ಟಿಪ್ಪು ಆರಾಧಕರು ಅಧಿಕಾರಕ್ಕೆ ಬರಬಾರದು: ಹುಬ್ಬಳ್ಳಿಯಲ್ಲಿ ಯೋಗಿ ಆದಿತ್ಯನಾಥ್
ಇಡೀ ದೇಶದಲ್ಲಿ ಶ್ರೀರಾಮನನ್ನು ಮತ್ತು ಹನುಮಂತನನ್ನು ಆರಾಧಿಸಲಾಗುತ್ತದೆ. ಆದರೆ ಕರ್ನಾಟಕ ಸರ್ಕಾರ ಟಿಪ್ಪು ಸುಲ್ತಾನ್ ನನ್ನು ಆರಾಧಿಸುತ್ತಿದ್ದು,....

Published On :
ಹುಬ್ಬಳ್ಳಿ: ಇಡೀ ದೇಶದಲ್ಲಿ ಶ್ರೀರಾಮನನ್ನು ಮತ್ತು ಹನುಮಂತನನ್ನು ಆರಾಧಿಸಲಾಗುತ್ತದೆ. ಆದರೆ ಕರ್ನಾಟಕ ಸರ್ಕಾರ ಟಿಪ್ಪು ಸುಲ್ತಾನ್ ನನ್ನು ಆರಾಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಟಿಪ್ಪು ಆರಾಧಕರು ಅಧಿಕಾರಕ್ಕೆ ಬರಬಾರದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯ ಸರ್ಕಾರದ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆಯ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಉತ್ತರ ಪ್ರದೇಶ ಸಿಎಂ, ಉತ್ತರ ಕರ್ನಾಟಕದ ಜನತೆಗೆ ನನ್ನ ಧನ್ಯವಾದಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಬಳಿಕ ಹಿಂದಿಯಲ್ಲಿ ಕರ್ನಾಟಕದ ಭೂಮಿ ಭಜರಂಗಬಲಿ, ಹನುಮನ ಭೂಮಿ. ಕರ್ನಾಟಕ ಶೌರ್ಯದ ನೆಲ. ಯಡಿಯೂರಪ್ಪ ನೇತೃತ್ವದಲ್ಲಿ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಅದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅರಾಜಕತೆ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಉತ್ತರ ಪ್ರದೇಶ ಸರ್ಕಾರ ಅಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದೆ. ಆದರೆ ಕರ್ನಾಟಕ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿಲ್ಲ. ರಾಜ್ಯದ ರೈತರು ಸಾಲದ ಸುಳಿಗೆ ಸಿಕ್ಕಿ ಸಾಯುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರಿಗೆ ಸಾಲ ಮನ್ನಾ ಮಾಡುವ ಮನಸ್ಸಿಲ್ಲ. ಏಕೆಂದರೆ ಕಾಂಗ್ರೆಸ್ ಬಳಿ ಉಳಿದಿರುವುದು ಎರಡೇ ರಾಜ್ಯ. ಜನರ ದುಡ್ಡನ್ನು ಕೊಳ್ಳೆ ಹೊಡೆದು ಚುನಾವಣೆ ಎದುರಿಸಬೇಕಿದೆ ಎಂದರು.
ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 10 ಸಾವಿರ ಕೋಟಿ ಅನುದಾನ ನೀಡಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಬಯಸುತ್ತಿಲ್ಲ ಎಂದು ಯೋಗಿ ಆರೋಪಿಸಿದರು.
ದೇಶಕ್ಕೆ ನರೇಂದ್ರ ಮೋದಿ ಅವರಂತಹ ಬಲಿಷ್ಠ ನಾಯಕ ಸಿಕ್ಕಿದ್ದಾನೆ. ಹಿಮಾಚಲ ಪ್ರದೇಶದದಿಂದ ಕಾಂಗ್ರೆಸ್ ಪಕ್ಷವನ್ನು ಹೊಡೆದೋಡಿಸಿಯಾಗಿದೆ. ಕರ್ನಾಟಕದಿಂದಲೂ ಪಕ್ಷವನ್ನು ಓಡಿಸಿ. ಕಾಂಗ್ರೆಸ್ ಮುಕ್ತ ರಾಜ್ಯ ಮಾಡಿ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿಗೆ ಸಹಕರಿಸಿ ಎಂದು ಕರೆ ನೀಡಿದರು.
ಬಿಜೆಪಿ ಅಧಿಕಾರಕ್ಕೆ ಬಂದ್ರೆ ನೀರಾವರಿಗೆ 1 ಲಕ್ಷ ಕೋಟಿ ಮೀಸಲು: ಯಡಿಯೂರಪ್ಪ
ಸಮಾವೇಶನದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗೆ 1 ಲಕ್ಷ ಕೋಟಿ ರುಪಾಯಿ ಮೀಸಲಿಡುತ್ತೇವೆ. ಇದನ್ನು ನಾನು ರಕ್ತದಲ್ಲಿ ಬರೆದು ಕೊಡಲು ಸಿದ್ಧ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರ ಜಗತ್ತೇ ಭಾರತವನ್ನು ಅಚ್ಚರಿಯಿಂದ ನೋಡುತ್ತಿದೆ. ಕಾಂಗ್ರೆಸ್ ನಾಯಕರು ದೇಶದ ರಾಜಕೀಯದ ನೈಜ ಚಿತ್ರಣವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ ಮಹದಾಯಿ ಯೋಜನೆಗೆ 100 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದೇನೆ. 7.65 ಟಿಎಂಸಿ ಅಡಿ ನೀರು ಬಿಡುವ ಬಗ್ಗೆ ಗೋವಾದಿಂದ ಯಾವುದೇ ವಿರೋಧವಿಲ್ಲ. ಕುಡಿಯುವ ನೀರನ್ನು ಮಾನವೀಯತೆ ಆಧಾರದ ಮೇಲೆ ಕರ್ನಾಟಕಕ್ಕೆ ಬಿಡುವುದಕ್ಕೆ ವಿರೋಧವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ. ಆದರೂ ನ್ಯಾಯ ಮಂಡಳಿ ಸಲಹೆಯಂತೆ, ಈ ಕುರಿತು ದ್ವಿಪಕ್ಷೀಯ ಮಾತುಕತೆ ಅಗತ್ಯವಿದೆ ಎಂದೂ ಪತ್ರದಲ್ಲಿ ತಿಳಿಸಿರುವುದಾಗಿ ಬಿಎಸ್ ವೈ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


