ರಾಜಕೀಯ

ಉಭಯ ಸದನಗಳಲ್ಲಿ ರೈತ ಆತ್ಮಹತ್ಯೆ ಪ್ರತಿಧ್ವನಿ

ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿಸ್ತøತ ಚರ್ಚೆಗೆ ಅನುವು ಮಾಡಿಕೊಡ ಬೇಕೆಂದು ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನಮಂಡಲದ ಉಭಯ ಸದನದಲ್ಲಿ ಸೋಮವಾರ ಧರಣಿ ನಡೆಸಿದರು...

ಉಭಯ ಸದನಗಳಲ್ಲಿ ರೈತ ಆತ್ಮಹತ್ಯೆ ಪ್ರತಿಧ್ವನಿ
ವಿಧಾನಮಂಡಲ ಅಧಿವೇಶನ
Published On :

ವಿಧಾನಸಭೆ: ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿಸ್ತøತ ಚರ್ಚೆಗೆ ಅನುವು ಮಾಡಿಕೊಡ ಬೇಕೆಂದು ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನಮಂಡಲದ ಉಭಯ ಸದನದಲ್ಲಿ ಸೋಮವಾರ ಧರಣಿ ನಡೆಸಿದರು.

ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ 2-3 ತಿಂಗಳಲ್ಲಿ 48-50 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಎಲ್ಲ ವಿಷಯಗಳನ್ನು ಬದಿಗೊತ್ತಿ ಈ ಗಂಭೀರ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಪ್ರಶ್ನೋತ್ತರದ ನಂತರ ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದರು.

ಇದಕ್ಕೊಪ್ಪದ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಆಗ ಸ್ಪೀಕರ್ ಸದನ ಮುಂದೂಡಿದರು. ಅತ್ತ ಮೇಲ್ಮನೆಯಲ್ಲಿ ಸದನ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು ರೈತರ ಅತ್ಮಹತ್ಯೆ ವಿಷಯದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ನಿಯಮ 59ರ ಅಡಿ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿ ಬಿಜೆಪಿ ಸದಸ್ಯರು ಕೇಳಿದರೆ, ಅದಕ್ಕೆ ಅವಕಾಶ ಇಲ್ಲವೆಂದು ಆಡಳಿತ ಪಕ್ಷದವರು ವಾದಿಸಿದರು. ಹಾಗಿದ್ದರೆ ನಿಯಮ 68ರ ಅಡಿಯಲ್ಲಿ ಪ್ರಾಥಮಿಕ ಚರ್ಚೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು. ಈ ವಿಷಯದಲ್ಲಿ ಸಾಕಷ್ಟು ವಾದ-ಪ್ರತಿವಾದಗಳು ನಡೆದ ಬಳಿಕ ಬಿಜೆಪಿ ಧರಣಿ ನಡೆಸಿತು.

ಮಧ್ಯಾಹ್ನ 12.45ಕ್ಕೆ ವಿಧಾನಸಭೆ ಕಲಾಪ ಪುನಃ ಆರಂಭವಾದಾಗ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಧರಣಿ ಮುಂದುವರಿಸಿದರು. ಬಿಜೆಪಿ ಸದಸ್ಯರ ಧರಣಿ, ಘೋಷಣೆ ನಡುವೆಯೇ ಪ್ರಶ್ನೋತ್ತರ ಅವಧಿಯನ್ನು ಸ್ಪೀಕರ್ ಮುಗಿಸಿದರು. ನಂತರ ಭೋಜನ ವಿರಾಮ ಘೋಷಿಸಿ ಮಧ್ಯಾಹ್ನ 2.30ಕ್ಕೆ ಕಲಾಪ ಮುಂದೂಡಿದರು.

ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ದಿನವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಸರ್ಕಾರ ಯಾವುದೇ ವರದಿ ತರಿಸಿಕೊಳ್ಳುತ್ತಿಲ್ಲ. ರೈತರಿಗೆ ವಿಶ್ವಾಸ ತುಂಬುವ ಕೆಲಸವನ್ನೂ ಮಾಡುತ್ತಿಲ್ಲ. ಇಡೀ ದೇಶದಲ್ಲಿ ನಮ್ಮ ರೈತರ ಆತ್ಮಹತ್ಯೆ ವಿಷಯ ಚರ್ಚೆಯಾಗುತ್ತಿದೆ. ಮಂಡ್ಯದಲ್ಲಿ 15 ಹಾಗೂ ಮುಖ್ಯಮಂತ್ರಿಯವರ ಜಿಲ್ಲೆಯಲ್ಲೇ 8 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದು, ಕಬ್ಬು ಬೆಳೆಗಾರರ ಬಗ್ಗೆ ಮಾತ್ರ ಬೆಳಗಾವಿಯಲ್ಲಿ ಚರ್ಚೆ ನಡೆಸಿತು. ಈಗ ಪ್ರತಿ ದಿನವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ನಿಲುವಳಿ ಸೂಚನೆಗೆ ಅವಕಾಶ ನೀಡದ್ದಕ್ಕೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ರಾಹುಲ್ ಎಲ್ಲಿ, ಮೋದಿ ಎಲ್ಲಿ?

ವಿಧಾನಸಭೆಯಲ್ಲಿ ಕಾಂಗ್ರೆಸ್‍ನ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಎಲ್ಲಿ? ಎಂಬ ಪ್ರಶ್ನೆ ಮೊಳಗಿತು. ಧರಣಿ ನಿರತ ಬಿಜೆಪಿ ಸದಸ್ಯರು `ಎಲ್ಲಿ ಎಲ್ಲಿ, ರಾಹುಲ್ ಗಾಂಧಿ ಎಲ್ಲಿ' ಎಂದು ವ್ಯಂಗ್ಯ ಘೋಷಣೆ ಕೂಗಿದರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನವರು `ಎಲ್ಲಿ ಎಲ್ಲಿ, ಮೋದಿ ಎಲ್ಲಿ?' ಎಂದು ತಿರುಗೇಟು ನೀಡಿದರು.

ಧರಣಿ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದಾಗ, `ಎಲ್ಲಿ ಎಲ್ಲಿ, ರಾಹುಲ್ ಗಾಂಧಿ ಎಲ್ಲಿ' ಎಂದು ಬಿಜೆಪಿಯ ಸಿ.ಟಿ. ರವಿ ಘೋಷಣೆ ಕೂಗಿದರು. ಇದನ್ನು ಬಿಜೆಪಿಯ ಇತರೆ ಸದಸ್ಯರು ಪ್ರತಿಧ್ವನಿಸಿದರು. ಆಗ ಕಾಂಗ್ರೆಸ್ ಕಡೆಯಿಂದ ಒಂದಷ್ಟು ಪ್ರತಿರೋಧ ವ್ಯಕ್ತವಾಯಿತು. ನಂತರ ಅದೇ ಘೋಷಣೆ ಬಿಜೆಪಿಯಿಂದ ಮುಂದುವರಿದಾಗ, ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಅವರು `ಎಲ್ಲಿ ಎಲ್ಲಿ, ಮೋದಿ ಎಲ್ಲಿ?' ಎಂದು ಪ್ರತಿ ಘೋಷಣೆ ಕೂಗಿದರು. ರೈತರಿಗೆ ಅಧಿಕಾರ ಭಾಗ್ಯ ಕೊಡಿ, ಇಲ್ಲದಿದ್ದರೆ ಅಧಿಕಾರ ಬಿಡಿ; ಅಯ್ಯಯ್ಯೋ ಅನ್ಯಾಯ, ಸಾವಿನ ಭಾಗ್ಯ ಬೇಡವೇ ಬೇಡ. ರೈತ ವಿರೋಧಿ ಸರ್ಕಾರ ಇದು ಎಂದು ಬಿಜೆಪಿ ಸದಸ್ಯರು ಧರಣಿಯಲ್ಲಿ ಘೋಷಣೆ ಕೂಗಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.