ಸಿಎಂ ವಿರುದ್ಧ ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು
ಕೇಂದ್ರದ `ಪ್ರಕಾಶ ಪಥ' ಯೋಜನೆಯ ಹೆಸರನ್ನು `ಹೊಸಬೆಳಕು' ಎಂದು ಬದಲಿಸಿ ಎಲ್‍ಇಡಿ ಬಲ್ಬ್ ವಿತರಣೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ...

ಬೆಂಗಳೂರು: ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಕೇಂದ್ರದ `ಪ್ರಕಾಶ ಪಥ' ಯೋಜನೆಯ ಹೆಸರನ್ನು `ಹೊಸಬೆಳಕು' ಎಂದು ಬದಲಿಸಿ ಎಲ್‍ಇಡಿ ಬಲ್ಬ್ ವಿತರಣೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.
ಪಕ್ಷದ ರಾಜ್ಯ ವಕ್ತಾರ ಎಸ್.ಸುರೇಶ್ ಕುಮಾರ್ ಹಾಗೂ ಬಿಜೆಪಿ ಚುನಾವಣಾ ನಿರ್ವಹಣಾ ಪ್ರಕೋಷ್ಠದ ರಾಜ್ಯ ಸಂಚಾಲಕ ದತ್ತಗುರು ಹೆಗಡೆಯವರು ಮುಖ್ಯ ಚುನಾವಣಾ ಅಧಿಕಾರಿಯವರಿಗೆ ಸೋಮವಾರ ದೂರು ಸಲ್ಲಿಸಿದರು.
ಕೇಂದ್ರ ಸರ್ಕಾರದ ಜನಪರ ಯೋಜನೆಯನ್ನು ರಾಜ್ಯ ಸರ್ಕಾರವು ಸಂಬಂಧಪಟ್ಟ ಇಲಾಖೆ ಮುಖಾಂತರ ಅನುಷ್ಠಾನಗೊಳಿಸುವುದಷ್ಟೆ ಕೆಲಸ. ಆದರೆ, ಅದಕ್ಕೊಂದು ಹೊಸ ಹೆಸರಿಟ್ಟು ರಾಜ್ಯ ಸರ್ಕಾರದ ಯೋಜನೆಯನ್ನಾಗಿ ಮಾರ್ಪಡಿಸುವ ಪರಮಧಿಕಾರವನ್ನು ಸಿಎಂ ಚಲಾಯಿಸಿದ್ದಾರೆ. ಹಾಗೆಯೇ ವಿಧಾನಪರಿಷತ್ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಹನ್ನೊಂದು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು `ಪ್ರಕಾಶ ಪಥ' ಎಂಬ ಯೋಜನೆಯನ್ನು ಘೋಷಿಸಿದ್ದರು. ಮಾರುಕಟ್ಟೆಯಲ್ಲಿ 400 ರೂಪಾಯಿಗೆ ಸಿಗುವ ಎಲ್‍ಇಡಿ ಬಲ್ಬ್‍ಗಳನ್ನು ಕೇವಲ 10 ರೂಪಾಯಿಗೆ ಸಾರ್ವಜನಿಕರಿಗೆ ವಿತರಿಸುವ ಯೋಜನೆ ಇದು. ಈ ಯೋಜನೆಯನ್ವಯ ದೆಹಲಿಯಲ್ಲಿ 34 ಲಕ್ಷ, ಆಂಧ್ರದಲ್ಲಿ 65 ಲಕ್ಷ, ಉತ್ತರ ಪ್ರದೇಶದಲ್ಲಿ 34 ಲಕ್ಷ ಬಲ್ಬ್‍ಗಳನ್ನು ಈಗಾಗಲೇ ವಿತರಣೆ ಮಾಡಿದ್ದು, ಪ್ರತಿ ದಿನ 75 ಸಾವಿರ ಯೂನಿಟ್ ವಿದ್ಯುತ್ ಉಳಿತಾಯವಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಯನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಯೋಜನೆಯನ್ನಾಗಿ ಪರಿವರ್ತಿಸಿ, ಪರಿಷತ್ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ಹುನ್ನಾರ ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. 11 ತಿಂಗಳ ಹಿಂದೆಯೇ ಆರಂಭಗೊಂಡ ಈ ಯೋಜನೆಯನ್ನು ಈಗ ಚುನಾವಣೆ ನೀತಿ
ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಹೊಸಬೆಳಕು ಎಂಬ ಹೆಸರಿನಲ್ಲಿ ಆರಂಭಿಸುವ ಹಿಂದಿನ ಉದ್ದೇಶ ಮತದಾರರ ಓಲೈಕೆ ಎಂಬುದು ಸ್ಪಷ್ಟವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


