ಬಿಬಿಎಂಪಿ ಮೂರಾಬಟ್ಟೆ ;ಮಾತಿನ ಸಮರ ಸಿಕ್ಕಾಪಟ್ಟೆ!
ಬಿಬಿಎಂಪಿ ಮೂರಾಬಟ್ಟೆ' ವಿಚಾರ ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡುವಿನ ಜಟಾಪಟಿಗೆ ಕಾರಣವಾಗಿದೆ. ಈ ಇಬ್ಬರು ...

ಬೆಂಗಳೂರು: `ಬಿಬಿಎಂಪಿ ಮೂರಾಬಟ್ಟೆ' ವಿಚಾರ ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡುವಿನ ಜಟಾಪಟಿಗೆ ಕಾರಣವಾಗಿದೆ. ಈ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಪರ-ವಿರೋಧ ಹೇಳಿಕೆಗಳ ಮೂಲಕ ಮಾತಿನ ಸಮರ ನಡೆಸಿ, ಅಚ್ಚರಿ ಮೂಡಿಸಿದರು. ಅಲ್ಲದೆ, ಇವರಿಬ್ಬರ ಮಾತಿನ ಕದನಕ್ಕೆ ಮೇಯರ್ ಶಾಂತಕುಮಾರಿ ಕೂಡಾ ಸಾಥ್ ನೀಡಿದರು. ಬಿಬಿಎಂಪಿ ವಿಭಜನೆಯನ್ನು ವಿರೋಧಿಸಿ ಮಾತನಾಡಿದ ಸಚಿವ ಅನಂತಕುಮಾರ್, `ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು. ಚುನಾವಣೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿ ಸಕಾಲಕ್ಕೆ ನಡೆಸಬೇಕು' ಎಂದು ಆಗ್ರಹಿಸಿದರು. ಆದರೆ, ಅನಂತಕುಮಾರ್ ಅವರ ಈ ಹೇಳಿಕೆಗೆ ತಣ್ಣಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, `ಪಾಲಿಕೆಯ ಇಂದಿನ ದುಸ್ಥಿತಿಗೆ ಬಿಜೆಪಿ ಆಡಳಿತವೇ ಕಾರಣ' ಎಂದು ಪ್ರತ್ಯುತ್ತರ ನವೀಕೃತಗೊಂಡ ಪುರಭವನ ಉದ್ಘಾಟನಾ ಸಮಾರಂಭ ವೇದಿಕೆ ಈ ಜಟಾಪಟಿಗೆ ಸಾಕ್ಷಿಯಾಯಿತು. ಪಾಲಿಕೆ ವಿಭಜನೆಯಜತೆಗೆ ಚುನಾವಣೆಯ ಮೀಸಲು ಪಟ್ಟಿ ಮತ್ತು ಸಕಾಲಕ್ಕೆ ಚುನಾವಣೆ ನಡೆಸುವ ವಿಚಾರದಲ್ಲೂ ಮಾತಿನ ಸಮರ ನಡೆದವು. `ಹಿರಿಯರಾದ ನೀವು, ಪಾಲಿಕೆಯಲ್ಲಿರುವ ಬಿಜೆಪಿ ಆಡಳಿತಕ್ಕೆ ಲಗಾಮು ಹಾಕಿದ್ದರೆ, ಬೆಂಗಳೂರಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಪಾಲಿಕೆ ಇವತ್ತು ಸಾಲದ ಸುಳಿಗೆ ಸಿಕ್ಕಿದೆ. ಹೊಸದಾಗಿ ಸೇರ್ಪಡೆಯಾದ ಬಡಾವಣೆಗಳಿಗೆ ಇಂದಿಗೂ ಸರಿಯಾಗಿ ನೀರು,
ಬೀದಿ ದೀಪ ನೀಡಲಾಗಿಲ್ಲ. ಕಸ ವಿಲೇವಾರಿ ಮಾಡುವವರಿಗೆ ಹಣ ನೀಡಲಾಗುತ್ತಿಲ್ಲ. ಈ ಕಾರಣದಿಂದಲೇ ಪಾಲಿಕೆ ವಿಭಜನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ' ಎಂದು ರಾಮಲಿಂಗಾರೆಡ್ಡಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಈ ಮಧ್ಯೆ ಸಚಿವರ ನಡುವಿನ ಮಾತಿನ ಜಟಾಪಟಿಗೆ ಮೇಯರ್ ಶಾಂತ ಕುಮಾರಿ ಕೂಡ ಪ್ರವೇಶ ಮಾಡಿದರು. ಕಾರ್ಯಕ್ರಮದ ನಂತರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಮತ್ತು ಮೇಯರ್ ಶಾಂತ ಕುಮಾರಿ, ತಮ್ಮ ನಿಲುವುಗಳನ್ನು ಸಮರ್ಥಿಸಿಕೊಂಡರು. ಸಚಿವ ಅನಂತ ಕುಮಾರ್ ಮಾತ್ರ ದೆಹಲಿಗೆ ತೆರಳುವ ತರಾತುರಿಯಲ್ಲಿ ಮಾ ಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದೇನು?
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿಗೆ ಐತಿಹಾಸಿಕ ಹಿನ್ನೆಲೆಯಿದೆ. ಇದು ಅಖಂಡವಾಗಿಯೇ ಉಳಿಯಬೇಕು. ಬಿಬಿಎಂಪಿ ವಿಭಜನೆ ಮಾಡುವುದು ಸರಿಯಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು. ಮುಖ್ಯಮಂತ್ರಿ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಸಂದರ್ಭದಲ್ಲೂ ಈ ವಿಷಯ ಪ್ರಸ್ತಾಪಿಸಿದ್ದೇನೆ.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಇದಕ್ಕೆ ಹೆಚ್ಚು ಗಮನ ಹರಿಸಬೇಕು.ಕಾಲಕ್ಕೆ ಸರಿಯಾಗಿ ಪಾಲಿಕೆ ಚುನಾವಣೆಯನ್ನು ನಡೆಸಲು ಸರ್ಕಾರ ಕ್ರಮ ಕೈಗೊಂಡರೆಪ್ರಜಾತಂತ್ರ ವ್ಯವಸ್ಥೆಗೂ ಅರ್ಥಬರಲಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತ್ಯುತ್ತರವೇನು?
ಬೆಂಗಳೂರು ವಿಭಜನೆ ಬೇಡವೆಂದರೆ, ಅದು ಒಂದಾಗಿದ್ದು ಯಾವಾಗ? ಬಿಬಿಎಂಪಿ ವಿಭಜನೆಗೆ ವಿರೋಧ ಮಾಡುತ್ತಿರುವವರು ಈ ಹಿಂದೆಯೇ ಯೋಚಿಸಬೇಕಿತ್ತು.
ಬಿಜೆಪಿ-ಜೆಡಿಎಸ್ ಸರ್ಕಾರ ಬೃಹತ್ ಬೆಂಗಳೂರು ಪಾಲಿಕೆ ಮಾಡಲು ಹೊರಟಾಗ ನಾವು ಬೇಡ ಎಂದಿದ್ದೆವು. ಆದರೆ ಅದನ್ನು ಯಾರು ಕೇಳಲಿಲ್ಲ. ಇವತ್ತು ಆ ಹಳ್ಳಿಗಳಲ್ಲಿನ ಸ್ಥಿತಿ
ಶೋಚನೀಯವಾಗಿದೆ. ಅಲ್ಲಿಗೆ ಕನಿಷ್ಠ ಸೌಲಭ್ಯ ಇಲ್ಲ. ಹಿರಿಯರಾದ ನೀವು (ಅನಂತಕುಮಾರ್) ಪಾಲಿಕೆ ಆಡಳಿತಕ್ಕೆ ಲಗಾಮು ಹಾಕಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ. ವಿಭಜನೆಯಿಂದಾದರೂ ಅಲ್ಲಿಗೆ ಮೂಲಸೌಲಭ್ಯ ಕೊಡಲು ಸಾಧ್ಯವಾಗಬಹುದು ಎನ್ನುವುದು ಸರ್ಕಾರದ ಉದ್ದೇಶ. ಮೀಸಲನ್ನು ರೋಸ್ಟರ್ ಪ್ರಕಾರ ಮಾಡಿದ್ದೇವೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಹೀಗೆ ಮಾಡಿತ್ತು. ಸಕಾಲಕ್ಕೆ ಚುನಾವಣೆ ನಡೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.
ಮೇಯರ್ ಶಾಂತಕುಮಾರಿ ವಾದವೇನು?
ಬಿಬಿಎಂಪಿ ಸಾಲದ ಸುಳಿಗೆ ಸಿಲುಕಿರುವುದಕ್ಕೆ ನಾವು ಕಾರಣವಲ್ಲ. ಹತ್ತು ವರ್ಷದಿಂದ ಬೆಳೆದು ಬಂದ ಸಾಲದ ಮೊತ್ತ ಒಟ್ಟು ಸೇರಿ ಈಗ ರು. ಸಾವಿರ ಕೋಟಿ ದಾಟಿದೆ.
ಆದರೆ, ತೆರಿಗೆ ಸಂಗ್ರಹದಲ್ಲಿ ಪಾಲಿಕೆ ಹಿಂದೆ ಬಿದ್ದಿಲ್ಲ. ರು. 1300 ಕೋಟಿ ತೆರಿಗೆ ಸಂಗ್ರಹವಾಗಿದೆ. ಪಾಲಿಕೆ ಎಲ್ಲ ಸದಸ್ಯರು ಸೇರಿ ಇದನ್ನು ಮಾಡಿದ್ದಾರೆ. ಸುಮ್ಮನೆ ಪಾಲಿಕೆ ಆಡಳಿತದ ಮೇಲೆ ದೂರುವುದು ಸರಿಯಲ್ಲ. ವಿನಾ ಕಾರಣ ಪಾಲಿಕೆ ವಿಭಜನೆ ಮಾಡುವುದು ಸರಿಯಲ್ಲ. ದುರುದ್ದೇಶ ಪೂರ್ವಕವಾಗಿ ಮೀಸಲು ಪ್ರಕಟಿಸಲಾಗಿದೆ. ಗೈಡ್‍ಲೈನ್ ಪ್ರಕಾರ ಮಾಡಿಲ್ಲ.
ವಿಭಜನೆ ಬೇಡ: ದೇವೇಗೌಡ
ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಭಾಗ ಮಾಡಲು ಬಿಡುವುದಿಲ್ಲ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಎಂ ವಿರುದ್ಧ ಕಿಡಿಕಾರಿದ್ದಾರೆ. ನಗರವನ್ನು ಭಾಗ ಮಾಡದೆ ಉತ್ತಮ ಆಡಳಿತ ನೀಡಲು ಅವಕಾಶ ಕಲ್ಪಿಸಬೇಕು. ಚುನಾವಣೆ ಮುಂದೂಡುಲು ಸರ್ಕಾರ ಸುಗ್ರೀವಾಜ್ಞೆ ಮೊರೆ ಹೋಗುತ್ತಿದೆ. ಇದನ್ನು ವಿರೋಧಿಸಿ ಪ್ರತಿಭಟಿಸಲಾಗುವುದು ಎಂದಿದ್ದಾರೆ. ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿಯಲ್ಲಿ ತೆರಳಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ
ಸಿಎಂ ಸಿದ್ದು - ರಾಜ್ಯಪಾಲರ ಮಹತ್ವದ ಭೇಟಿ
ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿರುವ ಸಿಎಂ ಸಿದ್ದರಾಮಯ್ಯ, ಬಿಬಿಎಂಪಿ ವಿಭಜನೆ, ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ. ಬುಧವಾರ ಸಾಯಂಕಾಲ ರಾಜಭವನಕ್ಕೆ ತೆರಳಿದ ಸಿದ್ದರಾಮಯ್ಯ, ರಾಜ್ಯಪಾಲರ ಜತೆ ಚರ್ಚಿಸಿದರು. ಬಿಬಿಎಂಪಿ ವಿಭಜನೆ ಸಂಬಂಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿರುವ ವಿಚಾರವನ್ನು ರಾಜ್ಯಪಾಲರ ಮುಂದಿಟ್ಟಿರುವ ಸಿಎಂ, ಸರ್ಕಾರ ಆರಂಬಿsಸಿರುವ ಪ್ರಕ್ರಿಯೆ ಬಗ್ಗೆ ಪೀಠಿಕೆ ಹಾಕಿದ್ದಾರೆ. ಉನ್ನತ ಮೂಲಗಳ ಪ್ರಕಾರ ಗುರುವಾರ ಬೆಳಗ್ಗೆ ಸಿಎಂ ಅವರು ಮತ್ತೆ ರಾಜ್ಯಪಾಲರನ್ನ ಭೇಟಿಯಾಗಲಿದ್ದು, ಅ„ಕೃತವಾಗಿ ಸುಗ್ರೀವಾಜ್ಞೆಗೆ ಸಂಬಂಧಪಟ್ಟ ಪ್ರಸ್ತಾವನೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


