ಪರೇಶ್ ಮೇಸ್ತಾ ನಿಗೂಢ ಸಾವು; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಬಿಜೆಪಿ ಮನವಿ
ಹೊನ್ನಾವರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪರೇಶ್ ಮೇಸ್ತಾ ಸಾವಿನ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿ ಮಂಗಳವಾರ ಬಿಜೆಪಿ ಮುಖಂಡರ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದಾರೆ.

Published On :
ಬೆಂಗಳೂರು: ಹೊನ್ನಾವರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪರೇಶ್ ಮೇಸ್ತಾ ಸಾವಿನ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿ ಮಂಗಳವಾರ ಬಿಜೆಪಿ ಮುಖಂಡರ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದಾರೆ.
ಹೊನ್ನಾವರ ಮತ್ತು ಶಿರಸಿಯಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವ ಪರೇಶ್ ಮೆಸ್ತಾ ನಿಗೂಢ ಸಾವಿನ ಪ್ರಕರಣ ದಿನೇ ದಿನೇ ವಿಕೋಪಕ್ಕೆ ತೆರಳುತ್ತಿರುವ ಬಿನ್ನಲ್ಲೇ ಇಂದು ರಾಜ್ಯ ಬಿಜೆಪಿ ಘಟಕದ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ತನಿಖೆ ಮೇಲೆ ಅಪನಂಬಿಕೆ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು ರಾಜ್ಯಪಾಲರು ಈ ಬಗ್ಗೆ ಮಧ್ಯ ಪ್ರವೇಶಿಸಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ಮನವಿ ಪತ್ರವನ್ನು ಕೂಡ ನೀಡಿದ್ದು, ಬಿಜೆಪಿ ಮುಖಂಡರ ಮನವಿ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ನಾಯಕರು ತಿಳಿಸಿದ್ದಾರೆ.
'ಸೂಕ್ತ ತನಿಖೆಯಾಗದಿದ್ದರೆ ಹೊನ್ನಾವರ ಹೊತ್ತಿಉರಿಯಲಿದೆ'
ಇನ್ನು ಇದಕ್ಕೂ ಮೊದಲು ವಿಧಾನಸೌಧದ ಆಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರು, ರಾಜ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಂಘಪರಿವಾರದ ಕಾರ್ಯಕರ್ತರ ಕೊಲೆ ಆಗಿದೆ. ಆದರೆ, ಇದವರೆಗೂ ರಾಜ್ಯ ಸರ್ಕಾರ ಒಂದು ಪ್ರಕರಣವನ್ನೂ ಭೇದಿಸಿಲ್ಲ. ಆದರೆ ಈಗ ಪರೇಶ್ ಮೇಸ್ತಾ ಸಾವು ಪ್ರಕರಣದ ತನಿಖೆಗ ಸೂಕ್ತ ರೀತಿಯಲ್ಲಿ ಆಗದಿದ್ದರೆ, ಇಡೀ "ಕರಾವಳಿ ಭಾಗ ಹೊತ್ತಿ ಉರಿಯಲಿದೆ ಎಂದು ಎಚ್ಚರಿಕೆ ನೀಡಿದರು. ಅಂತೆಯೇ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಆಗ್ರಹಿಸಿದರು.
ಐಜಿಪಿ ಸಿದ್ದರಾಮಯ್ಯ ಅವರ ಗುಲಾಮ: ಈಶ್ವರಪ್ಪ ಕಟು ಟೀಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಐಜಿಪಿ ಹೇಮಂತ್ ನಿಬಾಂಳ್ಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ಈ ಹಿಂದಿನ ಪ್ರಕರಣಗಳಂತೆ ಈ ಪ್ರಕರಣವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಚ್ಚಿಹಾಕಲು ಹೊರಟಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ದಳಕ್ಕೆ ನೀಡುವಂತೆ ಒತ್ತಾಯಿಸುತ್ತೇವೆ ಎಂದರು.
ಬಿಜೆಪಿ ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಸಂಸದ ಪಿ.ಸಿ.ಮೋಹನ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ, ಶಾಸಕರಾದ ಸುರೇಶ್ ಕುಮಾರ್, ಹೆಚ್.ವಿಶ್ವನಾಥ್, ನಾರಾಯಣಸ್ವಾಮಿ, ಅಶ್ವಥ್ ನಾರಾಯಣ ಸೇರಿ ಪ್ರಮುಖರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengalurubjpಬಿಜೆಪಿPoliticsರಾಜಕೀಯKarnataka Governorಕರ್ನಾಟಕ ರಾಜ್ಯಪಾಲParesh Mesta Deathಪರೇಶ್ ಮೆಸ್ತಾ ಸಾವು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


