ಸಿಬಿಐಗೆ ಒಪ್ಪದ ಸರ್ಕಾರ
ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ ತನಿಖೆಗೆ ಎಸ್‍ಐಟಿಯೇ ಸಾಕೆಂಬ ಸರ್ಕಾರದ ಉತ್ತರ ವಿರೋಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್...

ವಿಧಾನಸಭೆ: ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ ತನಿಖೆಗೆ ಎಸ್‍ಐಟಿಯೇ ಸಾಕೆಂಬ ಸರ್ಕಾರದ ಉತ್ತರ ವಿರೋಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದರು. ಕಳೆದ ಎರಡು ದಿನಗಳಿಂದ ಈ ಸಂಬಂಧ ನಡೆಯುತ್ತಿದ್ದ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಉಪಸ್ಥಿತರಿರಲಿಲ್ಲ. ಹೀಗಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಉತ್ತರ ನೀಡಲು ಮುಂದಾದಾಗ ಪ್ರತಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಕಾನೂನಿನ ಪ್ರಕಾರ ಪ್ರಕರಣವನ್ನು ಸಿಬಿಐಗೆ ವಹಿಸಲು ಸಾಧ್ಯವಿಲ್ಲದೇ ಇರುವುದರಿಂದ ಎಸ್‍ಐಟಿ ಮೂಲಕವೇ ತನಿಖೆ ನಡೆಸುತ್ತೇವೆ. ಜತೆಗೆ ಲೋಕಾಯುಕ್ತರ ಪದಚ್ಯುತಿ ವಿಚಾರವೂ ಸೇರಿದಂತೆ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲಾಗುವುದು ಎಂದು ಜಯಚಂದ್ರ ಉತ್ತರ ನೀಡಿದರು. ಆದರೆ, ಸರ್ಕಾರ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಇನ್ನೂ ಅಂಟಿಕೊಂಡಿದೆ. ಅಶ್ವಿನ್ ರಾವ್ ಅವರ ವಿರುದ್ಧ ಎಫ್ ಐಆರ್ ದಾಖಲಾದರೂ ಇನ್ನೂ ಬಂಧಿಸಿಲ್ಲ. ಪರಸ್ಪರ ರಕ್ಷಣೆ ಕಾರ್ಯ ನಡೆಯುತ್ತಿದೆ. ಸತ್ಯಾಂಶ ಬಯಲಾಗಬೇಕಿದ್ದರೆ ಸಿಬಿಐ ತನಿಖೆಯೇ ಸೂಕ್ತ ಎಂದು ಆಗ್ರಹಿಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದರು.
ಎಲ್ಲರ ಮೇಲೂ ಕ್ರಮ: ಪ್ರತಿಪಕ್ಷಗಳ ವಿರೋಧದ ಮಧ್ಯೆಯೇ ಉತ್ತರ ನೀಡಿದ ಜಯಚಂದ್ರ ಈಗ ನಮ್ಮ ಮುಂದೆ ಉದ್ಭವವಾಗಿರುವ ಕಗ್ಗಂಟಿನಿಂದ ಪಾರಾಗುವುದಕ್ಕೆ ಲೋಕಾಯುಕ್ತ ಕಾಯ್ದೆ ತಿದ್ದುಪಡಿಯೊಂದೇ ಪರಿಹಾರ. ಲೋಕಾಯುಕ್ತರ ನೇಮಕ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಆದಷ್ಟು ಬೇಗ ಕಾನೂನು ತಿದ್ದುಪಡಿ ತರಲಾಗುವುದು. ಆದರೆ ಸಿಬಿಐ ತನಿಖೆ ಅಸಾಧ್ಯ. ಸಿಬಿಐನಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ನೇತೃತ್ವದಲ್ಲೇ ಎಸ್‍ಐಟಿ ರಚಿಸಲಾಗಿದೆ. ಅಶ್ವಿನ್ ರಾವ್ ಸೇರಿದಂತೆ ಪ್ರಕರಣದಲ್ಲಿ ಯಾರು ತಪ್ಪಿತಸ್ಥರಿದ್ದಾರೋ ಅವರೆಲ್ಲರ ವಿರುದ್ಧ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಜನ ಮೆಚ್ಚುವ ರೀತಿ ಕಾನೂನು ತಿದ್ದುಪಡಿ ತರಲಾಗುವುದು ಎಂದು ಪ್ರತಿಪಕ್ಷಗಳ ಮನವೊಲಿಸುವ ಪ್ರಯತ್ನ ನಡೆಸಿದರು. ನಿರ್ಣಯಕ್ಕೆ ಆಗ್ರಹ: ಈ ಹಂತದಲ್ಲಿ ಮಧ್ಯಪ್ರವೇಶಮಾಡಿದ ಬಿಜೆಪಿಯ ಸುರೇಶ್ ಕುಮಾರ್, ಈಗಿನ ಪರಿಸ್ಥಿತಿಯಲ್ಲಿ ನ್ಯಾ. ವೈ.ಭಾಸ್ಕರ ರಾವ್ ಅವರ ಮೇಲೆ ಯಾರಿಗೂ ನಂಬಿಕೆ ಇಲ್ಲ.
ಆದರೆ ಅವರ ಅಧಿಕಾರವಧಿ ಇನ್ನೂ ಮೂರು ವರ್ಷ ಇದೆ. ಕಾನೂನು ಪ್ರಕಾರ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ಭಾವನೆಗೆ ಗೌರವಕೊಟ್ಟು ನೀವೇ ಅಧಿಕಾರದಿಂದ ನಿರ್ಗಮಿಸಿ ಎಂದು ಸದನದಲ್ಲಿ ನಿರ್ಣಯ ತೆಗೆದುಕೊಂಡು ಅವರಿಗೆ ಕಳುಹಿಸಿಕೊಡೋಣ ಎಂದು ಆಗ್ರಹಿಸಿದರು.
ಈ ರೀತಿ ನಾವು ಮನವಿ ಮಾಡಿದರೆ ಲೋಕಾಯುಕ್ತರು ಅದಕ್ಕೆ ಸ್ಪಂದಿಸುತ್ತಾರೆಂದು ಸಂಬುವುದಕ್ಕೆ ಸಾಧ್ಯವೇ? ಒಂದೊಮ್ಮೆ ನಾವು ನಿರ್ಣಯ ಮಾಡಿ ಕಳುಹಿಸದರೂ ಅವರು ಅಧಿಕಾರದಿಂದ ಕದಲದೇ ಇದ್ದರೆ ಈ ಸದನದ ಗೌರವಕ್ಕೆ ಧಕ್ಕೆಯಾಗುವುದಿಲ್ಲವೇ? ಕಾಲ ಇನ್ನೂ ಕೈ ಮೀರಿ ಹೋಗಿಲ್ಲ. ಲೋಕಾಯುಕ್ತ ಕಾಯ್ದೆ ಈ ಸದನದ ಸೃಷ್ಟಿ. ಹೀಗಾಗಿ ಲೋಕಾಯುಕ್ತರ ಪದಚ್ಯುತಿಗೆ ನಾವೇ ತಿದ್ದುಪಡಿ ತರೋಣ. ಎರಡು ಮೂರು ದಿನದಲ್ಲಿ ಕಾಯ್ದೆ ತಿದ್ದುಪಡಿ ಮಾಡಿ ಎಂದು ಸರ್ಕಾರಕ್ಕೆ ಪಟ್ಟು ಹಿಡಿಯೋಣ. ಹೀಗಾಗಿ ನಿರ್ಣಯದ ಅವಶ್ಯಕತೆ ಇಲ್ಲ ಎಂದು ರಮೇಶ್ ಕುಮಾರ್ ಪ್ರತಿಪಾದಿಸಿದರು.
ಸುರೇಶ್ ಕುಮಾರ್ ನಿರ್ಣಯಕ್ಕೆ ಬೆಂಬಲ ನೀಡಿದ ಬಿಜೆಪಿಯ ಬಸವರಾಜ್ ಬೊಮ್ಮಾಯಿ, ಹಿಂದೆ ನ್ಯಾ. ಮೂ. ರಾಮಸ್ವಾಮಿ ಅವರನ್ನು ಮಹಾಭಿಯೋಗಕ್ಕೆ ಒಳಪಡಿಸುವ ಸಂದರ್ಭದಲ್ಲಿ ಅಂದಿನ ಕೇಂದ್ರ ಸರ್ಕಾರ ಅಂತಿಮವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಅವರ ಪ್ರಜ್ಞೆಗೆ ಬಿಟ್ಟಿತ್ತು. ನಾವೂ ಹಾಗೆಯೇ ಮಾಡೋಣ. ಏಕೆಂದರೆ ಕಾಯ್ದೆ ಬದಲಾಗುವಂತೆ ವರ್ತಿಸುವ ಲೋಕಾಯುಕ್ತರನ್ನು ನಮ್ಮ ರಾಜ್ಯ ಇದುವರೆಗೆ ಕಂಡಿರಲಿಲ್ಲ. ಈಗ ಒಬ್ಬರು ಈ ರೀತಿ ಮಾಡಿದ್ದಕ್ಕಾಗಿ ಕಾಯ್ದೆಯನ್ನು ದುರ್ಬಲಗೊಳಿಸುವುದು ಬೇಡ ಎಂದರು.
ಕೊನೆಗೆ ಈ ಚರ್ಚೆಗೆ ಕೊನೆ ಹಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ನಾವು ಏನೋ ನಿರ್ಧಾರ ತೆಗೆದುಕೊಂಡು ಕಳುಹಿಸುತ್ತೇವೆ. ಆದರೆ ಅವ (ಲೋಕಾಯುಕ್ತ) ಅಲ್ಲಿಂದ ಹೋಗುವುದಿಲ್ಲ. ವಡ್ಡ ಅಲ್ಲೇ ಕೂತಾ ಅಂದ್ರೆ ಏನು ಮಾಡ್ತೀರ? ಹೀಗಾಗಿ ಈ ಸದನದ ಭಾವನೆ ಏನೆಂಬುದು ಮಾಧ್ಯಮದ ಮೂಲಕವೇ ರವಾನೆಯಾಗಲಿ ಎಂದು ಚರ್ಚೆಗೆ ತೆರೆ ಎಳೆದರು. ಆದರೆ ಸರ್ಕಾರ ನಿರ್ಣಯ ತೆಗೆದುಕೊಳ್ಳುವುದಕ್ಕೂ ಸಿದ್ಧವಿಲ್ಲ. ಸಿಬಿಐ ತನಿಖೆಗೂ ಒಪ್ಪಿಸುತ್ತಿಲ್ಲ. ಭ್ರಷ್ಟರ ರಕ್ಷಣೆಗೆ ನಿಂತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


