ರಾಜಕೀಯ

ಬಿಜೆಪಿಯ ರಾಜಕೀಯ ದ್ವೇಷ ಕಾಂಗ್ರೆಸ್ ನಾಯಕರ ಆಕ್ರೋಶ

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಕೋರ್ಟಿಗೆ ಹಾಜರಾಗುವಂತೆ ಮಾಡಿದ...

ಬಿಜೆಪಿಯ ರಾಜಕೀಯ ದ್ವೇಷ ಕಾಂಗ್ರೆಸ್ ನಾಯಕರ ಆಕ್ರೋಶ
ಕಾಂಗ್ರೆಸ್
Published On :

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಕೋರ್ಟಿಗೆ ಹಾಜರಾಗುವಂತೆ ಮಾಡಿದ ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಆನಂದರಾವ್ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು. ಬಳಿಕ ಫ್ರೀಡಂಪಾರ್ಕ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಎನ್‍ಡಿಎ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಈ ಪ್ರತಿಭಟನೆಯು ಕೋರ್ಟ್ ವಿರುದ್ಧವಲ್ಲ, ಬದಲಾಗಿ ರಾಜಕೀಯ ದ್ವೇಷದ ಮುಖೇನ ಪ್ರತಿಪಕ್ಷಗಳನ್ನು ನಿಯಂತ್ರಿಸಲು ಹೊರಟಿರುವ ಬಿಜೆಪಿ ವಿರುದ್ಧ ಎಂಬುದಾಗಿ ಭಾಷಣ ಮಾಡಿದ ಎಲ್ಲಾ ಮುಖಂಡರು ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆಡಳಿತಾತ್ಮಕ ದೃಷ್ಟಿಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಮುಖಂಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡ ಡಾ.ಸುಬ್ರಹ್ಮಣಿಯನ್ ಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಜೈಲು ಬೇಲು ಹೊಸದಲ್ಲ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ದೇಶದ ಶಕ್ತಿ, ಕಾಂಗ್ರೆಸ್‍ಗೆ ಜೈಲು ಮತ್ತು ಬೇಲು ಎರಡೂ ಹೊಸದಲ್ಲ. ಯಾರು ಏನೇ ಮಾಡಿದರು ಕಾಂಗ್ರೆಸ್ ಪಕ್ಷವನ್ನು ಏನೂ ಮಾಡಲು ಸಾಧ್ಯವಿಲ್ಲ. 2004ರಲ್ಲಿ ಯುಪಿಎಗೆ ಬಹುಮತ ಬಂದಾಗ ಅಂದು ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಪ್ರಧಾನಿಯಾಗುವಂತೆ ಸಲಹೆ ನೀಡುತ್ತಾರೆ. ಆಗ ಸುಷ್ಮಾ ತಲೆ ಬೋಳಿಸಿಕೊಳ್ಳುವೆ ಎಂಬ ನಾಟಕವಾಡುತ್ತಾರೆ. ಇದಾವುದಕ್ಕೂ ಸೊಪ್ಪು ಹಾಕದ ಸೋನಿಯಾಗಾಂಧಿ ಅಲ್ಪಸಂಖ್ಯಾತರಾದ ಸಿಖ್ ಜನಾಂಗದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಅಂತಹ ಹೃದಯ ವೈಶಾಲ್ಯತೆ ಇಂದಿನ ಪ್ರಧಾನಿಗಿಲ್ಲ ಎಂದು ಟೀಕಿಸಿದರು. ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಮಾತನಾಡಿ, ಸುಬ್ರಮಣಿಯನ್ ಸ್ವಾಮಿ ಒಬ್ಬ ವಂಚಕ, ವಿದೂಷಕ. ಪ್ರಧಾನಿ ಆತನನ್ನು ಛೂಬಿಟ್ಟು ಕಾಂಗ್ರೆಸ್ಸಿಗರ ಸ್ವಾಭಿಮಾನ ಕೆಣಕಿದ್ದಾರೆ. ತಾವು ಕೊಟ್ಟ ಎಲ್ಲಾ ಭರವಸೆಗಳು ಮುಗಿದು, ಯಾವುದೂ ಈಡೇರದೆ ಜನ ಪ್ರಶ್ನಿಸುತ್ತಿರುವುದರಿಂದ ಪ್ರಧಾನಿ ಈ ಬಾಣ ಬಿಟ್ಟಿದ್ದಾರೆ. ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದವರು ಕನಿಷ್ಠ ಪಕ್ಷ 15 ರುಪಾಯಿ ಹಾಕಿಲ್ಲ. ಇದುವರೆಗೆ ತನ್ನ ಹೆಂಡತಿಗೆ ಮತ್ತು ತಾಯಿಗೆ ಭದ್ರತೆ ನೀಡುವುದಕ್ಕಾಗದ ಪ್ರಧಾನಿ ಈ ದೇಶದ ಹೆಣ್ಣು ಮಕ್ಕಳನ್ನು ಹೇಗೆ ರಕ್ಷಿಸುತ್ತಾರೆ? ಎಂದು ಮೂದಲಿಸಿದರು. ಸಚಿವರಾದ ಕೆ.ಜೆ. ಜಾರ್ಜ್, ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಅಭಯಚಂದ್ರ ಜೈನ್, ಪಕ್ಷದ ಮುಖಂಡರಾದ ಪ್ರೋ.ಬಿ.ಕೆ. ಚಂದ್ರಶೇಖರ್, ವಿ.ಆರ್. ಸುದರ್ಶನ್, ಎಂ.ವಿ. ರಾಜಶೇಖರನ್, ಸಿ. ನಾರಾಯಣಸ್ವಾಮಿ, ಸಿ.ಪಿ. ಯೋಗೀಶ್ವರ್, ಬಿ. ಎಲ್. ಶಂಕರ್, ಆರ್.ವಿ. ವೆಂಕಟೇಶ್, ಭೈರತಿ ಬಸವರಾಜ, ಭೈರತಿ ಸುರೇಶ್, ಎಸ್.ಟಿ.ಸೋಮಶೇಖರ್, ಬ್ರಿಜೇಶ್ ಕಾಳಪ್ಪ, ನಂಜಯ್ಯ ಮಠ, ರಾಣಿ ಸತೀಶ್, ಎ.ಎನ್. ಮೂರ್ತಿ, ಲಕ್ಷ್ಮೀ ಹೆಬ್ಬಾಳ್ಕರ್, ರಿಜ್ವಾನ್ ಅರ್ಷದ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಸುಬ್ರಮಣ್ಯಸ್ವಾಮಿ ಆಪಾದನೆಯಲ್ಲಿ ಹುರುಳಿಲ್ಲ ಈ ಮಧ್ಯೆ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು, ನ್ಯಾಷನಲ್ ಹೆರಾಲ್ಡ್ ಆಸ್ತಿ ಹೊಡೆಯಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂಬ ಸುಬ್ರಮಣ್ಯಸ್ವಾಮಿ ಆರೋಪದಲ್ಲಿ ಹುರುಳಿಲ್ಲ. ಇದು ಕೇವಲ ರಾಜಕೀಯ ದುರುದ್ದೇಶದಿಂದ ಮಾಡಿರುವ ಆಪಾದನೆ ಎಂದರು. ಈ ಪ್ರಕರಣದಲ್ಲಿ ಯಾವುದೇ ರೀತಿಯ ಆಸ್ತಿ ಮತ್ತು ಹಣದ ಅವ್ಯವಹಾರ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಕುಮ್ಮಕ್ಕಿನಿಂದ ಇಂತಹ ಬೆಳವಣಿಗೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಕಾನೂನಿನ ಚೌಕಟ್ಟಿನಲ್ಲಿ ರಾಜಕೀಯ ಹೋರಾಟ ನಡೆಸಲಿದೆ. ಕಾನೂನಿಗೆ ಗೌರವ ನೀಡುವುದಕ್ಕಾಗಿಯೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೋರ್ಟ್‍ಗೆ ಹಾಜರಾಗಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.