ರಾಜ್ಯಪಾಲರ ಪತ್ರ ತಂದ ಕೋಲಾಹಲ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಬಗ್ಗೆ ಸ್ಪಷ್ಟನೆ ಕೋರಿ ರಾಜ್ಯಪಾಲರು ಸರ್ಕಾರಕ್ಕೆ ಬರೆದಿದ್ದ ಪತ್ರ ಗುರುವಾರ ಪರಿಷತ್ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿತು...

ವಿಧಾನ ಪರಿಷತ್ : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಬಗ್ಗೆ ಸ್ಪಷ್ಟನೆ ಕೋರಿ ರಾಜ್ಯಪಾಲರು ಸರ್ಕಾರಕ್ಕೆ ಬರೆದಿದ್ದ ಪತ್ರ ಗುರುವಾರ ಪರಿಷತ್ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿತು.
ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು ರಾಜ್ಯಪಾಲರ ಪತ್ರ ತೋರಿಸಿ ಮಾತನಾಡಿದ್ದಕ್ಕೆ ಕಾನೂನು ಸಚಿವ ಟಿ.ಬಿ. ಜಯಚಂದ್ರ ಆಕ್ಷೇಪ ವ್ಯಕ್ತಪಡಿಸಿದರು. ನಿಯಮ 68ರ ಅಡಿಯಲ್ಲಿ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಚರ್ಚೆ ನಡೆಯುವಾಗ ಈ ಪ್ರಸಂಗ ನಡೆಯಿತು.
`ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವೆ ನಡೆಯುವ ವಿಶ್ವಾಸನೀಯ ಪತ್ರ ವ್ಯವಹಾರವನ್ನು ಈ ರೀತಿ ಸದನದಲ್ಲಿ ಪ್ರದರ್ಶಿಸುವುದು ಎಷ್ಟು ಸರಿ' ಎಂದು ಜಯಚಂದ್ರ ಸಭಾಪತಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಈಶ್ವರಪ್ಪ, ನಾನು ಈ ಪತ್ರ ಹಿಡಿದು ರಾಜಕೀಯ ಮಾಡುತ್ತಿಲ್ಲ. ಸಭಾನಾಯಕರಾದ ಎಸ್.ಆರ್. ಪಾಟೀಲರ ಅನುಮತಿ ಮೇರೆಗೆ ಹೇಳುತ್ತಿದ್ದೇನೆ. ರಾಜ್ಯಪಾಲರು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ನ. 7ರಂದು ಪತ್ರ ಬರೆದಿದ್ದಾರೆ. ಸರ್ಕಾರ ನ. 16ರಂದು ಸ್ಪಷ್ಟನೆ ನೀಡಲಾಗಿದೆ ಎಂದು ಉತ್ತರಿಸಿದ್ದರೂ ಸಹ ಇದುವರೆಗೆ ರಾಜ್ಯಪಾಲರ ಕಚೇರಿಗೆ ಪತ್ರ ತಲುಪಿಲ್ಲ ಎಂದು ದೂರಿದರು.
ಇದರಿಂದ ಸಿಟ್ಟಿಗೆದ್ದ ಆಡಳಿತ ಪಕ್ಷದ ಸದಸ್ಯರು `ಈ ಪತ್ರ ಎಲ್ಲಿ ಸಿಕ್ಕಿತು, ರಾಜ್ಯಪಾಲರ ಕಚೇರಿಯಿಂದ ತರಿಸಿಕೊಂಡಿದ್ದೀರಾ? ಈಗಂತು ರಾಜಭವನ ಬಿಜೆಪಿ ಕಚೇರಿಯಾಗುತ್ತಿದೆ' ಎಂದು ಮುಗಿಬಿದ್ದರು. ಕೂಡಲೇ ಎದ್ದುನಿಂತ ಪ್ರತಿಪಕ್ಷದವರು, ನಮ್ಮ ಸರ್ಕಾರವಿದ್ದಾಗ ನೀವು ರಾಜಭವನವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದಿರಿ. ಯಡಿಯೂರಪ್ಪ ಅವರ ಮೇಲೆ ನಿಮ್ಮ ರಾಜ್ಯಪಾಲರು ಕೇಸು ಬೀಳುವಂತೆ ನೋಡಿಕೊಂಡರು. ಈಗ ನ್ಯಾಯಾಲಯ ಅವರಿಗ ಛೀಮಾರಿ ಹಾಕಿದೆ ಎಂದು ಪ್ರತಿದಾಳಿ ನಡೆಸಿದರು. ಇದರಿಂದ ಕ್ರುದ್ಧಗೊಂಡ ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ, ರಾಜ್ಯವನ್ನು ಲೂಟಿ ಹೊಡೆದು ಜೈಲಿಗೆ ಹೋಗಿ ಬಂದಿದ್ದೀರಿ. ನಿಮಗೆ ನಾಚಿಕೆ ಆಗಬೇಕು. ಕೆಪಿಎಸ್ಸಿ ನೇಮಕ, ವಿವಿಗಳಿಗೆ ಕುಲಪತಿ ನೇಮಕಾತಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದೀರಿ. ರಾಜಭವನ ಇಂದು ಅಕ್ಷರಶಃ ಬಿಜೆಪಿ ಕಚೇರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಉಭಯ ಪಕ್ಷದವರು ಆರೋಪ ಪ್ರತ್ಯಾರೋಪ ಮಾಡಲು ಮುಂದಾದಾಗ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಮರಿತಿಬ್ಬೇಗೌಡರು ಸದನವನ್ನು ಮುಂದೂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


