ರಾಜಕೀಯ

ಅಂಬಿ-ವಿಶಿ ದೋಷಾರೋಪ

ವಸತಿ ಸಚಿವ ಅಂಬರೀಷ್ ಮತ್ತು ಮಾಜಿ ಸಂಸದ ಎಚ್.ವಿಶ್ವನಾಥ್ ನಡುವಿನ ಅಸಮಾಧಾನ ಈಗ ಅಕ್ಷರಶಃ ಬೀದಿ..

ಅಂಬಿ-ವಿಶಿ ದೋಷಾರೋಪ
ವಸತಿ ಸಚಿವ ಅಂಬರೀಷ್ ಮತ್ತು ಮಾಜಿ ಸಂಸದ ಎಚ್.ವಿಶ್ವನಾಥ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ವಸತಿ ಸಚಿವ ಅಂಬರೀಷ್ ಮತ್ತು ಮಾಜಿ ಸಂಸದ ಎಚ್.ವಿಶ್ವನಾಥ್ ನಡುವಿನ ಅಸಮಾಧಾನ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದು, ಪ್ರದೇಶ ಕಾಂಗ್ರೆಸ್ ಕಚೇರಿ ಎದುರೇ ಇಬ್ಬರೂ ಪರಸ್ಪರ ದೋಷಾರೋಪಣೆ ಮಾಡಿಕೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸಂಘಟನೆ ಸಂಬಂಧ ನಡೆಯುತ್ತಿರುವ ಸಭೆಗೆ ಆಗಮಿಸಿದ್ದ ಇವರಿಬ್ಬರೂ ಪ್ರತ್ಯೇಕವಾಗಿ ಮಾಧ್ಯಮದ ಜತೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಎಚ್.ವಿಶ್ವನಾಥ್‍ಗೆ ಬುದ್ಧಿ ಹೇಳುವಂತೆ ಸಚಿವ ಅಂಬರೀಷ್ ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ವಿವಾದ ಬುಗಿಲೆದ್ದಿದೆ.

ಸಮನ್ವಯ ಸಮಿತಿ ಸಭೆಯ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಪಕ್ಷದ ಕಚೇರಿಗೆ ಬಂದ ಕೆಲವೇ ನಿಮಿಷದಲ್ಲಿ ಆಗಮಿಸಿದ ವಿಶ್ವನಾಥ್ ಮೊದಲು ಅಂಬರೀಷ್ ವಿರುದ್ಧ ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

`ನಾನು ಕಲಾವಿದ ಅಂಬರೀಷ್ ಅವರ ಬಗ್ಗೆ ಮಾತನಾಡಿಲ್ಲ. ಮಂತ್ರಿ ಅಂಬರೀಷ್ ಬಗ್ಗೆ ಟೀಕೆ ಮಾಡಿದ್ದೇನೆ. ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ತಪ್ಪಿ ನಡೆದಾಗ ಪ್ರಶ್ನಿಸುವ ಅಧಿಕಾರ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೂ ಇದೆ. ನಾನು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ಸಚಿವರ ವರ್ತನೆ ಪ್ರಶ್ನಿಸಿದ್ದೇನೆ. ಸಿದ್ದರಾಮಯ್ಯ  ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದ 11.5 ಲಕ್ಷ ಕುಟುಂಬಗಳನ್ನು ಋಣಮುಕ್ತಗೊಳಿಸಲು ರು.2480 ಕೋಟಿ ವಸತಿ ಸಾಲವನ್ನು ಮನ್ನಾ ಮಾಡಿದರು.

ಆದರೆ ವಸತಿ ಸಚಿವ ಅಂಬರೀಷ್ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ. ಏಕೆ ಅವರು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಿಲ್ಲ? ಕಾಂಗ್ರೆಸ್ ಕಾರ್ಯಕರ್ತನಾಗಿ ನಾನು ಇದನ್ನು ಪ್ರಶ್ನಿಸಬಾರದೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕನೇ?
ಇದಾದ ಬಳಿಕ ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಚಿವ ಅಂಬರೀಷ್, `ವಿಶ್ವನಾಥ್‍ಗೆ ನನ್ನ ಮೇಲೆ ಜಾಸ್ತಿ ಪ್ರೀತಿ ಇರಬಹುದು. ಆದರೆ ಹಾದಿ ಬೀದಿಯಲ್ಲಿ ಈ ರೀತಿ ಮಾತನಾಡುವುದಕ್ಕೆ ಅವರೇನು ಪ್ರತಿಪಕ್ಷ ನಾಯಕರೇ?' ಎಂದು ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.

ಸರ್ಕಾರ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುವುದಕ್ಕೆ ಅನುಗುಣವಾಗಿ ಮುಖಂಡರು ವರ್ತಿಸಬೇಕು. ಇವರ ಸಲಹೆ ಮತ್ತು ಪ್ರಶ್ನೆಯನ್ನು ಸೂಕ್ತ ವೇದಿಕೆಯಲ್ಲಿ ನೀಡಲಿ. ಹಾದಿಬೀದಿಯಲ್ಲಿ ಮಾತನಾಡಿದರೆ ಸಹಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.