ಸದನದಲ್ಲಿ ನಡೆದಿದ್ದೇನು?
ಮೇಲ್ಮನೆಯಲ್ಲಿ ಕಲಾಪ ನಡೆದ ಬಹುತೇಕ ಸಮಯ ನಗರ ಪಾಲಿಕೆ ತಿದ್ದುಪಡಿ ವಿಧೇಯಕಗಳ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ವಿಧೇಯಕವನ್ನು ಮತಕ್ಕೆ ಹಾಕಲು ಯತ್ನಿಸಿದ್ದಾಗ ಮತ್ತೆ ಸದನ ಚರ್ಚೆ ಕಡೆ...

ಬೆಂಗಳೂರು: ಮೇಲ್ಮನೆಯಲ್ಲಿ ಕಲಾಪ ನಡೆದ ಬಹುತೇಕ ಸಮಯ ನಗರ ಪಾಲಿಕೆ ತಿದ್ದುಪಡಿ ವಿಧೇಯಕಗಳ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ವಿಧೇಯಕವನ್ನು ಮತಕ್ಕೆ ಹಾಕಲು ಯತ್ನಿಸಿದ್ದಾಗ ಮತ್ತೆ ಸದನ ಚರ್ಚೆ ಕಡೆ ತಿರುಗಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಚರ್ಚೆ ವೇಳೆ ಸದಸ್ಯರು ಎತ್ತಿದ್ದ ಪ್ರಶ್ನೆ ಮತ್ತು ಆಕ್ಷೇಪಗಳಿಗೆ ಉತ್ತರಿಸುವ ನೆಪದಲ್ಲಿ ಪ್ರತಿಪಕ್ಷಗಳನ್ನು ತಮ್ಮದೇ ಧಾಟಿಯ ಮಾತಿನಿಂದ ತಿವಿದರು. ಬಿಜೆಪಿ ಆಡಳಿತವಿದ್ದಾಗಲೇ ಬಿಬಿಎಂಪಿ ವಿಭಜನೆ ಮತ್ತು ಪುನರಚನೆ ಪ್ರಸ್ತಾಪವಾಗಿತ್ತು.
ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‍ಕುಮಾರ್ ಅವರೇ ವಿಭಜನೆ ಮಂತ್ರ ಪಠಿಸಿದ್ದರು ಎಂದು ಸ್ಥಳ ದಿನಾಂಕ ಮತ್ತು ಸಂದರ್ಭಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳನ್ನು ಚುಚ್ಚಿದರು. ಹಾಗೆಯೇ ವಿಭಜನೆ ಬೇಕು ಅಥವಾ ಬೇಡ ಎಂದು ಹೇಳುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಜೆಡಿಎಸ್‍ಗೆ ಕೂಡ ಪ್ರತಿಟೀಕೆಗಳ ಬಿಸಿ ಮುಟ್ಟಿಸಿದರು.
ನಂತರ ಸಭಾಪತಿ ಶಂಕರಮೂರ್ತಿ ವಿಧೇಯಕವನ್ನು ಮತಕ್ಕೆ ಹಾಕಲು ಯತ್ನಿಸಿದಾಗ ಪ್ರತಿಪಕ್ಷ ನಾಯಕ ಈಶ್ವರಪ್ಪ ಹಾಗೂ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, ಈ ವಿಧೇಯಕದ ಬಗ್ಗೆ ಈವರೆಗೂ ಚರ್ಚಿಸಲಾಗಿದೆ. ಆದರೆ ಬಿಬಿಎಂಪಿ ವಿಭಜನೆ ಬೇಕೇ? ಬೇಡವೇ ಎಂದು ಈಗಲೇ ತೀರ್ಮಾನಿಸುವುದು ಬೇಡ. ಅದರ ಬದಲು ವಿಭಜನೆ ಕುರಿತು ಸದನದಪರಿಶೀಲನಾ ಸಮಿತಿ ರಚಿಸಬೇಕೆಂದು ಪ್ರಸ್ತಾಪಿಸಿದರು.
ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿನಂತಿಸಿದರು. ಸದನದ ನಿಯಮಗಳನ್ನು ಪ್ರಸ್ತಾಪಿಸಿ ವಿಧಾನಸಭೆಯಲ್ಲಿ ರಚಿತವಾಗಿರುವ ಈ ವಿಧೇಯಕಕ್ಕೆ ಪರಿಷತ್ತಿನಲ್ಲಿ ಸಮಿತಿ ರಚಿಸಲು ಅವಕಾಶವಿಲ್ಲ ಎಂದು ವಾದಿಸಿದರು. ಆದರೆ ಸಭಾಪತಿ ಶಂಕರಮೂರ್ತಿ ಜಯಚಂದ್ರ ಅವರ ವಾದವನ್ನು ತಿರಸ್ಕರಿಸಿದರು.
ಆಗ ಸದಸ್ಯರು ಆಪೇಕ್ಷೆಯಂತೆ ಪರಿಶೀಲನಾ ಸಮಿತಿ ರಚಿಸಬೇಕೆನ್ನುವ ನಿರ್ಣಯವನ್ನು ಧ್ವನಿ ಮತಕ್ಕೆ ಹಾಕಲಾಯಿತು. ಬಿಜೆಪಿ ಮತ್ತು ಜೆಡಿಎಸ್‍ನ ಎಲ್ಲಾ ಸದಸ್ಯರು ಪ್ರಸ್ತಾಪದ ಪರಿವಾಗಿ ಮತಹಾಕಿದರು. ನಂತರ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸದನ ಪರಿಶೀಲನಾ ಸಮಿತಿ ರಚಿಸಬೇಕೆನ್ನುವ ಪ್ರಸ್ತಾಪಕ್ಕೆ ಅಂಗೀಕಾರ ಪಡೆದು ಸದನದವನ್ನು ಅರ್ನಿಷ್ಟ ಅವಧಿಗೆ
ಮುಂದೂಡಲಾಯಿತು.
ಪರಿಶೀಲನಾ ಸಮಿತಿ ಹೇಗಿರುತ್ತೆ ?
- ಸದ್ಯ ಪರಿಷತ್ತಿನಲ್ಲಿ ರಚಿಸಲಾಗಿರುವ ಪರಿಶೀಲನಾ ಸಮಿತಿಯಲ್ಲಿ ಕನಿಷ್ಠ 10 ಮಂದಿ ಸದಸ್ಯರು ಇರುತ್ತಾರೆ.
- ಇದರಲ್ಲಿ ಪಕ್ಷಗಳು ಹೊಂದಿರುವ ಸದಸ್ಯ ಬಲದ ಮೇಲೆ ಸದಸ್ಯರ ಸಂಖ್ಯೆ ತೀರ್ಮಾನವಾಗಲಿದೆ.
- ಈಗಿನ ಸದಸ್ಯ ಬಲದ ಆಧಾರದಲ್ಲಿ ಕಾಂಗ್ರೆಸ್(28), ಬಿಜೆಪಿ(30)ಯ ತಲಾ ನಾಲ್ಕು, ಜೆಡಿಎಸ್(13)ನಿಂದ ಇಬ್ಬರು ಸದಸ್ಯರಿರುತ್ತಾರೆ.
- ಸಮಿತಿ ಅಧ್ಯಕ್ಷರನ್ನು ಸರ್ಕಾರ ಆಯ್ಕೆ ಮಾಡಲಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೇ ಸಮಿತಿ ಅಧ್ಯಕ್ಷರಾಗಬೇಕೆಂದು ಸರ್ಕಾರ ಬಯಸುವ ಸಾಧ್ಯತೆ ಇದೆ.
- ಪರಿಷತ್‍ನ ಹಿರಿಯ ಸದಸ್ಯರೇ ಅಧ್ಯಕ್ಷರಾಗಬೇಕೆಂದು ಬಿಜೆಪಿವಾದಿಸುತ್ತಿದೆ. ಆದ್ದರಿಂದ ಈ ವಿಚಾರನ್ನು ಸಭಾಪತಿ ಶಂಕರಮೂರ್ತಿ ತೀರ್ಮಾನಿಸುವವರಿದ್ದಾರೆ.
- ಸಮಿತಿ ನಗರ ಪಾಲಿಕೆ ವಿಧೇಯಕದಲ್ಲಿ ಪ್ರಸ್ತಾಪಿಸಿರುವ ಅಂಶಗಳು, ಬಿಬಿಎಂಪಿ ವಿಭಜನೆ ವಿಚಾರಗಳನ್ನು ಪರಿಶೀಲಿಸಿ 3 ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕು.
- ಹಾಗೊಂದು ವೇಳೆ ವರದಿ ಸಲ್ಲಿಕೆಗೆ ಸಮಿತಿಗೆ ಸಮಯ ಸಾಲದಿದ್ದರೆ ಸದನದಲ್ಲಿ ಪ್ರಸ್ತಾಪಿಸಿ ಅವಧಿ ವಿಸ್ತರಿಸಿಕೊಳ್ಳುವುದಕ್ಕೂ ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


