ಡಿಕೆಶಿ ನಂತರ ನನ್ನ ಮೇಲೂ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ: ಸಚಿವ ಎಂ.ಬಿ.ಪಾಟೀಲ್
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮನೆ ಮತ್ತು....

Published On :
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸುವ ಮೂಲಕ ರಾಜ್ಯದ ಪ್ರಭಾವಿ ಸಚಿವರಿಗೆ ಶಾಕ್ ನೀಡಿದ ಬೆನ್ನಲ್ಲೇ, ಮತ್ತೊಬ್ಬ ಪ್ರಭಾವಿ ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ಮೇಲೂ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ರಾಜ್ಯದಲ್ಲಿನ ಐಟಿ ದಾಳಿಯನ್ನು ಖಂಡಿಸಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು, ನನಗೆ ಸತತವಾಗಿ ಮಾಹಿತಿ ಬರುತ್ತಿದೆ. ಬಿಜೆಪಿ ಪಕ್ಷ ನನ್ನನ್ನು ಟಾರ್ಗೆಟ್ ಮಾಡಿಕೊಂಡಿದೆ. ಯಾಕೆ ಎಂದು ಗೊತ್ತಿಲ್ಲ. ಇಷ್ಟು ಮಾತ್ರ ಹೇಳುತ್ತೇನೆ, ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟಾರ್ಗೆಟ್ ಮಾಡಿದ್ದಾರೆ ಅಂತ ಹೇಳಲ್ಲ. ಆದರೆ ಕಾದು ನೋಡಿ, ಬಿಜೆಪಿ ನನ್ನನ್ನೂ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿದ್ದಾರೆ.
ನಾನಾಗಲಿ ನನ್ನ ಸಂಸ್ಥೆಯಾಗಲಿ ಐಟಿ ದಾಳಿಯ ಬಗ್ಗೆ ಯಾವುದೇ ಭಯ ಹೊಂದಿಲ್ಲ. ಐಟಿ ಅಧಿಕಾರಿಗಳು ಬಂದರೆ ಹೂಗುಚ್ಛ ನೀಡಿ ಸ್ವಾಗತಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದಾಳಿ ನಡೆಸುವ ಸ್ವಾತಂತ್ರ್ಯಇದೆ. ಆದರೆ ಎಲ್ಲರದ್ದೂ ತನಿಖೆ ಮಾಡಲಿ, ಕಾಂಗ್ರೆಸ್,ಜೆಡಿಎಸ್, ಬಿಜೆಪಿಯ ನಾಯಕರ ವಿರುದ್ಧ ದಾಳಿ ಮಾಡಲಿ. ಕೇವಲ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುವುದು ಬೇಡ. ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುವುದು ಖಂಡನೀಯ ಎಂದರು.
ಇದೇ ವೇಳೆ ನಿಮ್ಮನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ನಾನು ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡಲಾಗಿದೆ ಎಂದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳ ಅವಧಿಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಆರ್ ವಿ ದೇಶಪಾಂಡೆ ಸೇರಿದಂತೆ ಇತರೆ ಸಚಿವರ ಮೇಲೂ ಐಟಿ ದಾಳಿ ನಡೆಯುವ ಸಾಧ್ಯತೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


