಿಷ್ಠೆಯಿಂದ ದುಡಿದವರಿಗೆ ಮನ್ನಣೆ ಇಲ್ಲ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಗುರುವಾರ ಮೈಸೂರಿನ ಹುಣಸೂರಿನಲ್ಲಿ ಆಯೋಜಿಸಿದ್ದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು, "ನಮ್ಮ ಪಕ್ಷದಲ್ಲಿ ಒಂದು ಬಗೆಯ ರೋಗವಿದ್ದು, ನಿಷ್ಠೆಯಿಂದ ದುಡಿದವರಿಗೆ ಕೊನೇ ಬೆಂಚಿನ ಸೀಟು ನೀಡುತ್ತಾರೆ. ಸೂಟ್ ಕೇಸ್ನೊಂದಿಗೆ ಬಂದವರಿಗೆ ಪಕ್ಷದಲ್ಲಿ ಮುಂಭಾಗದ ಸೀಟು ನೀಡುತ್ತಾರೆ. ಇದು ನಿಲ್ಲಬೇಕಿದೆ ಎಂದು ತಮ್ಮದೇ ಪಕ್ಷದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ, ಯುವ ಮುಖಂಡ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ.
ಇದೇ ವೇಳೆ, "ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಲೋಚನೆ ಇದೆ. ಹಾಗೆಂದ ಮಾತ್ರಕ್ಕೆ ಪಕ್ಷವನ್ನು ಹೋಳಾಗಿಸುವ ಮತ್ತು ಬಂಡಾಯದ ಕಿಡಿ ಹೊತ್ತಿಸುವ ಕಾರ್ಯಕ್ಕೆ ನಾನು ಮುಂದಾಗುವುದಿಲ್ಲ. ನಾನು ಅಭ್ಯರ್ಥಿಯಾಗಲಿ, ಆಗದಿರಲಿ ಪಕ್ಷದ ಹಿತಕಾಯುವುದ ನನ್ನ ಧರ್ಮ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಪಕ್ಷಗ ಯಾವುದೇ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ನನಗೆ ಯಾವುದೇ ಜಾತಿ, ಮತ ತಿಳಿದಿಲ್ಲ. 10 ವರ್ಷಗಳಿಂದ ಪಕ್ಷಕ್ಕೆ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ಎಲ್ಲರೂ ಒಂದಾಗಿ ದುಡಿಯಬೇಕಿದೆ. ಆ ಮೂಲಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ ಎಂದು ಪ್ರಜ್ವಲ್ ಹೇಳಿದರು.
ಒಡಕಿಗೆ ಕಾರಣವಾದ ಅನಿತಾ ಕುಮಾರಸ್ವಾಮಿ?
ಇನ್ನು ಜೆಡಿಎಸ್ ಭಿನ್ನಮತಕ್ಕೆ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಾರಣ ಎಂದು ಹೇಳಲಾಗುತ್ತಿದ್ದು, ಈ ಹಿಂದೆ ಕುಟುಂಬದಲ್ಲಿ ತಾವು ಹಾಗೂ ರೇವಣ್ಣ ಮಾತ್ರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದರು. ಜೆಡಿಎಸ್ ವರಿಷ್ಠ ದೇವೇಗೌಡ ಅವರದ್ದೂ ಇದೇ ನಿಲುವಾಗಿದೆ. ಆದರೆ ಬುಧವಾರ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಚನ್ನಪಟ್ಟಣದಲ್ಲಿ ನೀಡಿದ್ದ ಹೇಳಿಕೆ ಪಕ್ಷದ ಕಾರ್ಯಕರ್ತರಿಗೆ ಅಚ್ಚರಿ ಮೂಡಿಸಿತ್ತು. ಇದೇ ಕ್ಷೇತ್ರದಿಂದ ಚುನಾವಣೆಯಲ್ಲಿ ಕಣಕ್ಕಿಳಿಯಬೇಕೆಂಬ ಒತ್ತಡ ಬರುತ್ತಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ತಾನೂ ಕೂಡ ಹುಣಸೂರು ಕ್ಷೇತ್ರದ ಟಿಕೆಟ್ ಅಭ್ಯರ್ಥಿ ಎನ್ನುವ ಸಂದೇಶವನ್ನು ಪಜ್ವಲ್ ವರಿಷ್ಠರಿಗೆ ರವಾನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


