ಪಂಚಾಯತ್ ಸಮರ: ಸದ್ಯಕ್ಕೆ ಸಿಎಂ ಸಿದ್ದು ನಿರಾಳ?
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್ ಮೇಲೆ ಭಾರಿ ಪರಿಣಾಮವನ್ನೇ ಬೀರುವ ಮುನ್ಸೂಚನೆ ದೊರೆತಿದ್ದು, ಅತಂತ್ರ ಫಲಿತಾಂಶ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ...

ಬೆಂಗಳೂರು: ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್ ಮೇಲೆ ಭಾರಿ ಪರಿಣಾಮವನ್ನೇ ಬೀರುವ ಮುನ್ಸೂಚನೆ ದೊರೆತಿದ್ದು, ಅತಂತ್ರ ಫಲಿತಾಂಶ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ನಿರಾಳರಾಗುವಂತೆ ಮಾಡಿದೆ.
ಜಿಲ್ಲಾ ಪಂಚಾಯಿತಿಯಲ್ಲಿ 30 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ತಾಲ್ಲೂಕು ಪಂಚಾಯಿತಿಯಲ್ಲಿ 175 ಸ್ಥಾನಗಳ ಪೈಕಿ ಕೇವಲ 56 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇದು ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದು, ರಾಜ್ಯ ರಾಜಕೀಯದ ಮೇಲೆ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್, ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ರಾಜಕೀಯ ತಜ್ಞರು ತರಹೇವಾರಿ ಲೆಕ್ಕಾಚಾರ ನಡೆಸುತ್ತಿದ್ದಾರೆ.
ದಲಿತ ಸಿಎಂ ಮತ್ತು ನಾಯಕತ್ವ ಬದಲಾವಣೆ ಕುರಿತಂತೆ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಇದೀಗ ಮತ್ತೆ ಸ್ಫೋಟಗೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇನ್ನು ಪ್ರಸ್ತುತ ಫಲಿತಾಂಶ ಸಿಎಂ ಸಿದ್ದರಾಮಯ್ಯ ಅವರಿಗೂ ಸಮಾಧಾನ ತಂದಿಲ್ಲ. ಈ ವಿಚಾವರವನ್ನು ಸ್ವತಃ ಅವರೇ ಹೇಳಿಕೊಂಡಿದ್ದು, ‘ಫಲಿತಾಂಶ ನಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿಲ್ಲ’ ಎಂದು ಹೇಳುವ ಮೂಲಕ ಫಲಿತಾಂಶದಿಂದ ತಾವು ನಿರಾಳರಾಗಿಲ್ಲ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಪ್ರಬಲ ಸಮುದಾಯಗಳಾದ ಲಿಂಗಾಯತರು-ಒಕ್ಕಲಿಗರು ಸಿದ್ದರಾಮಯ್ಯ ‘ಕೈ’ ಹಿಡಿದಿಲ್ಲ ಎಂಬುದು ಇಲ್ಲಿಯೂ ಸ್ಪಷ್ಟವಾಗಿದೆ. ಹೀಗಾಗಿ, ಸಿದ್ದರಾಮಯ್ಯ ಮುಂದುವರಿಕೆಯಿಂದ ಪಕ್ಷದ ಭವಿಷ್ಯಕ್ಕೆ ಕುತ್ತು ಬರಲಿದೆ ಎಂದು ಈ ಹಿಂದೆ ಸಾಕಷ್ಟು ಬಾರಿ ಹೈಕಮಾಂಡ್ ಗೆ ದೂರೊಯ್ದಿದ್ದ ನಾಯಕರಿಗೆ ಪ್ರಸ್ತುತ ಫಲಿತಾಂಶ ಮತ್ತೊಂದು ಆಯುಧವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಹೀಗಾಗಿ ದುಬಾರಿ ವಾಚ್ ಮತ್ತಿತರ ವಿವಾದಗಳಿಂದ ಚೇತರಿಸಿಕೊಳ್ಳುವ ಮುನ್ನವೇ ಸಿದ್ದರಾಮಯ್ಯ ಅವರನ್ನು ಪಂಚಾಯತ್ ಫಲಿತಾಂಶ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


