ಕಸ್ತೂರಿರಂಗನ್ ವರದಿ: 1563 ಗ್ರಾಮಗಳ ಸಮೀಕ್ಷೆಗೆ ಒಪ್ಪಿಗೆ
ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹಾಗೂ ಬಿಜೆಪಿ ಶಾಸಕರ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕಸ್ತೂರಿ ರಂಗನ್..

ವಿಧಾನಸಭೆ: ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹಾಗೂ ಬಿಜೆಪಿ ಶಾಸಕರ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪವಾಗಿರುವ 1563 ಗ್ರಾಮಗಳಲ್ಲಿ ಸ್ಥಳ ಸಮೀಕ್ಷೆಗೆ ಒಪ್ಪಿದೆ.
ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿರು ವಂತೆ ಸ್ಥಳ ಸಮೀಕ್ಷೆಯಿಲ್ಲದ ವರದಿ ಸಿಂಧುವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ಬದಿಗಿಟ್ಟು, ಕೂಡಲೇ ಸ್ಥಳ ಸಮೀಕ್ಷೆಗೆ ಮುಂದಾಗಬೇಕು ಎಂದು ಬಿಜೆಪಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಜಿ.ಬೋಪಯ್ಯ ಹಾಗೂ ಡಿ.ಎನ್.ಜೀವರಾಜ್ ಆಗ್ರಹಿಸಿದರು. ಬಿಜೆಪಿ ಶಾಸಕರ ಒತ್ತಾಯಕ್ಕೆ ಧ್ವನಿಗೂಡಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಪಶ್ಚಿಮಘಟ್ಟ ಭಾಗದ ಶಾಸಕರ ಸಭೆಯನ್ನು ಶುಕ್ರವಾರವೇ ಕರೆದು ಈ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
ಸಚಿವ ಸಂಪುಟ ಉಪಸಮಿತಿ ಸಭೆಯ ಬಳಿಕ ಈ ಬಗ್ಗೆ ಅಂತಿಮ ನಿಲುವು ತೆಗೆದುಕೊಳ್ಳುತ್ತೇವೆ ಎಂದು ಅರಣ್ಯ ಸಚಿವ ಬಿ.ರಮಾನಾಥ್ ರೈ ಹೇಳಿದರೂ, ಇದಕ್ಕೆ ಯಾವುದೇ ಸದಸ್ಯರು ಸಹಮತ ಸೂಚಿಸಲಿಲ್ಲ. ಸ್ಥಳ ಸಮೀಕ್ಷೆ ಹೊರತುಪಡಿಸಿ ಮತ್ಯಾವುದೇ ವರದಿಯನ್ನು ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡುವುದಿಲ್ಲ ಎಂದು ಶಾಸಕರು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಅಂತಿಮವಾಗಿ ಸ್ಥಳ ಸಮೀಕ್ಷೆ ನಡೆಸಲು ಅರಣ್ಯ ಸಚಿವರು ಒಪ್ಪಿಗೆ ನೀಡಿದರು.
ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು
ಕೇಂದ್ರ ಸಚಿವ ಜಾವ್ಡೇಕರ್ ಅವರೊಂದಿಗೆ ಬಿಜೆಪಿ ಶಾಸಕರ ನಿಯೋಗ ಇತ್ತೀಚೆಗೆ ಚರ್ಚೆ ನಡೆಸಿದೆ. ಸಚಿವರು ಸ್ಪಷ್ಟಪಡಿಸಿದಂತೆ ಸ್ಥಳ ಸಮೀಕ್ಷೆ ಅನಿವಾರ್ಯ. ಸಚಿವ ಸಂಪುಟದ
ಉಪಸಮಿತಿ ವರದಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಹೀಗಿರುವಾಗ ಉಪಸಮಿತಿಗಾಗಿ ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲ. ಸ್ಥಳ ಸಮಿತಿಗೆ
ಅಧಿಕಾರ ನೀಡಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಬೇಕು.
ಈ ಸಂಬಂಧ ಶುಕ್ರವಾರವೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕು. ವರದಿ ನೀಡಲು ಏ.15 ಕೊನೆಯ ದಿನವಾಗಿದೆ. ಉಪಸಮಿತಿಯಿಂದ ಈ ಕೆಲಸ ಸಾಧ್ಯವಿಲ್ಲ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಸಿದರು. ಕೇಂದ್ರಕ್ಕೆ ವರದಿ ನೀಡುವಾಗ ಬಫರ್ ಝೋನ್‍ನ ವ್ಯಾಪ್ತಿಯನ್ನು 10 ಕಿ.ಮೀನಿಂದ ಕಡಿಮೆ ಮಾಡಬೇಕು. ಕೃಷಿ ಸೇರಿದಂತೆ ಕೆಲ
ಚಟುವಟಿಕೆಗಳಿಗೆ ಅನುಮತಿ ನೀಡಬೇಕು ಹಾಗೂ ಅರಣ್ಯವಲಯ ಮಿತಿಯನ್ನು ಶೇ.50ಕ್ಕೆ ಏರಿಸಬೇಕು ಎಂದು ಈ ಸಂದರ್ಭದಲ್ಲಿ ಶಾಸಕರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


